Advertisement

ಬಿಪಿಎಲ್‌ ಕಾರ್ಡ್‌ಗೆ ಆದಾಯ ದೃಢೀಕರಣ ಪತ್ರ ಸಾಕು: ಖಾದರ್‌

06:35 AM Feb 16, 2018 | |

ಬೆಂಗಳೂರು:ಹೊಸದಾಗಿ ಬಿಪಿಎಲ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವವರು ಆದಾಯ ದೃಢೀಕರಣ ಪತ್ರ ಸಲ್ಲಿಸಿದರೆ ಸಾಕು ಸ್ಥಳದಲ್ಲೇ ಪಡಿತರ ಚೀಟಿ ದೊರೆಯಲಿದೆ.

Advertisement

ಬಿಪಿಎಲ್‌ ಕಾರ್ಡ್‌ಗಾಗಿ ಹಲವಾರು ಪ್ರಮಾಣಪತ್ರ ಹೊಂದಿಸಲು ಸಾರ್ವಜನಿಕರಿಗೆ ಕಷ್ಟವಾಗುತ್ತಿರುದೆ ಎಂಬ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಕುಟುಂಬದ ಆದಾಯ ದೃಢೀಕರಣ ಪತ್ರ ಆಹಾರ ನಿರೀಕ್ಷಕರಿಗೆ ಸಲ್ಲಿಸಿದರೆ ಸ್ಥಳದಲ್ಲೇ ಪಡಿತರ ಚೀಟಿ ವಿತರಿಸುವ ಯೋಜನೆಗೆ ಫೆ. 20 ರಂದು ಚಾಲನೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಸರಳ ಹಾಗೂ ತ್ವರಿತಗೊಳಿಸುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ  ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.

1.20ಲಕ್ಷ ರೂ.ಮಿತಿಯ ಆದಾಯ ದೃಢೀಕರಣ ಪತ್ರ ನೀಡಿದರೆ ಆಹಾರ ನಿರೀಕ್ಷಕರು ಸ್ಥಳದಲ್ಲೆ ಪಡಿತರ ಚೀಟಿ ನೀಡಲಿದ್ದಾರೆ. ಬೇರೆ ಯಾವುದೇ ದಾಖಲೆಯ ಅಗತ್ಯ ಇರುವುದಿಲ್ಲ ಎಂದು ತಿಳಿಸಿದರು.

Advertisement

ಈಗಾಗಲೇ ಅರ್ಜಿ ಸಲ್ಲಿಸಿರುವವರು ಹೊಸ ಪಡಿತರ ಚೀಟಿಗೆ ಅರ್ಜಿಯ ಪ್ರತಿ  ನೀಡಬೇಕು. ಪಡಿತರ ಚೀಟಿ ವಿತರಣೆ ನಂತರ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಅನರ್ಹರು ಎಂಬುದು ದೃಢಪಟ್ಟರೆ ಅಂತಹವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ನಿರೀಕ್ಷಕರಿಗೆ ಲಾಪ್‌ಟಾಪ್‌
ತ್ವರಿತಗತಿಯಲ್ಲಿ ಹೊಸ ಪಡಿತರ ಚೀಟಿ ವಿತರಣೆ ಮಾಡುವ ಉದ್ದೇಶದಿಂದ ಆಹಾರ ನಿರೀಕ್ಷಕರಿಗೆ ಲ್ಯಾಪ್‌ಟಾಪ್‌ ಮತ್ತು ಕಲರ್‌ ಪ್ರಿಂಟರ್‌ ನೀಡಲಾಗುವುದು. ಅಲ್ಲದೆ, ಗುತ್ತಿಗೆ ಆಧಾರದ ಮೇಲೆ ಓರ್ವ ಡೇಟಾ ಎಂಟ್ರಿ ಆಪರೇಟರ್‌ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಹೊಸ ಪಡಿತರ ಚೀಟಿಗೆ ಎರಡು ಹಂತಗಳಲ್ಲಿ ಒಟ್ಟು 15ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಆಪೈಕಿ ಈಗಾಗಲೇ 13.50ಲಕ್ಷ ಕಾರ್ಡ್‌ಗಳನ್ನು ಅಂಚೆ ಮೂಲಕ ರವಾನಿಸಲಾಗಿದೆ. ಉಳಿದ ಕಾರ್ಡುಗಳು ಮುದ್ರಣವಾಗಿದ್ದು, ಆಧಾರ್‌ ವಿಳಾಸ ತಾಳೆಯಾಗದೆ ವಾಪಸ್‌ ಬಂದಿವೆ. ಆ ಕಾರ್ಡುಗಳನ್ನು ಗ್ರಾಮ ಪಂಚಾಯಿತಿ ನೆರವು ಪಡೆದು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.

ಮೂರನೆ ಹಂತದಲ್ಲಿ ಹೊಸ ಪಡಿತರ ಚೀಟಿಗೆ 8ಲಕ್ಷ ಅರ್ಜಿಗಳು ಬಂದಿದ್ದು, ಫೆ.20ರಿಂದ 1.20 ಲಕ್ಷ ರೂ.ಮಿತಿಯೊಳಗೆ ಆದಾಯ ದೃಢೀಕರಣ ಸಲ್ಲಿಸಿದವರಿಗೆ ಸ್ಥಳದಲ್ಲೇ  ಪಡಿತರ ಚೀಟಿ ನೀಡಲಾಗುವುದು ಎಂದು ಹೇಳಿದರು.

“ಮುಖ್ಯಮಂತ್ರಿ ಅನಿಲ ಭಾಗ್ಯ’ ಯೋಜನೆಯನ್ನು ಶೀಘ್ರದಲ್ಲೇ  ಜಾರಿಗೊಳಿಸಲಾಗುವುದು. ಫ‌ಲಾನುಭವಿಗಳಿಗೆ ಉಚಿತವಾಗಿ ಸ್ಟೌವ್‌, ಜತೆಗೆ ಡಿಮ್ಯಾಂಡ್‌ ಡ್ರಾಫ್ಟ್ (ಡಿಡಿ) ನೀಡಲಿದ್ದು, ಅದನ್ನು ಅಡುಗೆ ಅನಿಲ ವಿತರಕರಿಗೆ ನೀಡದ 3 ದಿನಗಳೊಳಗೆ ಅನಿಲ ಸಂಪರ್ಕ ಸಿಗಲಿದೆ.  ಈ ಯೋಜನೆಗೆ ರಾಜ್ಯ ಸರಕಾರ ಹಣ ನೀಡುತ್ತಿದೆ. ಆದರೆ, ಹಣ ಮತ್ತು ಫ‌ಲಾನುಭವಿಗಳ ಪಟ್ಟಿಯನ್ನು ಅನಿಲ ವಿತರಕ ಕಂಪೆನಿಗಳಿಗೆ ನೀಡಲು ಕೇಂದ್ರ ವಿಧಿಸಿದ್ದ ಷರತ್ತಿಗೆ ನಮ್ಮ ವಿರೋಧವಿದೆ. ರಾಜ್ಯದಲ್ಲಿ  ಪೆಟ್ರೋಲ್‌ ಹಾಗೂ ಅನಿಲ ಬಂಕ್‌ಗಳು ಇನ್ನು ಮುಂದೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆಯಬೇಕು. ಈ ಸಂಬಂಧ ಕಾನೂನಿಗೆ ಅಗತ್ಯ ತಿದ್ದುಪಡಿ ತರಲಾಗುವುದು.
– ಯು.ಟಿ. ಖಾದರ್‌

Advertisement

Udayavani is now on Telegram. Click here to join our channel and stay updated with the latest news.

Next