Advertisement
ಈ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನಲ್ಲೂ ವಿವಿಧ ಕಾರ್ಯಕ್ರಮಗಳು ನಡೆದವು. ಈ ಪೈಕಿ ಮಂಜೇಶ್ವರ ಹೊಸಂಗಡಿಯ ದುರ್ಗಿಪಳ್ಳದಲ್ಲಿ ನನೆಗುದಿಗೆ ಬಿದ್ದಿದ್ದ ಕೇರಳ ತುಳು ಅಕಾಡೆಮಿಯ ತುಳು ಭವನಕ್ಕೆ ನಡೆಸಲಾದ ಶಿಲಾನ್ಯಾಸವೂ ಒಂದು. ಅಲ್ಲದೆ ಕಾಸ್ರೋಡ್ ಕೆಫೆ ಸಹಿತ ಇತರ ಯೋಜನೆಗಳೂ ಒಳಗೊಂಡಿದ್ದವು.
Related Articles
Advertisement
ಪೊದೆ ಗಿಡಗಳಿಂದ ಆವೃತವಾದ ಕಟ್ಟಡದಲ್ಲಿ ಮದ್ಯದ ಬಾಟಲಿಗಳು, ಗಾಜಿನ ಚೂರು, ಒಡೆದ ಹೆಂಚು, ಕೆಡವಲ್ಪಟ್ಟ ಕಿಟಕಿ ಕಲ್ಲುಗಳು ಕಂಡು ಬರುತ್ತಿವೆ. ಮಳೆಗಾಲದ ವೇಳೆ ಮಳೆ ನೀರು ಶೇಖರವಾಗಿ ನೆಲ ಪಾಚಿ ಕಟ್ಟದ ಸ್ಥಿತಿಯಲ್ಲಿದೆ ಯಕ್ಷ ಮಂದಿರ. ಶ್ವಾನಗಳು ಕೂಡಾ ಹಗಲು ವಿಶ್ರಾಂತಿ ಪಡೆಯುವ ಸ್ಥಳವಾಗಿ ಮಾರ್ಪಟ್ಟಿದ್ದು, ಮಾಡಿಗೆ ಹೊದೆಸಲಾದ ಕಬ್ಬಿಣದ ಸರಳುಗಳ ಇಂದೋ ನಾಳೆಯೋ ಧರಾಶಾಯಿಯಾಗುವ ದುಸ್ಥಿತಿಯಿದೆ.
2009-10 ರಲ್ಲಿ ಅಂದಿನ ಎಡರಂಗ ಸರಕಾರದ ಅಧಿಕಾರದ ವೇಳೆ ಸುಮಾರು 20 ಲಕ್ಷ ರೂ. ಅನುದಾನದ ಮೂಲಕ ಯಕ್ಷ ರಸಿಕ, ಯಕ್ಷಗಾನ ಪಿತಾಮಹ ಪಾರ್ತಿಸುಬ್ಬನ ಸ್ಮರಣಾರ್ಥ ಯಕ್ಷಗಾನ ಕಲಾಕೇಂದ್ರ ಸ್ಥಾಪನೆ, ಆ ಮೂಲಕ ಯುವ ಕಲಾವಿದರನ್ನು ಮಹತ್ತರ ಕಲೆಯತ್ತ ಆಕರ್ಷಿಸಿ, ಕಲೆಯನ್ನು ಪ್ರವರ್ಧಿಸುವ ಯೋಜನೆಯನ್ನು ರೂಪಿಸಲಾಗಿತ್ತು.
ಕುಂಬಳೆ-ಮುಜಂಗಾವು ಪಾರ್ಥಸಾರಥಿ ದೇವಸ್ಥಾನ ಪರಿಸರದ ಮುಂಭಾಗದಲ್ಲಿರುವ ವಿಶಾಲವಾದ ಪ್ರದೇಶದಲ್ಲಿ ಕಲಾಕೇಂದ್ರ ಸ್ಥಾಪನೆಯ ಸ್ಥಳವೂ ನಿಶ್ಚಯಿಸಲ್ಪಟ್ಟು ಕಾಮಗಾರಿ ಭರದಿಂದ ಸಾಗಿತ್ತು. ಅಂದಿನ ಶಾಸಕರ ನಿಧಿಯಿಂದ(ಮಂಜೇಶ್ವರ ಮತ್ತು ಆಂಗ್ಲೋ ಇಂಡಿಯನ್) ಸುಮಾರು 15 ಲಕ್ಷ ರುಪಾಯಿಗಳ ಧನಸಹಾಯವು ದೊರೆತಿತ್ತು. ಕಲಾಕೇಂದ್ರದ 90 ಶೇ. ಕಾಮಗಾರಿಯು ಬಹಳ ಹಿಂದೆಯೇ ಪೂರ್ಣಗೊಂಡಿತ್ತು. ನೆಲಕ್ಕೆ ಟೆ„ಲ್ಸ್ ಹೊದಿಕೆ, ಕಲಾವಿದರಿಗೆ ವೇಷ ಬದಲಿಸುವ ಕೊಠಡಿಗಳು ಪೂರ್ಣಗೊಂಡಿದ್ದರೂ, ಕ ಲಾಕೇಂದ್ರ ಉದ್ಘಾಟನೆಯಾಗದೆ, ಸಕಲ ನಿರ್ಲಕ್ಷಕ್ಕೆ ಒಳಪಟ್ಟ ಕಾರಣ ಯೋಜನೆ ಸಾಕಾರಗೊಳ್ಳದೆ ಸ್ತಬ್ದವಾಗಿರುವುದು ಈ ಭಾಗದ ಯಕ್ಷ ಕಲಾರಸಿಕರನ್ನು ಬಹಳ ನೋಯಿಸುತ್ತಿದೆ.
ಸ್ಮಾರಕ ಯೋಜನೆಗೆ ರೂಪುಗೊಂಡಿದ್ದ ಸಮಿತಿ 5 ಸೆಂಟ್ಸ್ ಸ್ಥಳವನ್ನು ಖರೀದಿಸಿ, ಅಚ್ಚುಕಟ್ಟಾಗಿ ಮುಂದುವರಿದಿದ್ದ ಯೋಜನೆ ಇಂದು ನನೆಗುದಿಗೆ ಬಿದ್ದಿದೆ. ಅಪೂರ್ಣವಾದ ಸ್ಮಾರಕವು ಪಡ್ಡೆ ಹುಡುಗರ, ಕಿಡಿಗೇಡಿಗಳ ಆಡೊಂಬಲವಾಗಿದೆ. ಪ್ರಸ್ತುತ ಸಮಿತಿ ಯೋಜನೆ ಸಾಕಾರದ ಬಗ್ಗೆ ಕಾಳಜಿ ವಹಿಸಿದಂತಿಲ್ಲ.
ಸಮಿತಿಯ ಕಾಲಾವಧಿ ಮುಗಿದರೂ ಹೊಸ ಸಮಿತಿ ಸದಸ್ಯರ ಆಯ್ಕೆಯಾಗಲಿ ನಡೆದಿಲ್ಲ. ಆದಷ್ಟು ಬೇಗ ಹೊಸ ಸಮಿತಿ ರೂಪುಗೊಂಡು ಕಾಮಗಾರಿ ಪೂರ್ಣಗೊಳಿಸಿ, ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಕೆಲಸ ನಡೆಯಬೇಕಿದೆ. ಯಕ್ಷ ಪಿತಾಮಹ ಪಾರ್ತಿಸುಬ್ಬನಿಗೆ ತನ್ನ ತಾಯ್ನೆಲದಲ್ಲಿ ಭವ್ಯವಾದ ಸ್ಮಾರಕ ತೆಲೆಯೆತ್ತಿ ನಿಲ್ಲುವಂತೆ ಇನ್ನಾದರೂ ಪ್ರಯತ್ನಿಸಿ ಯಕ್ಷಗಾನ ಸ್ಮಾರಕವನ್ನು ಕಲಾಕೇಂದ್ರವನ್ನು ಪುನರ್ಜೀವಿತಗೊಳಿಸಬೇಕು.