ಬೆಂಗಳೂರು: ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಲ್ಲಿ ಎಸೆಸೆಲ್ಸಿವರೆಗೂ ಮಕ್ಕಳನ್ನು ಹಿಡಿದಿಡಲು ವಿನೂತನ ಯೋಜನೆಗೆ ಮುಂದಾಗಿರುವ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ಆ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ 5 ಸಾವಿರ ರೂ. ಠೇವಣಿ ಇಡಲು ಉದ್ದೇಶಿಸಿದೆ.
ಗಡಿ ಭಾಗದಲ್ಲಿರುವ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಾರೆ. ಅನಂತರ ಅಂದರೆ ಪ್ರೌಢ ಶಿಕ್ಷಣದ ಹೊತ್ತಿಗೆ ಶಾಲೆಗಳನ್ನು ಬದಲಿಸುತ್ತಾರೆ. ಅದರೊಂದಿಗೆ ಕಲಿಕಾ ಮಾಧ್ಯಮ ಕೂಡ ಬದಲಾಗುತ್ತಿದೆ. ಈ ಮೂಲಕ ಕನ್ನಡ ಕಲಿಕೆಯಿಂದ ವಿಮುಖರಾಗುತ್ತಿದ್ದಾರೆ.
ಮಕ್ಕಳನ್ನು ಕನ್ನಡ ಪ್ರೌಢಶಾಲೆಗಳತ್ತ ಆಕರ್ಷಿ ಸಲು ಪ್ರತಿ ಮಗುವಿನ ಹೆಸರಿನಲ್ಲಿ ತಲಾ 5 ಸಾವಿರ ರೂ. ಪ್ರೋತ್ಸಾಹಧನ ಠೇವಣಿ ರೂಪದಲ್ಲಿಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳು ಮತ್ತು ಆಯಾ ಶಾಲೆಯ ಹೆಸರಿನಲ್ಲಿ ಜಂಟಿ ಖಾತೆಯಲ್ಲಿ ಠೇವಣಿ ಇಡಲಾಗುತ್ತದೆ. ಅದರಿಂದ ಬರುವ ಬಡ್ಡಿ ಹಣವನ್ನು ಮಗುವಿನ ಶೈಕ್ಷಣಿಕ ಸೌಲಭ್ಯಗಳಿಗೆ ವಿನಿಯೋಗಿಸಲಾಗುವುದು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕಾಸರಗೋಡು, ಜತ್ತ, ಅರಕಲಕೋಟೆ, ದಕ್ಷಿಣ ಸೊಲ್ಲಾಪುರ ತಾಲೂಕಿನ ಒಟ್ಟು ಐದು ಸಾವಿರ ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗುತ್ತಿದ್ದು, 2.5 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದರು.
Related Articles
ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ವಸತಿ ಶಾಲೆಗಳನ್ನು ತೆರೆಯಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಖಾನಾಪುರದಲ್ಲಿ ವಸತಿ ಶಾಲೆ ತೆರೆಯಲು ಯೋಜಿಸಲಾಗಿದೆ ಎಂದು ಹೇಳಿದರು.
ಆರ್ಥಿಕ, ಸಾಮಾಜಿಕ ಸಮೀಕ್ಷೆ
ಗಡಿ ಭಾಗದ ಹಳ್ಳಿಗಳ ಕನ್ನಡಿಗರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ಮಾಡಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿ, ಧಾರವಾಡದ ಕರ್ನಾಟಕ ವಿವಿ, ಮೈಸೂರು ವಿವಿ, ಹಂಪಿಯ ಕನ್ನಡ ವಿವಿ, ಮಂಗಳೂರು ವಿವಿ, ಕಲಬುರಗಿ ಕನ್ನಡ ವಿವಿ, ಬೆಂಗಳೂರು ಮತ್ತು ತುಮಕೂರು ವಿವಿಗಳು ಪ್ರಾಧಿಕಾರದೊಂದಿಗೆ ಕೈಜೋಡಿಸಿವೆ ಎಂದರು.
ಕನ್ನಡ ಭವನ
ಕಾಸರಗೋಡು, ಗೋವಾ ಮತ್ತು ಅಕ್ಕಲಕೋಟೆಯಲ್ಲಿ ಕನ್ನಡ ಭವನ ನಿರ್ಮಾಣದ ಚಿಂತನೆ ಇದೆ. ಮುಖ್ಯಮಂತ್ರಿಗಳು 5 ಕೋಟಿ ರೂ. ಅನುದಾನವನ್ನು ಬಜೆಟ್ನಲ್ಲಿ ಮೀಸಲಿರಿಸಿದ್ದಾರೆ. ಕಾಸರಗೋಡಿನಲ್ಲಿ ಕಯ್ನಾರ ಕಿಞ್ಞಣ್ಣ ರೈ ಕುಟುಂಬಸ್ಥರು ಕನ್ನಡ ಭವನಕ್ಕೆ ಉಚಿತವಾಗಿ ಜಮೀನು ನೀಡಲು ಮುಂದೆ ಬಂದಿದ್ದಾರೆ. ಅಕ್ಕಲಕೋಟೆಯಲ್ಲಿ ಕನ್ನಡ ಸಂಘದವರು ಜಾಗ ನೀಡಲಿದ್ದಾರೆ. ಗೋವಾದಲ್ಲಿ ಜಾಗದ ಹುಡುಕಾಟ ನಡೆದಿದ್ದು, ಅಲ್ಲಿನ ಮುಖ್ಯಮಂತ್ರಿಗಳ ಜತೆ ಚರ್ಚೆಯೂ ನಡೆದಿದೆ ಎಂದರು.
ಮಹಾರಾಷ್ಟ್ರದ ಸಂಚು ವಿಫಲ
ಮಹಾರಾಷ್ಟ್ರದ ಗಡಿ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಕನ್ನಡ ಶಾಲೆ ಮಕ್ಕಳನ್ನು ಹೆಚ್ಚು ಸೇರಿಸಲು ಕುಮ್ಮಕ್ಕು ಕೊಡುವ ಸಂಚು ನಡೆದಿತ್ತು. ಅದನ್ನು ಸ್ಥಳೀಯ ಕನ್ನಡ ಕ್ರಿಯಾಸಮಿತಿಗಳ ನೆರವಿನಲ್ಲಿ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿ. ಸೋಮಶೇಖರ್ ತಿಳಿಸಿದರು. ಎಂಇಎಸ್ ಸಂಘಟನೆಗಳು ಸಹಿತ ಮಹಾರಾಷ್ಟ್ರದ ನಿಯೋಗಗಳು ರಾಜ್ಯದ ಗಡಿಯಲ್ಲಿ ಬಂದು, ಮರಾಠಿ ಶಾಲೆಗಳನ್ನು ಆರಂಭಿಸಿದರೆ, ಹೆಚ್ಚು ಅನುದಾನ ನೀಡುವ ಆಮಿಷವೊಡ್ಡುತ್ತಿದ್ದವು. ಹೆಚ್ಚು ಸವಲತ್ತು ನೀಡುವುದಾಗಿ ಹೇಳಿದ್ದವು. ಇದರ ಸುಳಿವು ಸಿಕ್ಕ ತತ್ಕ್ಷಣ ವಿರೋಧಿಸಿ ಮಹಾರಾಷ್ಟ್ರದ ಸಂಚನ್ನು ವಿಫಲಗೊಳಿಸಲಾಗಿದೆ ಎಂದರು.
ಮೊದಲ ಹಂತದಲ್ಲಿ 5 ಸಾವಿರ ವಿದ್ಯಾರ್ಥಿಗಳು
ಕಾಸರಗೋಡು, ಜತ್ತ, ಅರಕಲಕೋಟೆ, ದಕ್ಷಿಣ ಸೊಲ್ಲಾಪುರ ತಾಲೂಕಿನ ಒಟ್ಟು ಐದು ಸಾವಿರ ವಿದ್ಯಾರ್ಥಿಗಳ ಹೆಸರಿನಲ್ಲಿ ಠೇವಣಿ ಇಡಲಾಗುತ್ತಿದ್ದು, ಇದಕ್ಕಾಗಿ ಎರಡೂವರೆ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.