ಚನ್ನಪಟ್ಟಣ: ಪ್ರೇಮಪ್ರಕರಣಕ್ಕೆ ಸಂಬಂಧಪಟ್ಟಂತೆ ಜಗಳ ನಡೆದು, ಓರ್ವನನ್ನು ಕುಡುಗೋಲಿನಿಂದ ಕೊಲೆ ಮಾಡಿ, ಇನ್ನೊಬ್ಬನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಲಾಳಾಘಟ್ಟ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮೂಲತಃ ಮಂಡ್ಯ ಮೂಲದವರಾದ ಆನಂದ್ ಕೊಲೆಯಾದವ. ಆತನ ಜತೆಯಲ್ಲಿ ಬಂದಿದ್ದ ಗುರು ಅಲಿಯಾಸ್ ರಾಘವೇಂದ್ರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನ ಮೋಳೆದೊಡ್ಡಿ ಗ್ರಾಮದ ಗುರು ಕೊಲೆ ಆರೋಪಿಯಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರು ಹಾಗೂ ಆತನ ತಂಗಿ ಮಂಗಳಮುಖೀ ಮೋಹನ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ವಾಸಿಗಳಾದ ರೌಡಿಶೀಟರ್‌ಗಳು ಎನ್ನಲಾಗಿರುವ ಆನಂದ್, ಗುರು ಅಲಿಯಾಸ್ ರಾಘವೇಂದ್ರ, ಆನಂದ್‌ನ ಪ್ರೇಯಸಿ ಮಂಗಳಮುಖಿ ಮೋಹನ ವಾಸವಾಗಿರುವ ಲಾಳಾಘಟ್ಟ ಗ್ರಾಮಕ್ಕೆ ಸೋಮವಾರ ಆಗಮಿಸಿದ್ದರು. ಇವರಿಬ್ಬರ ನಡುವೆ ಮನಸ್ತಾಪ ಎದುರಾಗಿದ್ದರಿಂದ ಮಾತುಕತೆ ನಡೆಸಲು ಬಂದಿದ್ದರೆನ್ನಲಾಗಿದ್ದು, ಈ ಸಂದರ್ಭದಲ್ಲಿ ಜಗಳ ನಡೆದು, ಮೋಹನ ಅಣ್ಣ ಗುರು ಇವರಿಬ್ಬರ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದು, ಗುರು ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.