ಸುಬ್ರಹ್ಮಣ್ಯ: ಏಳು ವರ್ಷಗಳಲ್ಲಿ ಗಣನೀಯ ಏರಿಕೆ ಕಂಡು 100 ಕೋಟಿ ರೂ. ತಲುಪುವ ನಿರೀಕ್ಷೆಯಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸಾಲಿನ ವಾರ್ಷಿಕ ಆದಾಯ 92.09 ಕೋ.ರೂ.ಗೆ ಇಳಿದಿದೆ. ಆದರೂ ಮುಜರಾಯಿ ದೇಗುಲಗಳ ಪೈಕಿ ಅತಿ ಶ್ರೀಮಂತ ಪಟ್ಟವನ್ನು ಉಳಿಸಿಕೊಂಡಿದೆ.
ಕಳೆದ ವರ್ಷ 95.92 ಕೋ.ರೂ. ಸಂಗ್ರಹವಾಗಿತ್ತು. ಈ ಬಾರಿ ಆದಾಯದಲ್ಲಿ ಸುಮಾರು 3.83 ಕೋ.ರೂ. ಕುಸಿತವಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಣ ಮೀಸಲಿಟ್ಟಿದ್ದರಿಂದ ಠೇವಣಿ ಹಣಕ್ಕೆ ಬಡ್ಡಿ ಸಿಗದೆ ಇರುವುದು, ಶಿರಾಡಿ ಘಾಟಿ ರಸ್ತೆ 2ನೇ ಹಂತದ ಅಭಿವೃದ್ಧಿ ಮತ್ತು ಪ್ರಾಕೃತಿಕ ಅನಾಹುತಗಳಿಂದ ಸಂಚಾರ ವ್ಯತ್ಯಯಗೊಂಡು ಯಾತ್ರಾರ್ಥಿಗಳ ಕೊರತೆ ಆದಾಯ ಕುಸಿತಕ್ಕೆ ಮುಖ್ಯ ಕಾರಣ.
ಈ ಬಾರಿ ಸರ್ಪಸಂಸ್ಕಾರ ಹರಕೆ, ಬ್ರಹ್ಮರಥ – ಆಶ್ಲೇಷಾ ಬಲಿ ಸೇವೆಗಳ ಜತೆಗೆ ತುಲಾಭಾರ, ಶೇಷಸೇವೆ, ಪಂಚಾಮೃತ, ಮಹಾಭಿಷೇಕ ಇತ್ಯಾದಿ ಸೇವೆ ಏರಿಕೆಯಾಗಿತ್ತು. ಹರಕೆ, ಸೇವೆಗಳು, ಕಾಣಿಕೆ ಹುಂಡಿ, ಛತ್ರ ಮತ್ತು ಕಟ್ಟಡಗಳ ಬಾಡಿಗೆ ಮತ್ತು ಕೃಷಿ ಮುಖ್ಯ ಆದಾಯ ಮೂಲಗಳು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 180 ಕೋ.ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಅಭಿವೃದ್ಧಿಗೆ 68 ಕೋ.ರೂ. ಹಣವನ್ನು ಲೋಕೋಪಯೋಗಿ ಇಲಾಖೆಯಲ್ಲಿ ಠೇವಣಿ ಇರಿಸಲಾಗಿದೆ. ಇದು ಸೇರಿದಂತೆ ಭಕ್ತರ ಅನುಕೂಲತೆಗಾಗಿ 73 ಕೋ.ರೂ. ಅನ್ನು ಆಡಳಿತ ಮಂಡಳಿ ಠೇವಣಿಯಾಗಿ ಹೊಂದಿದೆ. ಈ ಹಣಕ್ಕೆ ಬಡ್ಡಿ ದೊರಕುತ್ತಿದ್ದರೆ ವಾರ್ಷಿಕ ಆದಾಯದಲ್ಲಿ ಹೆಚ್ಚಳವಾಗುತ್ತಿತ್ತು.
ಸಂಪರ್ಕ ಕಡಿತ ಪರಿಣಾಮ
ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಅನಂತರ ಭಕ್ತರ ಹಿತದೃಷ್ಟಿಯಿಂದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ರಸ್ತೆ ಸಂಪರ್ಕ ಕಡಿತ ಆದಾಯದ ಮೇಲೆ ಪರಿಣಾಮ ಬೀರಿದೆ.
-ನಿತ್ಯಾನಂದ ಮುಂಡೋಡಿ, ಕುಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ