ಹುಬ್ಬಳ್ಳಿ: ವಿದ್ಯಾನಗರದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಚಿಕ್ಕಮಕ್ಕಳ ಹೃದಯ ಚಿಕಿತ್ಸಾ ಕೇಂದ್ರದ ಉದ್ಘಾಟನೆ ಶುಕ್ರವಾರ ನಡೆಯಿತು.
ಉದ್ಘಾಟನೆ ನೆರವೇರಿಸಿದ ಕಿಮ್ಸ್ ಹೃದ್ರೋಗ ತಜ್ಞ ಡಾ| ಪ್ರಕಾಶ ವಾರಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಣ್ಣ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಪ್ರತ್ಯೇಕವಾದ ಆರೈಕೆ ಕೇಂದ್ರ ಇರಲಿಲ್ಲ. ಇಲ್ಲಿ ಆರಂಭಗೊಂಡಿರುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ. ಇದರಿಂದ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಿಗೆ ಹೋಗುವುದು ತಪ್ಪಿದಂತಾಗಿದೆ ಎಂದರು.
ಜನಿಸಿದ 1000 ಮಕ್ಕಳಲ್ಲಿ 7ರಿಂದ 8 ಶಿಶುಗಳಿಗೆ ಹೃದಯ ಸಮಸ್ಯೆ ಇರುತ್ತದೆ. ಕಿಮ್ಸ್‌ನಲ್ಲಿ ಪ್ರತಿ ತಿಂಗಳು 1000 ಮಕ್ಕಳು ಜನಿಸುತ್ತಾರೆ. ಹೃದಯ ಸಮಸ್ಯೆಯುಳ್ಳ ಶಿಶುಗಳಲ್ಲಿ ಶೇ.50 ಮಕ್ಕಳಿಗೆ ಜನಿಸಿದ ಕೆಲ ದಿನಗಳಲ್ಲೇ ಚಿಕಿತ್ಸೆ ಕೊಡಿಸುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಶಿಶುಗಳು ಜೀವ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಹೃದಯ ರೋಗ ತಜ್ಞರ ಕೊರತೆಯಿದೆ. 3.5 ಮಿಲಿಯನ್ ಜನರಿಗೊಬ್ಬರು ಹೃದಯ ರೋಗ ತಜ್ಞರಿದ್ದಾರೆ. ಹೃದಯ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಮನೆಯಲ್ಲಿ ಹೆರಿಗೆಯಾದರೆ ಶಿಶುಗಳ ಆರೋಗ್ಯ ಸಮಸ್ಯೆ ಗೊತ್ತಾಗುವುದಿಲ್ಲ. ಆದ್ದರಿಂದ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸುವುದು ಸೂಕ್ತ. ಈ ದಿಸೆಯಲ್ಲಿ ಜನರಲ್ಲಿ ಜಾಗೃತಿ ಮೂಡುತ್ತಿದೆ. ಜನರ ಅನುಕೂಲಕ್ಕಾಗಿ ಸರಕಾರ ಆರೋಗ್ಯ ಸೇವೆ ಒದಗಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಜನರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಮುಖ್ಯಸ್ಥ ಶಶಿಕುಮಾರ ಪಟ್ಟಣಶೆಟ್ಟಿ ಮಾತನಾಡಿ, 10 ವರ್ಷಗಳ ಸೇವೆಯ ನಂತರ ಮಕ್ಕಳಿಗಾಗಿ ಪ್ರತ್ಯೇಕ ಹಾರ್ಟ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಇಲ್ಲಿ ತಜ್ಞ ವೈದ್ಯರ ಸೇವೆ ಸಿಗಲಿದೆ ಎಂದರು.
ಡಾ| ರವಿವರ್ಮ ಪಾಟೀಲ ಮಾತನಾಡಿ, ನಮ್ಮ ಸೆಂಟರ್‌ನಲ್ಲಿ ಸುಸಜ್ಜಿತ ವೈದ್ಯಕಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಕೋ, ಕ್ಯಾಥ್ ಲ್ಯಾಬ್, ಕಾರ್ಡಿಯಾಕ್ ಓಟಿ, ಮಕ್ಕಳಿಗಾಗಿ ವಿಶೇಷ ಐಸಿಯು ಇಲ್ಲಿದೆ. ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಕೂಡ ಇಲ್ಲಿ ಲಭ್ಯವಿದೆ. ಪ್ರತಿ ಶುಕ್ರವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಕ್ಕಳ ಹೃದ್ರೋಗ ತಜ್ಞ ಡಾ| ಅರುಣ ಬಬಲೇಶ್ವರ ವೈದ್ಯಕೀಯ ಸೇವೆಗೆ ಆಸ್ಪತ್ರೆಯಲ್ಲಿ ಲಭ್ಯ ಇರುತ್ತಾರೆ ಎಂದು ತಿಳಿಸಿದರು.
ಡಾ| ಜಯಂಶಂಕರ, ಡಾ| ಅರುಣ ಬಬಲೇಶ್ವರ, ಡಾ| ಕಿರಣ ಹೆಗಡೆ ಇದ್ದರು.