Advertisement

ಸೃಜನ ಮನಸುಗಳ ಸಂಚಲನ

03:50 AM Mar 17, 2017 | Team Udayavani |

ಒಂದಿಷ್ಟು ಚಿಂತಕರು, ಒಂದಿಷ್ಟು ಉತ್ಸಾಹೀ ಮನಸುಗಳು ಸಂಗಮಗೊಂಡರೆ ಸೃಜನಶೀಲ ಸಂವೇದನೆಗಳು ಚಲನಶೀಲಗೊಂಡು ಕಲಾ ಸ್ಪುರಣಕ್ಕೆ ಕಾರಣವಾದೀತು. ಮಂಗಳೂರಿನ ರಾಮಕೃಷ್ಣ ಮಠದ ಜಿತಕಾಮಾನಂದಜೀ ಮಹಾರಾಜ ಹಾಗೂ ಏಕಗಮ್ಯಾನಂದ ಮಹಾರಾಜ್‌ ಅವರ ಚಿಂತನೆಗಳು ಸದಾ ಸಮಾಜವನ್ನು ಅರಳಿಸುವ, ಬೆಳಗಿಸುವ ಧ್ಯೇಯಗಳನ್ನೇ ಹೊಂದಿರುವ ಕಾರಣ ಸೃಜನಶೀಲ ಚಟುವಟಿಕೆಗಳಿಗೆ ನಿರಂತರ ನೀರೆರೆಯುವ ಕಾಯಕಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಸ್ವತ್ಛ ಭಾರತದ ಪರಿಕಲ್ಪನೆಯಲ್ಲಿ ಸ್ವತ್ಛ ಮಂಗಳೂರು ಎಂಬ ಯೋಜನಾ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಡೀ ದೇಶವೇ ಮಂಗಳೂರಿನತ್ತ ಗಮನಿಸುವಂತೆ ಸ್ವತ್ಛತಾ ಕಾರ್ಯಕ್ರಮಗಳನ್ನು ಸಂಘಟಿಸಿರುತ್ತಾರೆ. ಈ ಸ್ವತ್ಛತಾ ಅಭಿಯಾನದ 200ನೇ ಕಾರ್ಯಕ್ರಮದ ಅಂಗವಾಗಿ ರಾಮಕೃಷ್ಣ ಮಠದಲ್ಲಿ ಸೃಜನ ಎಂಬ ಕಲಾ ಶಿಬಿರವನ್ನು ಆಯೋಜಿಸಲಾಗಿತ್ತು. ಯುವ ಸೃಜನಶೀಲ ಮನಸ್ಸುಗಳ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿರುವ ಕಲಾತ್ಮಕ ದೀಪವನ್ನು ಬೆಳಗಿಸಿ ಬಣ್ಣದ ತೋರಣವನ್ನು ಕಟ್ಟಿದ್ದು ಈ ಶಿಬಿರ.

Advertisement

ಹತ್ತು ಸಂಪನ್ಮೂಲ ವ್ಯಕ್ತಿಗಳಿಂದ ಹತ್ತು ಕಲಾಪ್ರಕಾರಗಳನ್ನು ಬೋಧಿಸಿ ಮಕ್ಕಳ ಕಲಾ ಪ್ರತಿಭೆಗಳನ್ನು ಶೋಧಿಸಿರುವ ಕಾರಣ ಯುವ ಪ್ರತಿಭೆಗಳ ಸಂಚಲನಕ್ಕೆ ಈ ಶಿಬಿರ ಕಾರಣವಾಗಿತ್ತು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರಕಾಶಕ್ಕೆ ಬರಲು ಹಾಗೂ ಅವುಗಳ ವಿಕಸನಕ್ಕೆ ಇಂತಹ ಶಿಬಿರಗಳು ಪೂರಕವಾಗುತ್ತವೆ. ಸಂಪನ್ಮೂಲ ವ್ಯಕ್ತಿಗಳು ಒಂದೊಂದು ಕಲಾ ಪ್ರಕಾರಗಳಲ್ಲಿ ಪರಿಣತರಾಗಿರುವುದರಿಂದ ಅವರಿಂದ ಪಡೆದಂತಹ ತರಬೇತಿಯು ಮಕ್ಕಳಿಗೆ ಅನುಕೂಲವಾಗಿ ಭವಿಷ್ಯದಲ್ಲಿ ಅದನ್ನು ವಿಸ್ತರಿಸಲು ಅವಕಾಶಗಳು ಲಭ್ಯವಾಗುತ್ತವೆ. ಜಲವರ್ಣ, ಕಾರ್ಟೂನ್‌, ಚಾರ್ಕೋಲ್‌, ವರ್ಲಿ, ಥರ್ಮೊಫೋಮ್‌ ಮುಖವಾಡ, ಆವೆಮಣ್ಣಿನ ಕಲಾಕೃತಿ, ಪೇಪರ್‌ ಕ್ರಾಫ್ಟ್, ಗಾಳಿಪಟ, ರೇಖಾಚಿತ್ರ, ಡಿಜಿಟಲ್‌ ಕಾರ್ಟೂನ್‌ ಮುಂತಾದ ಕಲಾ ಪ್ರಕಾರಗಳಲ್ಲಿ ಮಕ್ಕಳಿಗೆ ಪ್ರಾತ್ಯಕ್ಷಿಕೆ, ತರಬೇತಿ ನೀಡಿ ಮಕ್ಕಳಿಂದಲೇ ಕಲಾಕೃತಿಗಳನ್ನು ರಚಿಸಲಾಯಿತು. 

ದಯಾನಂದ್‌, ಪೆರ್ಮುದೆ ಮೋಹನ್‌ಕುಮಾರ್‌, ಜಾನ್‌ ಚಂದ್ರನ್‌, ಸುಧೀರ್‌ ಕಾವೂರ್‌, ಸಪ್ನಾ ನೊರೋನ್ಹ, ಸತೀಶ್‌ ರಾವ್‌, ಜೀವನ್‌ ಸಾಲಿಯಾನ್‌, ಪ್ರಾಣೇಶ್‌ ಕುದ್ರೋಳಿ, ವರ್ಣೋದರ್‌ ಮುಂತಾದ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿದ್ದು ಶಿಬಿರದ ಯಶಸ್ಸಿಗೆ ಸೂತ್ರಧಾರರಾಗಿದ್ದರು. ಕಲಾವಿದೆ ಲಲಿತಾ ಕಲ್ಕೂರ್‌ ಶಿಬಿರದ ಸಂಚಾಲಕರಾಗಿ ಶಿಬಿರದ ಯಶಸ್ಸಿಗೆ ವಿಶೇಷ ಕಾರಣಕರ್ತರಾದರು. ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್‌ಅವರು ಇಂತಹ ಹಲವಾರು ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇರುವುದರಿಂದ ಯುವ ಪ್ರತಿಭೆಗಳಿಗೆ ವಿಶೇಷ ವೇದಿಕೆಗಳು ರಾಮಕೃಷ್ಣ ಮಠದಲ್ಲಿ ಹುಟ್ಟಿಕೊಳ್ಳುತ್ತಿವೆ. ಸ್ವತ್ಛ ಮನಸ್ಸುಗಳು ಒಂದಾದರೆ ಉತ್ತಮ ಚಿಂತನೆಗಳು ಸಂಗಮವಾಗಿ ಇಡೀ ಸಮಾಜದ ಅಗೋಚರ ಕೊಳೆಯನ್ನು ಸ್ವತ್ಛಗೊಳಿಸಬಹುದೆಂಬುದಕ್ಕೆ ಸೃಜನ ಶಿಬಿರವು ನಿದರ್ಶನವಾಗಿತ್ತು.

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next