Advertisement

ಜಾಹೀರಾತು ದರ ಹೆಚ್ಚಿಸಿ: ಕೇಂದ್ರಕ್ಕೆ ಮನವಿ

12:02 AM Apr 26, 2020 | Sriram |

ನವದೆಹಲಿ: ಕೋವಿಡ್-19 ವೈರಸ್‌ ವ್ಯಾಪಿಸುವಿಕೆಯು ಕಳೆದ ಎರಡು ತಿಂಗಳಿಂದ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವ ಕಾರಣ, ಈ ಅವಧಿಯಲ್ಲಿ ಮುದ್ರಣ ಮಾಧ್ಯಮವು ಸುಮಾರು 4,500 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ. ಹೀಗಾಗಿ, ಕೇಂದ್ರ ಸರ್ಕಾರವು ಕೂಡಲೇ ಎಲ್ಲ ಪತ್ರಿಕಾ ಸಂಸ್ಥೆಗಳಿಗೆ 2 ವರ್ಷಗಳ ತೆರಿಗೆ ರಜೆ ಘೋಷಿಸಬೇಕು ಹಾಗೂ ಸರ್ಕಾರದ ಜಾಹೀರಾತಿನ ದರವನ್ನು ಹೆಚ್ಚಳ ಮಾಡಬೇಕು ಎಂದು ಇಂಡಿಯನ್‌ ನ್ಯೂಸ್‌ ಪೇಪರ್‌ ಸೊಸೈಟಿ (ಐಎನ್‌ಎಸ್‌)ಮನವಿ ಮಾಡಿದೆ.

Advertisement

ಕೇಂದ್ರ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ರವಿ ಮಿತ್ತಲ್‌ ಅವರಿಗೆ ಈ ಕುರಿತು ಪತ್ರ ಬರೆದಿರುವ ಐಎನ್‌ಎಸ್‌ ಅಧ್ಯಕ್ಷ ಶೈಲೇಶ್‌ ಗುಪ್ತಾ, ಪತ್ರಿಕೆಗಳಿಗೆ ನೀಡಲಾದ ಜಾಹೀರಾತುಗಳ ಬಾಕಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ಬ್ಯೂರೋ ಆಫ್ ಔಟ್‌ ರೀಚ್‌ ಆ್ಯಂಡ್‌ ಕಮ್ಯೂನಿಕೇಷನ್‌(ಬಿಒಸಿ)ಗೆ ಸೂಚನೆ ನೀಡಬೇಕು ಹಾಗೂ ವಿವಿಧ ರಾಜ್ಯ ಸರ್ಕಾರಗಳಿಗೂ ಈ ಕುರಿತು ಸಲಹೆ ನೀಡಬೇಕು ಎಂದೂ ಕೋರಿಕೊಂಡಿದ್ದಾರೆ.

ಕೋರಿಕೆಗಳೇನು?: ದೇಶದ ಮುದ್ರಣ ಮಾಧ್ಯಮಗಳಿಗೆ ಜಾಹೀರಾತಿನಿಂದಾಗಲೀ, ಪ್ರಸರಣದಿಂದಾಗಲೇ ಸದ್ಯಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಹೀಗಾಗಿ, ಎಲ್ಲ ಪತ್ರಿಕಾ ಸಂಸ್ಥೆಗಳಿಗೆ ಸರ್ಕಾರವು 2 ವರ್ಷಗಳ ತೆರಿಗೆ ರಜೆ ಘೋಷಿಸಬೇಕು, ಬಿಒಸಿ ಜಾಹೀರಾತು ದರವನ್ನು ಶೇ.50ರಷ್ಟು ಹೆಚ್ಚಳ ಮಾಡಬೇಕು, ಜಾಹೀರಾತಿನ ಬಾಕಿಯನ್ನು ತಕ್ಷಣ ಪಾವತಿಸಬೇಕು ಮತ್ತು ಮುದ್ರಣ ಮಾಧ್ಯಮಗಳಿಗೆ ಮೀಸಲಾದ ಬಜೆಟ್‌ ನ ವೆಚ್ಚವನ್ನು ಶೇ.100ರಷ್ಟು ಏರಿಸಬೇಕು ಎಂದು ಪತ್ರದಲ್ಲಿ ಗುಪ್ತಾ ಕೋರಿದ್ದಾರೆ.

ಪತ್ರಿಕೆಗಳ ಸದ್ಯದ ಸ್ಥಿತಿ ಬಗ್ಗೆ ಪತ್ರದಲ್ಲಿ ಬೆಳಕು ಚೆಲ್ಲಿರುವ ಅವರು, ಆರ್ಥಿಕ ಚಟುವಟಿಕೆಯು ಪತನಗೊಂಡಿರುವ ಕಾರಣ, ಖಾಸಗಿ ಕಂಪನಿಗಳಿಂದಲೂ ಜಾಹೀರಾತುಗಳು ಬರುವ ನಿರೀಕ್ಷೆಯಿಲ್ಲ. ಮುಂದಿನ 6-7 ತಿಂಗಳವರೆಗೆ ಮುದ್ರಣ ಮಾಧ್ಯಮಗಳು ಇದೇ ರೀತಿ ನಷ್ಟದಲ್ಲಿ ಮುಂದುವರಿಯಬೇಕಾಗುತ್ತದೆ. ಸರ್ಕಾರವು ಕೂಡಲೇ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ, ಪತ್ರಿಕೆಗಳು ಮುಂದಿನ 7 ತಿಂಗಳಲ್ಲೇ
ಸುಮಾರು 12 ರಿಂದ 15 ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಗುತ್ತದೆ. ಇದು ಸುಮಾರು 30 ಲಕ್ಷ ನೌಕರರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದೂ ಉಲ್ಲೇಖೀಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next