Advertisement

ಹಣಕಾಸು, ಅನೈತಿಕ ಸಂಬಂಧಕ್ಕೆ ಟಿಟಿ ಚಾಲಕನ ಕೊಲೆ

07:00 PM Oct 23, 2021 | Team Udayavani |

ಬೆಂಗಳೂರು: ಹಣಕಾಸು ಮತ್ತು ಅನೈತಿಕ ಸಂಬಂಧ ವಿಚಾರಕ್ಕೆ ಪರಿಚಯಸ್ಥರೇ ಟೆಂಪೋ ಟಾವೆಲ್ಲರ್‌ ಚಾಲಕನನ್ನು ಕಲ್ಲು ಎತ್ತಿಹಾಕಿ ಹತ್ಯೆಗೈದಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

Advertisement

ಆರ್‌.ಆರ್‌.ನಗರ ನಿವಾಸಿ ಚಂದ್ರಶೇಖರ್‌ (42) ಕೊಲೆಯಾದ ಚಾಲಕ. ಈ ಸಂಬಂಧ ಹನುಮಂತನಗರ ನಿವಾಸಿ ಭಾಸ್ಕರ್‌ ಹಾಗೂ ಆತನ ಸಹಚರರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಮಂಡ್ಯ ಮೂಲದ ಚಂದ್ರಶೇಖರ್‌ ಈ ಮೊದಲು ಮಾರುಕಟ್ಟೆಯಲ್ಲಿ ಹೂ ವ್ಯಾಪಾರ ಮಾಡಿಕೊಂಡಿದ್ದು, ಶ್ರೀನಗರದಲ್ಲಿ ವಾಸವಾಗಿದ್ದ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ವ್ಯಾಪಾರದಲ್ಲಿ ನಷ್ಟ ಹೊಂದಿದ್ದರಿಂದ ಸ್ವಂತ ಊರಿಗೆ ತೆರಳಿದ್ದ. ಲಾಕ್‌ಡೌನ್‌ ತೆರವು ಬಳಿಕ ಬೆಂಗಳೂರಿಗೆ ಬಂದು, ಆರ್‌.ಆರ್‌.ನಗರದಲ್ಲಿ ಮನೆ ಮಾಡಿಕೊಂಡಿದ್ದ. ಜತೆಗೆ ಸಹೋದರನ ಟೆಂಪೋ ಟ್ರಾವೆಲ್ಲರ್‌ನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಪರಿಚಯಸ್ಥ ಭಾಸ್ಕರ್‌ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದಿದ್ದ ಭಾಸ್ಕರ್‌, ಚಂದ್ರಶೇಖರ್‌ಗೆ ಬಹಳಷ್ಟು ಬಾರಿ ಎಚ್ಚರಿಕೆ ನೀಡಿದ್ದ. ಒಂದೆರಡು ಬಾರಿ ಹಲ್ಲೆ ಕೂಡ ನಡೆಸಿದ್ದ. ಈ ಸಂಬಂಧ ಕೆಲ ದಿನಗಳ ಹಿಂದೆ ಹನುಮಂತನಗರ ಠಾಣೆಯಲ್ಲಿ ಚಂದ್ರಶೇಖರ್‌ ಪ್ರಾಣ ರಕ್ಷಣೆ ಕೋರಿ ದೂರು ನೀಡಿದ್ದು, ತನ್ನ ಪ್ರಾಣಕ್ಕೆ ಹಾನಿಯಾದರೆ ಅದಕ್ಕೆ ಭಾಸ್ಕರ್‌ ಮತ್ತು ಆತನ ಸ್ನೇಹಿತರೇ ಕಾರಣ ಎಂದು  ದೂರಿನಲ್ಲಿ ಉಲ್ಲೇಖೀಸಿದ್ದ. ನಂತರ ಆರೋಪಿ ಠಾಣೆಗೆ ಬಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದ ಎಂಬುದು ಗೊತ್ತಾಗಿದೆ ಎಂದು ಪಶ್ಚಿಮ ವಿಭಾಗ ಪೊಲೀಸರು ಹೇಳಿದರು.

ಮತ್ತೂಂದೆಡೆ ಭಾಸ್ಕರ್‌ ಜತೆಯೂ ಚಂದ್ರಶೇಖರ್‌ ಹಣಕಾಸಿನ ವ್ಯವಹಾರ ನಡೆಸಿದ್ದ. ಹೀಗಾಗಿ ಹಣ ಕೊಡುವಂತೆ ಪದೇ ಪದೇ ಕರೆ ಮಾಡಿ ಪೀಡಿಸುತ್ತಿದ್ದ. ಶುಕ್ರವಾರ ರಾತ್ರಿ ಭಾಸ್ಕರ್‌ ಮತ್ತು ತಂಡ ಮದ್ಯ ಸೇವಿಸುವ ನೆಪದಲ್ಲಿ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ ಮಹಾವೀರ್‌ ಜೈನ್‌ ಆಸ್ಪತ್ರೆಯ ಹಿಂಭಾಗದ ನೈಸ್‌ ರಸ್ತೆಗೆ ಚಂದ್ರಶೇಖರ್‌ನನ್ನು ಕರೆಸಿಕೊಂಡಿದ್ದಾರೆ.  ಬಳಿಕ ಎಲ್ಲರೂ ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಆರೋಪಿಗಳು ಹಾಗೂ ಚಂದ್ರಶೇಖರ್‌ ನಡುವೆ ಗಲಾಟೆಯಾಗಿದ್ದು, ಅದು ವಿಕೋಪಕ್ಕೆ ಹೋಗಿದೆ. ಈ ವೇಳೆ ಆರೋಪಿಗಳು, ಮೊದಲಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಶನಿವಾರ ಬೆಳಗ್ಗೆ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.ಚಂದ್ರಶೇಖರ್‌ ಸಹೋದರ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next