ಕಾರವಾರ: ತನ್ನನ್ನು ಬಂಧಿಸಲು ಬಂದಿದ್ದಾರೆಂದು ತಿಳಿದು, ಕಾರ್ ನಲ್ಲಿ ಸಂಚರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿರುವ ಘಟನೆ ನಗರದಲ್ಲಿ ನಡೆದಿದೆ.
ಕಾರವಾರದ ಸಿದ್ದರದ ಸಂದೀಪ ಗಾಂವಕರ್ (40) ಎಂಬಾತ ತನ್ನ ತಾಯಿಗೆ ಹೊಡೆದು ಗಲಾಟೆ ಮಾಡಿಕೊಂಡಿದ್ದ. ಈ ಬಗ್ಗೆ ವಿಚಾರಿಸಲು ಪಿಎಸ್ಐ ರೇವಣ್ಣ ಸಿದ್ದಪ್ಪ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಕಳ್ಳತನ ಪ್ರಕರಣದಲ್ಲಿ ಬೇಕಾಗಿರುವುದನ್ನು ಗಮನಿಸಿದ ಪೊಲೀಸರು, ತಕ್ಷಣ ಆತನ ಬಂಧನಕ್ಕೆ ಮುಂದಾದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಆತ ಕಾರು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ. ತಕ್ಷಣ ಪೊಲೀಸರು ಆತನನ್ನು ಬೆನ್ನಟ್ಟಿ ಸೆರ ಹಿಡಿಯಲು ಮುಂದಾಗಿದರು .
ಈ ವೇಳೆ ಸಿಕ್ಕ ಸಿಕ್ಕ ವಾಹನಗಳು, ಕಾಪೌಂಡ್ಗೆ ಗುದ್ದಿ, ಎಲ್ಲೆಂದರಲ್ಲಿ ಕಾರ್ ಚಲಾಯಿಸಿ , ಆರೋಪಿ ಪರಾರಿಯಾಗಲು ಯತ್ನಿಸಿದ್ದ.ಆರೋಪಿ ಸಂದೀಪ ಗಾಂವಕರ್ನ ಅವಾಂತರಈ ಬಗ್ಗೆ ಮಾಹಿತಿ ಪಡೆದ ನಗರ ಠಾಣೆಯ ಪಿಎಸ್ಐ ಸಂತೋಷ್ ಕುಮಾರ್, ಗೀತಾಂಜಲಿ ಚಿತ್ರಮಂದಿರದ ಬಳಿ ಸಿಬ್ಬಂದಿಯೊಂದಿಗೆ ಬ್ಯಾರಿಕೇಡ್ ಹಾಕಿ ಆರೋಪಿಯನ್ನು ತಡೆಯಲು ಯತ್ನಿಸಿದ್ದರು. ಅಲ್ಲಿಯೂ ಕಾರು ನಿಲ್ಲಿಸದ ಆರೋಪಿ ಸಂದೀಪ್, ವೇಗವಾಗಿ ಕಾರ್ ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ .
ಆದರೂ ಬಿಡದ ಪೊಲೀಸರು ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದರು. ಕೊನೆಗೆ ಕಾಳಿ ನದಿ ತೀರದ ಖಾಪ್ರಿಯ ದೇವಸ್ಥಾನ ಹಿಂಬದಿಯಲ್ಲಿರುವ ಕೃಷ್ಣಾನಂದ ಜೋಶಿ ಮನೆಯ ಕಂಪೌಡ್ಗೆ ಕಾರು ಗುದ್ದಿದ ಆರೋಪಿ, ಅಲ್ಲಿಂದಲೂ ಓಡಿ ಹೋಗಲು ಯತ್ನಿಸಿದ್ದ. ಆದರೆ, ಈ ವೇಳೆ ಅಲರ್ಟ್ ಆದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಬಳಿಕ ಆತನ ಎರಡು ಕೈಗೆ ಹಗ್ಗ ಬಿಗಿದು ಠಾಣೆಗೆ ಒಯ್ದರು.
ಕಾರ್ ಕದ್ದ ಪ್ರಕರಣ ಇತ್ತು :
ಆರೋಪಿ ಸಂದೀಪ್ ಗಾಂವಕರ್ 2019ರಲ್ಲಿ ಬ್ರಾಹ್ಮಣ ಗಲ್ಲಿಯ ವಕೀಲ ವಿವೇಕ ಪ್ರಭು ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದಾಗ ಕಾರು ಕದ್ದು ತಲೆಮರೆಸಿಕೊಂಡಿದ್ದ. ಕಾರವಾರದಲ್ಲಿ ಇರುವ ಬಗ್ಗೆ ಬುಧುವಾರವ ಮಾಹಿತಿ ಪಡೆದ ಪೊಲೀಸರು , ಬಂಧಿಸಲು ಮುಂದಾದರು. ಲಾಕ್ಡೌನ್ ಆಗಿದ್ದರಿಂದ ರಸ್ತೆಯಲ್ಲಿ ಜನರ ಓಡಾಟವಿರಲಿಲ್ಲ. ಹಾಗಾಗಿ, ಆರೋಪಿ ಸಂದೀಪ ಅವಾಂತರದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.