Advertisement

ಸಂಬಂಧಕ್ಕೆ ಅಡ್ಡಿಯಾದ ಪ್ರೇಯಸಿಯ ತಾಯಿಯನ್ನೇ  ಹತ್ಯೆಗೈದ ಪ್ರಿಯಕರ

02:40 PM May 07, 2022 | Team Udayavani |

ಬೆಂಗಳೂರು: ಪ್ರೇಯಸಿ ಜತೆ ಬದುಕಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಪ್ರಿಯಕರನೊಬ್ಬ ಪ್ರಿಯತಮೆಯ ತಾಯಿಯನ್ನು ಪ್ಲಾಸ್ಟಿಕ್‌ ವೈಯರ್‌ನಿಂದ ಕತ್ತು ಬಿಗಿದು ಕೊಲೆಗೈದಿರುವ ಘಟನೆ ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮೂಡಲಪಾಳ್ಯ ನಿವಾಸಿ ನಂಜಮ್ಮ (54) ಕೊಲೆಯಾದ ಮಹಿಳೆ. ಈ ಸಂಬಂಧ ಆಕೆಯ ಪುತ್ರಿಯ ಪ್ರಿಯಕರ ರಾಘವೇಂದ್ರ(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನಂಜಮ್ಮ ಮೂಡಲಪಾಳ್ಯದಲ್ಲಿ 7 ವರ್ಷಗಳಿಂದ ಒಬ್ಬರೇ ವಾಸವಾಗಿದ್ದು, ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಮತ್ತೂಂದೆಡೆ ಪುತ್ರಿ ಸುಧಾಗೆ 12 ವರ್ಷಗಳ ಹಿಂದೆ ಶಿವರಾಮೇಗೌಡ ಎಂಬಾತನ ಜತೆ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದ್ದು, ಆರು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

ಈ ವೇಳೆ ಪಟ್ಟೆಗಾರಪಾಳ್ಯದಲ್ಲಿ ಗ್ಯಾರೆಜ್‌ ನಡೆಸುತ್ತಿರುವ ರಾಘವೇಂದ್ರನ ಪರಿಚಯವಾಗಿದ್ದು, ಮದುವೆಯಾಗುವುದಾಗಿ ಆರೋಪಿ ಸುಧಾಗೆ ಹೇಳಿದ್ದ. ಈ ವಿಚಾರ ತಿಳಿದ ನಂಜಮ್ಮ, ಪುತ್ರಿ ಮತ್ತು ಆಕೆಯ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೆ ಮದುವೆ ಮಾಡುವುದಾಗಿ ಹೇಳಿದ್ದರು. ಹೀಗಾಗಿ ಸುಧಾ ಜತೆ ಆರೋಪಿ ಲಿವಿಂಗ್‌ ರಿಲೇಷನ್‌ಶಿಪ್‌ ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮಕ್ಕಳನ್ನು ಆರೋಪಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ, ಕೆಲ ತಿಂಗಳಿಂದ ಮದ್ಯ ವ್ಯಸನಿಯಾಗಿದ್ದು, ಮದ್ಯದ ಅಮಲಿನಲ್ಲಿ ಪ್ರೇಯಸಿ ಮತ್ತು ಆಕೆಯ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದ. ಅದರಿಂದ ಬೇಸತ್ತ ನಂಜಮ್ಮ ಹತ್ತು ದಿನಗಳ ಹಿಂದೆ ಮನೆಯಿಂದ ಹೊರಗೆ ಹಾಕಿದ್ದರು.

ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆ ಬಳಿ ಬಂದು ಗಲಾಟೆ ಮಾಡಿದ್ದು, ಮನೆಗೆ ಸೇರಿಸದಿರಲು ನೀನೆ ಕಾರಣ ಎಂದು ಗಲಾಟೆ ಮಾಡಿದ್ದಾನೆ. ಅಲ್ಲದೆ, ಹತ್ಯೆ ಮಾಡುವುದಾಗಿ ಎಚ್ಚರಿಕೆ ನೀಡಿ ಹೋಗಿದ್ದ. ಅನಂತರ ನಂಜಮ್ಮ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು. ತಡರಾತ್ರಿ ಮನೆಗೆ ಬಂದ ಆರೋಪಿ ನಂಜಮ್ಮನನ್ನು ಪ್ಲಾಸ್ಟಿಕ್‌ ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಮೈಮೇಲಿದ್ದ ಚಿನ್ನಾ ಭರಣ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

Advertisement

ಮೊಮ್ಮಗ ಬಂದಾಗ ಪ್ರಕರಣ ಬೆಳಕಿಗೆ : ಮೊಮ್ಮಗ ಶುಕ್ರವಾರ ಬೆಳಗ್ಗೆ ಅಜ್ಜಿಯ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಹಲವು ಬಾರಿ ತಟ್ಟಿದರೂ ಯಾರೂ ತೆಗೆದಿಲ್ಲ. ಬಳಿಕ ತಾಯಿಯನ್ನು ಕರೆಸಿ, ಅಡುಗೆ ಮನೆಯ ಕಿಟಕಿಯಿಂದ ನೋಡಿದಾಗ ನಂಜಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಕೆಲವೇ ಹೊತ್ತಿನಲ್ಲಿ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next