ಶಿವಮೊಗ್ಗ: ಪ್ರಸಿದ್ಧ ಮುಜರಾಯಿ ದೇವಸ್ಥಾನವೊಂದರ ಬೀಗ ಒಡೆದ ಕಳ್ಳರು 3 ಕೆ.ಜಿ. ಪಂಚಲೋಹದ ಬಂಗಾರ ಲೇಪಿತ ಆಭರಣಗಳನ್ನು ಕದ್ದೊಯ್ದಿದ್ದಾರೆ. ಆತುರದಲ್ಲಿ 200 ಗ್ರಾಂ ತೂಕದ ವರದ ಹಸ್ತವನ್ನು ಅಲ್ಲಿಯೆ ಬೀಳಿಸಿ ಕಳ್ಳರು ಪರಾರಿಯಾಗಿದ್ದಾರೆ.
ಶಿವಮೊಗ್ಗ ತಾಲೂಕು ಪಿಳ್ಳಂಗಿರಿಯಲ್ಲಿರುವ ಶ್ರೀ ವಂಕಟರಮಣ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಮುಖ್ಯ ದ್ವಾರ ಮತ್ತು ಮುಖ ಮಂಟಪದ ಬಾಗಿಲಿಗೆ ಹಾಕಲಾಗಿದ್ದ ಬೀಗಗಳನ್ನು ಒಡೆದು ಕಳ್ಳರು ಕೃತ್ಯ ಎಸಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಇಂಡಿಗೋ ವಿಮಾನದ ಟೈರ್ ಸ್ಫೋಟ
ಏನೇನೆಲ್ಲ ಕದ್ದೊಯ್ದಿದ್ದಾರೆ ಕಳ್ಳರು? :
ತಲಾ 500 ಗ್ರಾಂ ತೂಕದ ಕಿರೀಟ, ಶಂಖಹಸ್ತ, ಚಕ್ರಹಸ್ತ, 750 ಗ್ರಾಂ ತೂಕದ ದೇವರ ಮೇಲೆ ಹಾಕಿರುವ ಎದೆ ಕವಚ, ಎದೆ ಭಾಗದ ಲಕ್ಷ್ಮೀ ಪದಕ, ಸೂರ್ಯ ಕಟಾರ, ವರದ ಹಸ್ತ, ಕವಿ ಹಸ್ತ, ಸೊಂಟದ ಡಾಬು, ಎರಡು ದೇವರ ಪಾದಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಇವೆಲ್ಲವು ಬಂಗಾರ ಲೇಪಿತ ಪಂಚಲೋಹದಿಂದ ತಯಾರಿಸಲಾಗಿತ್ತು. ಇವುಗಳ ಅಂದಾಜು ಮೊತ್ತ 81 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳ್ಳರು ಪರಾರಿಯಾಗುವ ಸಂದರ್ಭ 200 ಗ್ರಾಂ ತೂಕದ ವರದ ಹಸ್ತವನ್ನು ಕೆಡವಿಕೊಂಡು ಹೋಗಿದ್ದಾರೆ. ಪರಿಶೀಲನೆ ವೇಳೆ ಇದು ಪತ್ತೆಯಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.