ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಆ ಇಡೀ ಮಿನಿ ಟ್ಯಾಂಕ್ನಲ್ಲಿದ್ದ ನೀರನ್ನೆಲ್ಲಾ ಖಾಲಿ ಮಾಡಿ, ಶುದ್ಧೀಕರಿಸಿದ್ದಾರೆ ಎಂಬ ಆರೋಪ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ಕೇಳಿ ಬಂದಿದೆ.
ಈ ಆರೋಪದ ಮೇರೆಗೆ ತಾಲೂಕು ಆಡಳಿತದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಘಟನೆ ಸತ್ಯಾಸತ್ಯತೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ತಾಲೂಕು ಆಡಳಿತ ಪೂರ್ಣ ಮಾಹಿತಿ ಸಂಗ್ರಹಿಸಿದ ಬಳಕವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.
ಶುಕ್ರವಾರ ಹೆಗ್ಗೊಠಾರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವಕನ ಮದುವೆ ನೆರವೇರಿದ್ದು, ಆ ಮದುವೆಗೆ ಬಂದಿದ್ದವರ ಪೈಕಿ ಮಹಿಳೆಯೊಬ್ಬರು ಗ್ರಾಮದ ಲಿಂಗಾಯತರ ಬೀದಿಯಲ್ಲಿರುವ ಮಿನಿಟ್ಯಾಂಕ್ (ತೊಂಬೆ)ನಲ್ಲಿ ನೀರು ಕುಡಿದಿದ್ದಾರೆ. ಇದನ್ನು ನೋಡಿದ ಆ ಬೀದಿಯ ನಿವಾಸಿಯೊಬ್ಬರು, ಆಕೆಯನ್ನು ತರಾಟೆಗೆ ತೆಗೆದುಕೊಂಡು ಆ ಟ್ಯಾಂಕ್ನ ನಲ್ಲಿಗಳನ್ನೆಲ್ಲಾ ತೆರೆದು ನೀರು ಖಾಲಿ ಮಾಡಿದ್ದಾರೆ. ಅಲ್ಲದೇ ಶುದ್ಧೀಕರಿಸಿದ್ದಾರೆ ಎನ್ನಲಾಗಿದೆ.
ನಲ್ಲಿಗಳನ್ನೆಲ್ಲಾ ತೆರೆದು ನೀರು ಖಾಲಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಆಧಾರದಲ್ಲಿ ಘಟನೆ ಕುರಿತು ಆರೋಪ ಕೇಳಿ ಬಂದಿದೆ.
Related Articles
ಈ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ನಮ್ಮ ಕಂದಾಯ ನಿರೀಕ್ಷಕರಿಂದ ಮಾಹಿತಿ ಸಂಗ್ರಹಿಸಿ ವರದಿ ಪಡೆದಿದ್ದೇನೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಂಪೂರ್ಣ ವರದಿ ನೀಡುವಂತೆಯು ತಿಳಿಸಲಾಗುವುದು. ಗ್ರಾಮದಲ್ಲಿ ಎಲ್ಲ ಸಮುದಾಯದವರ ಸಭೆ ನಡೆಸಿ, ಒಂದು ವೇಳೆ ಅಸ್ಪೃಶ್ಯತೆ ಆಚರಣೆ ನಡೆದಿದ್ದರೆ, ತಪ್ಪು ಎಸಗಿದವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು. – ಬಸವರಾಜು, ತಹಶೀಲ್ದಾರ್