ಮಂಡ್ಯ: ವ್ಹೀಲ್‌ಚೇರ್ ಸಿಗದೆ ಚಿಕಿತ್ಸೆಗೆ ದಾಖಲಾಗಿದ್ದ ಮಗಳನ್ನು ಸ್ಕ್ಯಾನಿಂಗ್‌ಗೆ ತಂದೆಯೊಬ್ಬ ಎತ್ತಿಕೊಂಡು ಹೋದ ಘಟನೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಮನಗರದ ವ್ಯಕ್ತಿಯೊಬ್ಬ ತಮ್ಮ ಮಗಳನ್ನು ಕೆಲ ದಿನಗಳಿಂದ ಮಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಮಗಳಿಗೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಮೂಗಿನ ಮೂಲಕ ಆಕ್ಸಿಜನ್ ನೀಡಲಾಗುತ್ತಿತ್ತು. ಭಾನುವಾರ ಮಗಳಿಗೆ ಸ್ಕ್ಯಾನಿಂಗ್ ಮಾಡಿಸುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್ ಸಿಗದೆ ತಂದೆಯೇ ಮಗಳನ್ನು ಮಿಮ್ಸ್ ವಿಭಾಗದಲ್ಲಿರುವ ಸ್ಕ್ಯಾನಿಂಗ್ ಸೆಂಟರ್‌ಗೆ ಕೊಂಡೊಯ್ದ ಘಟನೆ ನಡೆಯಿತು.
ಹೆರಿಗೆ ವೇಳೆ ಶಿಶು ಜಾರಿ ನೆಲಕ್ಕೆ ಬಿದ್ದು ಸಾವನ್ನಪ್ಪಿತ್ತು: ಮಿಮ್ಸ್‌ನಲ್ಲಿ ಒಂದಲ್ಲ ಒಂದು ರೀತಿಯ ಅವ್ಯವಸ್ಥೆಯ ಘಟನೆಗಳು ನಡೆಯುತ್ತಲೇ ಬಂದಿದೆ. ಕಳೆದ ವರ್ಷ ಹೆರಿಗೆ ವಿಭಾಗದ ಮುಂದೆ ಗರ್ಭಿಣಿ ಮಹಿಳೆಯೊಬ್ಬಳು ಹೆರಿಗೆ ಆಗಿತ್ತು. ಆ ಸಂದರ್ಭದಲ್ಲಿ ಮಗು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು.
ಅಲ್ಲದೆ, ಹೆರಿಗೆ ವಿಭಾಗದಲ್ಲಿ ಹಾಸಿಗೆಗಳಿಲ್ಲದೆ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರನ್ನು ನೆಲದ ಮೇಲೆಯೇ ಮಲಗಿಸುವ ದೃಶ್ಯಗಳು ಕಂಡು ಬಂದಿದ್ದವು. ಈಗ ಇದೊಂದು ಘಟನೆ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.