ರವೀಂದ್ರ ಕಲಬುರಗಿ, ರಾಜ್ಯ ಉಪಾಧ್ಯಕ್ಷರು, ನೇಕಾರರ ಸಮುದಾಯಗಳ ಒಕ್ಕೂಟ
ರೈತ ಪ್ರತಿಯೊಬ್ಬರಿಗೂ ಆಹಾರ ನೀಡಿದರೆ ನೇಕಾರ ಪ್ರತಿ ಮಾನವನ ಮಾನ ಕಾಪಾಡುವ ಬಟ್ಟೆ ತಯಾರಿಸುತ್ತಾನೆ. ರೈತ ಸಮುದಾಯಕ್ಕೆ ಸಿಗುವ ಪ್ರತಿಯೊಂದು ಸೌಲಭ್ಯ ನೇಕಾರರಿಗೂ ಸಿಗಬೇಕು.
ನೇಕಾರ ಸಮುದಾಯದಲ್ಲಿ 29 ಒಳ ಪಂಗಡಗಳಿವೆ. ಬಹುತೇಕ ಶೇ.50ರಷ್ಟು ಜನ ನೇಕಾರಿಕೆಯನ್ನೇ ಅವಲಂಬಿಸಿವೆ. ನೇಕಾರಿಕೆಯಲ್ಲಿ ಕೈಮಗ್ಗ, ವಿದ್ಯುತ್ ಚಾಲಿತ ನೇಕಾರಿಕೆ, ನಿಗಮಗಳ, ಸಹಕಾರ ಸಂಘಗಳಡಿ, ಶ್ರೀಮಂತ ನೇಕಾರ ಉದ್ದಿಮೆದಾರರ ಬಳಿ ದುಡಿಯುವ ನೇಕಾರರು ಇದ್ದಾರೆ. ನೇಕಾರಿಕೆಯಲ್ಲಿ ಎಲ್ಲಾ ಸಮಾಜ ಬಾಂಧವರು ಬರುತ್ತಾರೆ. ಇಲ್ಲಿ ವೃತ್ತಿನಿರತ ನೇಕಾರರು, ನೇಕಾರ ಸಮುದಾಯಗಳ ಅಭಿವೃದ್ಧಿಗೆ ಸರಕಾರ ಪ್ರತ್ಯೇಕ ಯೋಜನೆ ರೂಪಿಸಬೇಕು.
ರೈತರ ಪಂಪಸೆಟ್‌ಗಳಿಗೆ ನೀಡುವಂತೆ ನೇಕಾರರ ವಿದ್ಯುತ್ ಮಗ್ಗಗಳಿಗೂ ಉಚಿತ ವಿದ್ಯುತ್ ನೀಡಬೇಕು.
ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು.
ರೈತರಿಗೆ ಕೃಷಿ ಉಪಕರಣಗಳಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದ್ದು, ಅದೇ ಮಾದರಿಯಲ್ಲಿ ನೇಕಾರರ ನೇಯ್ಗೆ ಉಪಕರಣಗಳಿಗೆ ಶೇ.90ರಷ್ಟು ಸಹಾಯಧನ, ಕಾಲ ಕಾಲಕ್ಕೆ ಆಗುವ ಸಾಲ ಮನ್ನಾ ಸೌಲಭ್ಯ ದೊರೆಯಬೇಕು.
Related Articles
ಅಸಂಘಟಿತ ಮತ್ತು ಕೂಲಿ ಕಾರ್ಮಿಕರ ನೇಕಾರರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಿ ಇಲಾಖೆಯಿಂದ ದೊರೆಯುವ ಸೌಲಭ್ಯ ನೀಡಬೇಕು.
ಈಗಿರುವ ಕೈಮಗ್ಗ ನೇಕಾರರಿಗೆ ಕರ್ನಾಟಕ ನೇಕಾರರ ಅಭಿವೃದ್ಧಿ ನಿಗಮ ಮತ್ತು ವಿದ್ಯುತ್ ಚಾಲಿತ ನೇಕಾರರಿಗೆ ಜವಳಿ ಸಂಪನ್ಮೂಲ ಅಭಿವೃದ್ಧಿ ನಿಮಗ ಇವೆ. ಈ ಎರಡೂ ನಿಗಮಗಳು ನಷ್ಟದಲ್ಲಿವೆ. ಸರಕಾರ ಎಲ್ಲ ಇಲಾಖೆಗೆ ಈ ನಿಗಮದಡಿ ಉತ್ಪಾದಿಸುವ ಬಟ್ಟೆಗಳನ್ನು ಖರೀದಿ ಮಾಡಿ ನೌಕರರಿಗೆ ನೀಡಬೇಕು.
ನೇಕಾರ ಸಮುದಾಯದಡಿ ಒಟ್ಟು ನಾಲ್ಕು ನಿಗಮಗಳಿದ್ದು, ಸಿಲ್ಕ್ (ರೇಷ್ಮೆ) ಬೋರ್ಡ್, ಖಾದಿ ಬೋರ್ಡ್ ಸಹಿತ ನಾಲ್ಕು ನಿಗಮಗಳಿಗೆ ನೇಕಾರ ಸಮುದಾಯದ ಹಾಗೂ ನೇಕಾರ ಕಷ್ಟ ತಿಳಿದ-ಅನುಭವ ಇರುವ ಸಮಾಜದ ವ್ಯಕ್ತಿಗಳನ್ನೇ ನೇಮಕ ಮಾಡಬೇಕು. ಆಗ ನಿಗಮ ಪುನಶ್ಚೇತನಗೊಳ್ಳಲು ಅನುಕೂಲವಾಗುತ್ತದೆ.
ನೇಕಾರಿಕೆಯಿಂದ ಹೊರಗುಳಿದ ಶೇ.50ಷ್ಟು ಒಳ ಪಂಡಗಳ ಜನರಿಗೆ ಅನುಕೂಲವಾಗಲು ನೇಕಾರ ಸಮುದಾಯಗಳ ಅಭಿವೃದ್ಧಿ ಅಥವಾ ದೇವರ ದಾಸಿಮಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ವೃತ್ತಿನಿರತರಲ್ಲದ ಸಮಾಜ ಬಾಂಧವರ ಸಮಗ್ರ ಅಭಿವೃದ್ಧಿಗೆ ಸರಕಾರ ಕ್ರಮ ಕೈಗೊಳ್ಳಬೇಕು.
ನೇಕಾರರಿಗೆ ಮಹಾರಾಷ್ಟ್ರದಲ್ಲಿ ಶೇ.2ರಷ್ಟು ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಇದೆ. ಅದೇ ರೀತಿ ರಾಜ್ಯದಲ್ಲೂ ಶೇ.5ರಷ್ಟು ನೇಕಾರ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸಬೇಕು.
ರಾಜಕೀಯವಾಗಿ ನೇಕಾರ ಸಮುದಾಯಗಳೇ ಬಲಾಡ್ಯ ಮತ್ತು ಹೆಚ್ಚು ಸಾಂದ್ರತೆ ಇರುವ (ಉದಾ: ದೊಡ್ಡಬಳ್ಳಾಪುರ, ಚಿಕ್ಕಪೇಟೆ, ಕೊಳ್ಳೆಗಾಲ, ತೇರದಾಳ, ಬಾದಾಮಿ, ಬಾಗಲಕೋಟೆ, ಹುನಗುಂದ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ರಾಮದುರ್ಗ, ಗದಗ, ರಾಣೆಬೆಣ್ಣೂರ, ಹೊಸದುರ್ಗ, ಮೊಳಕಾಲ್ಮೂರ ಇತರೆ) ಕ್ಷೇತ್ರಗಳಲ್ಲಿ ಸಮಾಜದ ಪ್ರಮುಖರಿಗೆ ರಾಜಕೀಯವಾಗಿ ಅವಕಾಶ ಕಲ್ಪಿಸಬೇಕು. ಇದರಿಂದ ಸದನದಲ್ಲಿ ನೇಕಾರರ ಕೂಗಿಗೆ ಬಲ ಬರುತ್ತದೆ.
ಯಾವುದೇ ಪಕ್ಷದ ಸರಕಾರ ಬರಲಿ, ಸಚಿವರ ಮತ್ತು ಜವಳಿ ಇಲಾಖೆಯ ಆಯುಕ್ತರು, ಎಂಡಿ ನೇಮಕದಲ್ಲಿ ಪ್ರಮುಖ ನೇಕಾರರ ಅನುಭವ, ಕಳಕಳಿ ಇರುವವರಿಗೆ ಆದ್ಯತೆ ಕೊಡಬೇಕು.