Advertisement

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

04:37 PM Oct 26, 2021 | Team Udayavani |

ತಿಪಟೂರು: ಮಕ್ಕಳಿಗೆ ಶಿಕ್ಷಣ ನೀಡಿ ಆಸ್ತಿ ಮಾಡಿ ಅವರ ಭವಿಷ್ಯ ಹಸನು ಮಾಡಬೇಕೆನ್ನುವುದು ತಂದೆ ತಾಯಿ ಆಸೆ ಮತ್ತು ಆಕಾಂಕ್ಷೆಯಾಗಿರುತ್ತದೆ. ಆದರೆ, ಇಲ್ಲೊಬ್ಬ ತಂದೆ ಮಗನಿಗೆ ಆಸ್ತಿ ಕೊಡಬೇಕಾಗುತ್ತದೆ ಎಂದು ಹೆತ್ತ ಮಗನನ್ನೇ ಚಿತ್ರಹಿಂಸೆ ನೀಡಿ ಅವನಿಗೆ ಬುದ್ಧಿ ಭ್ರಮಣೆ ಎಂಬ ಪಟ್ಟಕಟ್ಟಿ ಗೃಹಬಂಧನದಲ್ಲಿರಿಸಿದ್ದ ಅಮಾನವೀಯ ಘಟನೆ ತಾಲೂಕಿನ ನೊಣವಿನಕೆರೆ ಹೋಬಳಿ ನೆಲ್ಲಿಕೆರೆ ಗ್ರಾಪಂ ವ್ಯಾಪ್ತಿಯ ಚಿಗ್ಗಾವಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ವಾಸಿ ಸೋಮಶೇಖರಯ್ಯ ಎಂಬುವವರ ಮಗ ಮಂಜುನಾಥ್‌ (23) ಗೃಹ ಬಂಧನಲ್ಲಿದ್ದ ವ್ಯಕ್ತಿ. ಇವರಿಗೆ ಒಬ್ಬ ಮಗ, ಒಬ್ಬ ಮಗಳಿದ್ದು, ಮಗಳನ್ನು ಬೆಂಗಳೂರಿನ ನಿವಾಸಿಗೆ ವಿವಾಹ ಮಾಡಲಾಗಿದೆ. ಮಗಳ ಮೇಲಿನ ವ್ಯಾಮೋಹ ಹೊಂದಿದ ಸೋಮಶೇಖರಯ್ಯನಿಗೆ ಮಗ ಮಜು ನಾಥ್‌ನನ್ನು ಕಂಡರೆ ಆಗುತ್ತಿರಲಿಲ್ಲವಂತೆ. ಇತ್ತೀಚಿಗೆ ಕೊಬ್ಬರಿ ಮಾರಿ ಬಂದ 3 ಲಕ್ಷ ರೂ. ಹಣವನ್ನು ಅಳಿಯನಿಗೆ ಕೊಡುತ್ತೇನೆಂದು ಹೇಳಿದ್ದಕ್ಕೆ ಮಗ ನನ್ನ ಖರ್ಚಿಗೆ ಎರಡು ಸಾವಿರ ಹಣ ಕೊಡು ಎಂದು ಕೇಳಿದ್ದಾನೆ.

ಅದಕ್ಕೆ ತಂದೆ ನೀನು ಹಣ ವ್ಯಯ ಮಾಡುತ್ತೀಯ. ನನ್ನ ಇಡೀ ಆಸ್ತಿಯನ್ನು ಮಗಳು – ಅಳಿಯನಿಗೆ ಕೊಡುತ್ತೇನೆ ಎಂದು ತಂದೆ- ತಾಯಿ ಸೇರಿಕೊಂಡು ಮಂಜುನಾಥ್‌ ಕಣ್ಣಿಗೆ ಖಾರದಪುಡಿ ಎರಚಿ, ದೊಣ್ಣೆಯಿಂದ ಬಡಿದು ಕಿವಿ ಮತ್ತು ಕೈ ಕಾಲುಗಳಿಗೆ ಗಾಯ ಮಾಡಿದ್ದಾರೆ. 3-4 ದಿನಗಳಿಂದ ಆಹಾರ ನೀಡದೆ ಸರಪಳಿಯಿಂದ ಕಟ್ಟಿಹಾಕಿದ್ದಾರೆ.

ಅವನ ಕೂಗಾಟ ಹೊರಕ್ಕೆ ಕೇಳಿಸಬಾರದೆಂದು ಕಿಟಕಿಗೆ ಕಬ್ಬಿಣದ ತಗಡನ್ನು ಹೊಡೆದಿದ್ದಾರೆನ್ನಲಾಗಿದ್ದು, ಅವನಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಎಲ್ಲರಿಗೂ ಹೇಳಿಕೊಂಡು ಬಂದಿದ್ದಾರೆ.

ಸ್ಥಳಕ್ಕೆ ನ್ಯಾಯಾಧೀಶರ ಭೇಟಿ: ಕಾನೂನು ಸೇವಾ ಸಮಿತಿಯಿಂದ ತಾಲೂಕಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಅದರಂತೆ ಅ.23ರಂದು ನೆಲ್ಲಿಕೆರೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಹಿರಿಯ ಸಿವಿಲ್‌ ನ್ಯಾಯಾಧೀಶ ನೂರುನ್ನೀಸಾ ಅವರಿಗೆ ಸಾರ್ವಜನಿಕರು ನೀಡಿದ ದೂರಿನನ್ವಯ ನ್ಯಾಯಾಧೀಶರು ಸ್ಥಳಕ್ಕೆ ಭೇಟಿ ನೀಡಿ, ಯುವಕನನ್ನು ಗೃಹ ಬಂಧನದಿಂದ ಮುಕ್ತಗೊಳಿಸಿದ್ದಾರೆ. ಸ್ವತಃ ನ್ಯಾಯಾಧೀಶರೇ ಯುವಕನನ್ನು ಸರಪಳಿಯಿಂದ ಬಿಡಿಸಿ ಹೊರಕರೆದುಕೊಂಡು ಬಂದು, ನೀರು ಕುಡಿಸಿ ಅವನಿಗಾಗುತ್ತಿದ್ದ ನೋವು, ಸಂಕಷ್ಟವನ್ನು ಕೇಳಿನಿನಗೆ ನ್ಯಾಯ ದೊರಕಿಸಿಕೊಡುತ್ತೇವೆಂದು ಭರವಸೆ ನೀಡಿ ತನಿಖೆ ಕೈಗೊಂಡರು.

Advertisement

ಯುವಕನ ತಂದೆಗೆ ತರಾಟೆ: ಕುಪಿತರಾದ ನ್ಯಾಯಧೀಶರು ಯುವಕನ ತಂದೆ ಸೋಮಶೇಖರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡು ಸ್ವಂತ ಮಗನನ್ನೇ ಬುದ್ಧಿ ಭ್ರಮಣೆ ಎಂದುಕಟ್ಟಿಹಾಕುವುದು ಯಾವ ನ್ಯಾಯ. ಮಾನವೀಯತೆ ಇಲ್ಲದ ನಿನ್ನ ವಿರುದ್ಧ ಕ್ರಮ ಜರುಗಿಸಬೇಕಿದೆಎಂದು ನೊಣವಿನಕೆರೆ ಎಎಸ್‌ಐ ಅವರನ್ನು ಸ್ಥಳಕ್ಕೆ ಕರೆಸಿ, ಸೋಮಶೇಖರಯ್ಯ ವಿರುದ್ಧ ಕೊಲೆ,ಬೆದರಿಕೆ 307 ಸೆಕ್ಷನ್‌ ಜಾರಿ ಮಾಡಿ, ಕಸ್ಟಡಿಗೆ ತೆಗೆದುಕೊಳ್ಳುವಂತೆ ತಿಳಿಸಿದರು. ನಂತರ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆಂದು ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next