Advertisement

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

10:35 PM Jan 16, 2022 | Team Udayavani |

ಉಡುಪಿ: ಮಣಿಪಾಲ 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದಲ್ಲಿ ರವಿವಾರ ರಾತ್ರಿ ಹಡಿಲು ಗದ್ದೆ ಹಾಗೂ ಮೀಸಲು ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ‌ ನಂದಿಸಿದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Advertisement

ರಾಜೀವನಗರದ ಶ್ರೀನಿವಾಸ ಆಚಾರ್ಯ ಎಂಬವರ ಹಡಿಲು ಗದ್ದೆಯಲ್ಲಿ ಇಂದು ಸಂಜೆ 7.30ರ ಸುಮಾರಿಗೆ ಬೆಂಕಿ ಅವಘಡ ಉಂಟಾಗಿದ್ದು, ಅದು ಬಳಿಕ ಸಮೀಪದ ಮೀಸಲು ಅರಣ್ಯಕ್ಕೂ ವ್ಯಾಪಿಸಿದೆ ಎನ್ನಲಾಗಿದೆ.
ಬೆಂಕಿ ಅವಘಡದಿಂದ ಗದ್ದೆಯ ಹುಲ್ಲು ಸಂಪೂರ್ಣವಾಗಿ ಸುಟ್ಟಿದ್ದು, ಅರಣ್ಯ ಇಲಾಖೆಯ ಕೆಲವು ಅಕೇಶಿಯ ಮರಗಳು ಕೂಡ ಬೆಂಕಿಗೆ ಆಹುತಿಯಾಗಿದೆ.

ಆರಂಭದಲ್ಲಿ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿ‌ ಹತೋಟಿಗೆ ಬಾರದಿದ್ದಾಗ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಅದರಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಗದ್ದೆಯ ಸಮೀಪವೇ ಕೆಲವು ಮನೆಗಳಿದ್ದು, ಬೆಂಕಿಯ ಕೆನ್ನಾಲಿಗೆ ಆ ಮನೆಗಳಿಗೂ ವ್ಯಾಪಿಸುವ ಆತಂಕ ಎದುರಾಗಿತ್ತು. ಆದರೆ ಕ್ಲಪ್ತ ಸಮೀಪದಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.

ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸ್ಥಳೀಯರು ಸಹಕರಿಸಿದರು.

Advertisement

ಕಾರ್ಯಾಚರಣೆಯಲ್ಲಿ ಉಡುಪಿ ಅಗ್ನಿಶಾಮಕ ಠಾಣಾಧಿಕಾರಿ ಸತೀಶ್, ಪ್ರಮುಖ ಅಗ್ನಿಶಾಮಕದಾರರಾದ ಅಶ್ವಿನ್, ಸುನಿಲ್, ಚಾಲಕ ಶಂಕರ್, ಸಿಬ್ಬಂದಿ ವಿನಾಯಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಆಕಾಶ್, ಆದರ್ಶ್ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next