ಪಡುಬಿದ್ರಿ: ಎರ್ಮಾಳು ಬಡಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ. 23ರ ರಾತ್ರಿಯ ವೇಳೆ ಮಂಗಳೂರು ಕಡೆಯಿಂದ ಉಚ್ಚಿಲದತ್ತ ಹೋಗುತ್ತಿದ್ದ ಮೋಟಾರ್ ಬೈಕೊಂದು ಢಿಕ್ಕಿಯಾಗಿ ಪಾದಚಾರಿ ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ದೇವಪ್ಪ ಆಡಿನ(45) ಎಂಬವರು ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿಯ ವೇಳೆ ಸಾವನ್ನಪ್ಪಿದ್ದಾರೆ. ಮೃತ ದೇವಪ್ಪ ಆಡಿನ ಅವರು ರಾತ್ರಿಯೂಟ ಮುಗಿಸಿ ತಮ್ಮ ರೂಮಿಗೆ ವಾಪಾಸಾಗುತ್ತಿದ್ದ ವೇಳೆಗೆ ಈ ಅಪಘಾತವು ಸಂಭವಿಸಿದೆ.
ಘಟನೆಯಲ್ಲಿ ಬೈಕ್ ಸವಾರ ಅಶ್ರಫ್ ಮೊಹಮ್ಮದ್ ಸುಲೈಮಾನ್ (20) ಹಾಗೂ ಸಹ ಸವಾರ ಮಹಮ್ಮದ್ ಜುಬೈರ್ ಅಲಿ(19) ಕೂಡಾ ಗಾಯಗೊಂಡಿದ್ದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.