ಕುದೂರು: ರಸ್ತೆ ಬದಿಯಲ್ಲಿ ಕಾರಿನಲ್ಲಿ ಕಿತ್ತಾಡುತ್ತಿದ್ದ ಯುವಕರನ್ನು ಪ್ರಶ್ನೆ ಮಾಡಿದ ಸ್ಥಳೀಯರ ಮೇಲೆ, ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಯುವಕರನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಸೂರಪ್ಪನಹಳ್ಳಿ ಬಳಿ ಮಂಗಳೂರು ಮೂಲದ ಹಲ್ಲೆಕೋರರಿಗೆ ಗ್ರಾಮದ ಜನರೇ ಮರಕ್ಕೆ ಕಟ್ಟಿ ಹಾಕಿ, ತಕ್ಕ ಪಾಠ ಕಲಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ವಿವರ: ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಬರುವ ಸೂರಪ್ಪನ ಹಳ್ಳಿಯಲ್ಲಿ ಮಂಗಳೂರಿನ ಸುದರ್ಶನ್ ಪೈ ಮತ್ತು ಮಹಮದ್ ಅನ್ನೀಸ್ ಎಂಬುವರು ರಸ್ತೆ ಬದಿಯಲ್ಲಿ ಕಾರಿನಲ್ಲಿ ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದರು. ಆಗ ಸ್ಥಳೀಯರಾದ ರಾಮಾಂಜನೇಯ ಮತ್ತು ಮುದ್ದಹನುಮಯ್ಯ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದನ್ನು ಬಿಟ್ಟು ಬಂದು, ಕಿತ್ತಾಡುತ್ತಿದ್ದ ಈ ಯುವಕರನ್ನು ನೋಡಿ, ಏನಪ್ಪ ಇದು ? ಕಾರಲ್ಲಿ ಹೀಗೆ ಕಿತ್ತಾಡುತ್ತಿದ್ದೀರಾ..? ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದೇ ತಡ ಇಬ್ಬರು ಯುವಕರು ಸೂರಪ್ಪನಹಳ್ಳಿ ಅಪ್ಪ, ಮಕ್ಕಳಿಗೆ ಮಾರಕಾಸ್ತ್ರದಿಂದ ಬೆದರಿಸಿ ಹಲ್ಲೆ ಮಾಡಿದರು.
ಸೂರಪ್ಪನಹಳ್ಳಿ ಸ್ಥಳೀಯರಿಗೆ ಈ ವಿಚಾರ ತಿಳಿದು, ಸ್ಥಳಕ್ಕೆ ದೌಡಾ ಯಿಸಿದ್ದು, ಮಂಗಳೂರು ಮೂಲದ ಇಬ್ಬರು ಹಲ್ಲೆಕೋರರನ್ನು ಮರಕ್ಕೆ ಕಟ್ಟಿ ಹಾಕಿ, ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ. ಬಳಿಕ ಕುದೂರು ಪೊಲೀಸರಿಗೆ ಒಪ್ಪಿಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೀವ್ರವಾಗಿ ಗಾಯಗೊಂಡ ಸೂರಪ್ಪನಹಳ್ಳಿ ಅಪ್ಪ – ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೋಡಿಸಲಾಗುತ್ತಿದೆ. ಕಾರಲ್ಲಿ ಏಕ ಲಾಂಗು..?: ಕಾರಿನಲ್ಲಿ ಲಾಂಗಿಟ್ಟುಕೊಂಡು ಬಂದವರನ್ನು ಸುಮ್ಮನೆ ಬಿಡಬಾರದು. ಪೊಲೀಸರು ಈ ವಿಚಾರವಾಗಿ ಸಂಪೂರ್ಣ ತನಿಖೆ ನಡೆಸಬೇಕು, ಜೊತೆಗೆ ಏಕಾಏಕಿ ರೈತರ ಮೇಲೆ ಹಲ್ಲೆ ಮಾಡಿದವರ ಮೇಲೆ ರೌಡಿ ಶೀಟರ್ ಪ್ರಕರಣ ಹಾಕಿ ಕಾನೂನಿನ ಬಿಸಿಮುಟ್ಟಿಸಬೇಕು ಎಂದು ಸೂರಪ್ಪನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾರಿನಲ್ಲಿ ಲಾಂಗು ಇಟ್ಟುಕೊಂಡ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ. ಹೆದ್ದಾರಿ ಪೊಲೀಸರಿಗೆ ಕಟ್ಟುನಿಟ್ಟನಲ್ಲಿ ಗಸ್ತು ತಿರುಗುವಂತೆ ಸೂಚನೆ ನೀಡುತ್ತೇನೆ.
- ಮಂಜುನಾಥ್, ವೃತ್ತ ನಿರೀಕ್ಷಕ, ಮಾಗಡಿ