Advertisement

ಸೌಲಭ್ಯ ಕೊಟ್ಟರೂ ನಿಲ್ಲದ ವಲಸಿಗರು

06:20 AM May 25, 2020 | Lakshmi GovindaRaj |

ಬೆಂಗಳೂರು: ನಿರ್ಮಾಣ ಕ್ಷೇತ್ರಕ್ಕೆ ಕೇಂದ್ರ-ರಾಜ್ಯದ ವಿಶೇಷ ಪ್ಯಾಕೇಜ್‌, ಅದರಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಪಡಿತರ ಜತೆಗೆ ಧನಸಹಾಯ ಕೊಟ್ಟರೂ  ಮೂಲಸೌಕರ್ಯ ಕ್ಷೇತ್ರ ಮಖಾಡೆ ಮಲಗಿದೆ. ಇದು ಸರ್ಕಾರವನ್ನು  ಚಿಂತೆಗೀಡು ಮಾಡಿದೆ. ಪ್ಯಾಕೇಜ್‌ ಘೋಷಿಸಿ ಹೆಚ್ಚು-ಕಡಿಮೆ 2 ವಾರ ಕಳೆದರೂ ಬೆಂಗಳೂರು ಸೇರಿ ಮಹಾನಗರಗಳಲ್ಲಿ ಇದುವರೆಗೂ ಶೇ.20ರಿಂದ 30 ಮಾತ್ರ ಕಾಮಗಾರಿ ಆರಂಭವಾಗಿವೆ. ಪ್ರತಿಷ್ಠಿತ ಕಂಪನಿಗಳು ಸಾಧ್ಯವಾದಷ್ಟು ಕಾರ್ಮಿಕರನ್ನು ತಮ್ಮ ನಿರ್ಮಾಣ ಹಂತದ  ಪ್ರದೇಶದಲ್ಲಿಯೇ ಉಳಿಸಿಕೊಂಡು ಕೆಲಸ ಆರಂಭಿಸಿದ್ದಾರೆ.

Advertisement

ಆದರೆ, ಸರ್ಕಾರ, ಕಂಪನಿಗಳ ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿಲ್ಲ. ಈ ಮಧ್ಯೆ ಕಳೆದ ಒಂದು ವಾರದಿಂದ  ಒಂದೆಡೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟುತ್ತಿದ್ದು, ಇಲ್ಲಿಯೇ ಉಳಿದಿರುವ ಕಾರ್ಮಿಕರಲ್ಲಿ ಆತಂಕ  ಸೃಷ್ಟಿಸಿದೆ. ಮತ್ತೂಂದೆಡೆ ಕಾರ್ಮಿಕರ ಸಂಚಾರಕ್ಕೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದು ಊರುಗಳಿಗೆ ತೆರಳಲು ಪರೋಕ್ಷವಾಗಿ ಪ್ರೇರಣೆ ನೀಡಿದೆ. ಪರಿಣಾಮ ಪ್ರತಿವಲಸೆ ಶುರುವಾಗಿದೆ. ಇದೆಲ್ಲದರ ನಡುವೆ ಕಾಮಗಾರಿಗಳ ಪ್ರಗತಿಗೆ ಹಿನ್ನೆಡೆ ಉಂಟಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರಿ ಕಾಮಗಾರಿಗೂ ಕರಿನೆರಳು: ನಗರ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳೂ ಹಣಕಾಸಿನ ಕೊರತೆಯಿಂದ ಕಾಮಗಾರಿ ಆರಂಭವಾಗಿಲ್ಲ. ಅಲ್ಲದೇ ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಹಣಕಾಸು ಇಲಾಖೆ ಅನುಮತಿ  ಕಡ್ಡಾಯವಿದ್ದು ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಆರಂಭವಾಗಿಲ್ಲ. ವಲಸೆ ಕಾರ್ಮಿಕರೂ ಗ್ರಾಮೀಣ ಪ್ರದೇಶಗಳಿಗೆ ತೆರಳಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಆರಂಭವಾಗಲು ಕನಿಷ್ಠ 6 ತಿಂಗಳು ತೆಗೆದುಕೊಳ್ಳಬಹುದು ಎಂಬ  ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಅದರಲ್ಲೂ ಮೇ 18ರ ನಂತರ ವಲಸೆ ಕಾರ್ಮಿಕರು, ಪ್ರವಾಸಿಗರು , ವಿದ್ಯಾರ್ಥಿಗಳು ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಮುಕ್ತ ಅವಕಾಶ ಕಲ್ಪಿಸಿ ಶ್ರಮಿಕ್‌ ರೈಲು ಸೇವೆ ಆರಂಭಿಸಿದ್ದರಿಂದ  ರಾಜ್ಯದಿಂದ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ್‌, ಒಡಿಶಾ, ಜಾರ್ಖಂಡ್‌, ಛತ್ತೀಸ್‌ಗಡ ರಾಜ್ಯಗಳ ಲಕ್ಷಾಂತರ ಕಾರ್ಮಿಕರು ತವರಿಗೆ ಮರಳಲು ಹಾತೊರೆಯುತ್ತಿದ್ದು, ಶ್ರಮಿಕ್‌ ರೈಲಿನ ಮೂಲಕ ಹಂತ ಹಂತವಾಗಿ  ಅವರ ರಾಜ್ಯಗಳಿಗೆ ಕಳುಹಿಸುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಮರು ವಲಸೆ ಇನ್ನಷ್ಟು ಹೆಚ್ಚುವ ಸಾಧ್ಯತೆ: ರಾಜ್ಯ ಸರ್ಕಾರ ಏಕಾಏಕಿ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಿದ್ದರಿಂದ ಲಕ್ಷಾಂತರ ಹೊರ ರಾಜ್ಯಗಳ ವಲಸೆ ಕಾರ್ಮಿಕರು ತವರು ಸೇರಿದರೆ ಸಾಕು ಎಂದು  ತಂಡೋಪತಂಡವಾಗಿ ಹೊರಟಿದ್ದರಿಂದ ನಗರ ಪ್ರದೇಶದಲ್ಲಿನ ನಿರ್ಮಾಣ ಕಾಮಗಾರಿ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳು  ಸರ್ಕಾರದ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರಿಂದ ಅಗತ್ಯ ಆಹಾರದ ಕಿಟ್‌, ವಸತಿ ಕಲ್ಪಿಸುವ ಭರವಸೆ ನೀಡಿ ಇಲ್ಲಿಯೇ  ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು.

Advertisement

ಅಲ್ಲದೇ, ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ವಸತಿ ಕಲ್ಪಿಸಿದ ಬೃಹತ್‌ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಕಾರ್ಮಿಕರನ್ನು ತಮ್ಮಲ್ಲಿಯೇ  ಉಳಿಸಿಕೊಂಡರು. ಇನ್ನು ಬೆಂಗಳೂರಿನಿಂದ ಪ್ರತಿ ದಿನ ಉತ್ತರ ಭಾರತದ ರಾಜ್ಯಗಳಿಗೆ ಶ್ರಮಿಕ್‌ ರೈಲು ಕಳುಹಿಸಲಾಗುತ್ತಿದ್ದು, ಪ್ರತಿ ರೈಲಿನಲ್ಲಿ ಸುಮಾರು 1,200 ಕಾರ್ಮಿಕರು ಮಾತ್ರ ತೆರಳುತ್ತಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಮುಂದಿನ ವಾರದಲ್ಲಿ 2,600 ಶ್ರಮಿಕ್‌ ರೈಲು ಬಿಡುವುದಾಗಿ ಹೇಳಿರುವುದರಿಂದ ಕಾರ್ಮಿಕರ ಮರು ವಲಸೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹಳ್ಳಿಗಳಿಗೆ ತೆರಳಿ ವಲಸಿಗರ ಮನವೊಲಿಕೆ ಪ್ರಯತ್ನ!: “ಸರ್ಕಾರದೊಂದಿಗೆ ಮಾತುಕತೆ ನಡೆಸಿದ ನಂತರ ಪ್ಯಾಕೇಜ್‌ ಘೋಷಣೆ ಮತ್ತಿತರ ಪೂರಕ ಬೆಳವಣಿಗೆಗಳಿಂದ ರಾಜ್ಯದಲ್ಲಿ ಕಾರ್ಮಿಕರ ಪ್ರತಿವಲಸೆ ಕಡಿಮೆಯಾಗಿತ್ತು. ಇದು  ಉದ್ಯಮದ ಚೇತರಿಕೆ ದೃಷ್ಟಿಯಿಂದ ತುಸು ಆಶಾದಾಯಕವೂ ಆಗಿತ್ತು. ಆದರೆ, 3-4ದಿನಗಳಿಂದ ಹೆಚ್ಚಳವಾಗಿದೆ. ವಿವಿಧ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕ ಗುತ್ತಿಗೆದಾರರ ಪ್ರತಿನಿಧಿಗಳು ಹಳ್ಳಿಗಳಿಗೆ ತೆರಳಿ, ಮನವೊಲಿಸುವುದು, ಭರವಸೆ ನೀಡುತ್ತಿದ್ದರೂ ಕಾರ್ಮಿಕರಿಂದ ಪೂರಕ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿ, ನಿರ್ಮಾಣ ಕಾಮಗಾರಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಚಾಲನೆ ದೊರೆಯುತ್ತಿಲ್ಲ. ಸರ್ಕಾರಿ ಮೂಲ ಸೌಕರ್ಯ ಕಾಮಗಾರಿಗಳ  ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ’ ಎಂದು ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲಪರ್ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್‌ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next