ಬಂಗಾರಪೇಟೆ: ಊರಿನಲ್ಲಿ ಯಾವುದೇ ಸಮಸ್ಯೆ ಆದ್ರೂ ಈತನೇಮುಂದೆ ನಿಂತು ರಾಜಿ ಪಂಚಾಯ್ತಿ ಮಾಡಿ ಪರಿಹರಿಸುತ್ತಿದ್ದ.ಸಹಾಯವೂ ಮಾಡುತ್ತಿದ್ದ. ಆದರೆ, ಅದೇ ಆತನಿಗೆ ಮುಳುವಾಗಿ,ಯಾರಧ್ದೋ ಸಮಸ್ಯೆ ಬಗೆಹರಿಸಲು ಹೋಗಿ ಬಲಿ ಆದ ವಿದ್ರಾವಕಘಟನೆ ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚಿನ್ನಕೋಟೆ ಗ್ರಾಪಂ ವ್ಯಾಪ್ತಿಯ ತಮ್ಮೇನಹಳ್ಳಿ ಗ್ರಾಮದ ದೊಡ್ಡಮನೆ ಕೃಷ್ಣಪ್ಪ (54)ಕೊಲೆ ಆದ ದುರ್ದೈವಿ.
ಶುಕ್ರವಾರ ರಾತ್ರಿ ಗ್ರಾಮದಬಳಿ ಮುನಿಯಪ್ಪ ಹಾಗೂ ಬೋಸ್ ಕೃಷ್ಣಪ್ಪ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯ್ತಿ ನಡೆಯುತ್ತಿತ್ತು. ಈ ವೇಳೆ ಗ್ರಾಮದ ಗ್ರಾಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ದೊಡ್ಡಮನೆ ಕೃಷ್ಣಪ್ಪ ಆಲಿಯಾಸ್ ಕೃಷ್ಣೇಗೌಡ ಏನಾಗುತ್ತಿದೆ ಎಂದು ಪಂಚಾಯ್ತಿ ನಡೆಸುತ್ತಿದ್ದ ಸ್ಥಳಕ್ಕೆ ನೋಡಲು ಹೋಗಿದ್ದರು.
ಚಾಕುವಿನಿಂದ ಇರಿತ: ಈ ವೇಳೆ ಅಲ್ಲೇ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತಿದ್ದ ಅದೇ ಗ್ರಾಮದ ಕಾರ್ಪೆಂಟರ್ ವೆಂಕಟೇಶ್ ಎಂಬಾತ ದೊಡ್ಡಮನೆ ಕೃಷ್ಣಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ಅಲ್ಲಿದ್ದ ಜನರು ಕತ್ತಲಲ್ಲಿ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಕೃಷ್ಣಪ್ಪ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಈ ವೇಳೆ ಅಲ್ಲಿದ್ದ ಕೆಲವರು ಕೊಲೆ ಮಾಡಿದ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ದೊಡ್ಡಮನೆ ಕೃಷ್ಣಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ ಆದ್ರೂ ಮಾರ್ಗ ಮಧ್ಯೆ ಕೃಷ್ಣಪ್ಪ ಸಾವನ್ನಪ್ಪಿದ್ದರು. ದೊಡ್ಡಮನೆ ಕೃಷ್ಣಪ್ಪಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳಾದ ವೆಂಕಟೇಶ್, ಪಾಣಿ, ಮುನಿಯಪ್ಪ ಹಾಗೂ ಬೋಸ್ ಕೃಷ್ಣಪ್ಪ ತಲೆ ಮರೆಸಿಕೊಂಡಿದ್ದಾರೆ.
ತಾಲೂಕಿನ ತಮ್ಮೇನಹಳ್ಳಿ ಸೇರಿ ಸುತ್ತಮುತ್ತ ಗ್ರಾಮದಲ್ಲಿ ದೊಡ್ಡಮನೆ ಕೃಷ್ಣಪ್ಪ ಅವರಿಗೆ ಒಳ್ಳೆಯ ಹೆಸರಿತ್ತು. ಸಾವಿನ ಸುದ್ದಿ ಕೇಳಿ ಕೋಲಾರ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಂಬಂಧಿಕರು, ಹಿತೈಷಿಗಳ ಗೋಳಾಟ ಮನಕಲಕುವಂತಿತ್ತು.
ಸ್ಥಳಕ್ಕೆ ಕೋಲಾರ ಎಸ್ಪಿ ಡಿ.ದೇವರಾಜ್, ಇನ್ಸ್‌ಪೆಕ್ಟರ್ ಬಿ.ಸುನೀಲ್ ಕುಮಾರ್, ಬಿಜೆಪಿ ಮುಖಂಡರಾದ ಕೆ.ಚಂದ್ರಾರೆಡ್ಡಿ, ಜಿಲ್ಲಾ ಬಿಜೆಪಿಉಪಾಧ್ಯಕ್ಷ ಬಿ.ವಿ.ಮಹೇಶ್, ಹನುಮಪ್ಪ ಮುಂತಾದವರು ಹಾಜರಿದ್ದರು.
ಮಹಿಳೆ ಪರ ನಿಂತಿದ್ದೇ ತಪ್ಪಾಯ್ತಾ? :
ಬಂಗಾರಪೇಟೆ ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ರಾಜಿ ಪಂಚಾಯ್ತಿಗಳಲ್ಲಿ ಭಾಗವಹಿಸುತ್ತಿದ್ದ ದೊಡ್ಡಮನೆ ಕೃಷ್ಣಪ್ಪ ಕೊಲೆಗೆ, ಆತನ ಮೇಲೆ ವೆಂಕಟೇಶ್ ಇದ್ದ ಹಗೆತನವೇ ಕೊಲೆಗೆ ಕಾರಣ ಎನ್ನಲಾಗಿದೆ. ವರ್ಷದ ಹಿಂದೆ ಗ್ರಾಮದ ವೀಣಾ ಎಂಬಾಕೆ ಮೇಲೆ ವೆಂಕಟೇಶ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವಿಚಾರದಲ್ಲಿ ದೊಡ್ಮನೆ ಕೃಷ್ಣಪ್ಪ ನೊಂದ ಮಹಿಳೆ ವೀಣಾ ಪರ ನಿಂತಿದ್ದರು. ಈ ಪ್ರಕರಣದಲ್ಲಿ ವೆಂಕಟೇಶ್ ಜೈಲಿಗೆ ಹೋಗಿ ಬಂದಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಹಗೆತನ ಸಾಧಿಸುತ್ತಿದ್ದ ಕಾಪೆìಂಟರ್‌ವೆಂಕಟೇಶ್, ಶುಕ್ರವಾರ ರಾತ್ರಿ ದೊಡ್ಮನೆ ಕೃಷ್ಣಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಮೊದಲ ಆರೋಪಿ ವೆಂಕಟೇಶ್, ಪಾಣಿ ಎಂಬಾತನನ್ನು ಬಂಧಿಸಿದ್ದಾರೆ.
ಉಳಿದ ಮುನಿಯಪ್ಪ ಮತ್ತು ಕೃಷ್ಣಪ್ಪನಿಗಾಗಿ ಬಲೆ ಬೀಸಿದ್ದಾರೆ. ಗ್ರಾಮದ ಮುಖಂಡನಾಗಿ ಊರಿನವರ ಸಮಸ್ಯೆ ಕೇಳುವುದಕ್ಕೆ ಹೋಗಿದ್ದ ದೊಡ್ಡಮನೆ ಕೃಷ್ಣಪ್ಪ ತನ್ನ ಪ್ರಾಣವನ್ನೇ ಬಲಿ ಕೊಡುವ ಸ್ಥಿತಿ ಬಂದಿದ್ದು ಮಾತ್ರ ವಿಪರ್ಯಾಸದ ಸಂಗತಿ.