Advertisement

February; ಚೊಚ್ಚಲ ಎಂಡೋಸಲ್ಫಾನ್‌ ಪುನರ್ವಸತಿ ಗ್ರಾಮ ಮೊದಲ ಹಂತದ ಉದ್ಘಾಟನೆ

11:26 PM Jan 14, 2024 | Team Udayavani |

ಕಾಸರಗೋಡು: ಮುಳಿಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಎಂಡೋಸಲ್ಫಾನ್‌ ಪುನರ್ವಸತಿ ಗ್ರಾಮದ ಮೊದಲ ಹಂತದ ಕಾಮಗಾರಿ ಜನವರಿ 31ರೊಳಗೆ ಪೂರ್ಣಗೊಳ್ಳಲಿದೆ ಎಂದು ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶಕ ಎಚ್‌. ದಿನೇಶನ್‌ ತಿಳಿಸಿದ್ದಾರೆ.

Advertisement

ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್‌ ಪುನರ್ವಸತಿ ಗ್ರಾಮ ನಿರ್ಮಾಣದ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಫೆಬ್ರವರಿ ಎರಡನೇ ವಾರದೊಳಗೆ ಚಿಕಿತ್ಸಾ ವಿಧಾನಗಳಿಗೆ ಅಗತ್ಯ ಸೌಕರ್ಯ ಹಾಗೂ ಪೀಠೊಪಕರಣಗಳನ್ನು ಸಿದ್ಧಪಡಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಿ ಉದ್ಘಾಟನೆಗೆ ಸಿದ್ಧಗೊಳಿಸಲಾಗುವುದು ಎಂದರು.

ಅಗತ್ಯ ಚಿಕಿತ್ಸಕರ ಹುದ್ದೆ ಗಳನ್ನು ಗುರುತಿಸಿ ಜಿಲ್ಲಾ ಪಂಚಾಯತ್‌ ಸಹಕಾರದೊಂದಿಗೆ ನೇಮಕ ಮಾಡಲಾಗುವುದು ಎಂದರು.

ಕ್ಲಿನಿಕಲ್‌ ಸೈಕಾಲಜಿ ಮತ್ತು ಹೈಡ್ರೋಥೆರಫಿ ಬ್ಲಾಕ್‌ಗಳ ನಿರ್ಮಾಣವು ಮೊದಲ ಹಂತದಲ್ಲಿ ಪೂರ್ಣಗೊಳ್ಳಲಿದ್ದು, ಇದು 5 ಕೋಟಿ ರೂ. ಹೂಡಿಕೆಯಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಪ್ರಸ್ತಾವನೆಯನ್ನು ಪರಿಶೀಲಿಸ ಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ  ಅಧ್ಯಕ್ಷತೆ ವಹಿಸಿದ್ದು ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸುವ ಬಗ್ಗೆ ಪರಿಶೀ ಲಿಸಲಾಗುವುದೆಂದು ತಿಳಿಸಿದರು. ಸಾಮಾಜಿಕ ನ್ಯಾಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್‌.ಜಲಜಾ, ನಿಷ್ಮಾರ್‌ ಕಾರ್ಯನಿರ್ವಾಹಕ ನಿರ್ದೇಶಕ ಸಿ. ಚಂದ್ರಬಾಬು ಹಾಗೂ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್‌ ಮಾತನಾಡಿದರು. ಕೇರಳ ಸಾಮಾಜಿಕ ಭದ್ರತಾ ಆಯೋಗದ ಪ್ರತಿನಿಧಿಗಳು, ಯುಎಲ್‌ಸಿಎಲ್‌ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

ಎಂಡೋಸಲ್ಫಾನ್‌
ಪುನರ್ವಸತಿ ಗ್ರಾಮಕ್ಕೆ ಭೇಟಿ
ನಿರ್ಮಾಣ ಹಂತದಲ್ಲಿರುವ ಮುಳಿಯಾರು ಎಂಡೋಸಲ್ಫಾನ್‌ ಪುನರ್ವಸತಿ ಗ್ರಾಮಕ್ಕೆ ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶಕ ಎಚ್‌. ದಿನೇಶನ್‌, ಸಾಮಾಜಿಕ ನ್ಯಾಯ ಹೆಚ್ಚುವರಿ ನಿರ್ದೇಶಕಿ ಎಸ್‌. ಜಲಜಾ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ. ರಾಜ್‌, ಕೆಎಸ್‌ಎಸ್‌ಎ ಪ್ರತಿನಿಧಿಗಳು ಮತ್ತು ನಿಷ್ಮಾರ್‌ ಪ್ರತಿನಿಧಿಗಳು ಭೇಟಿ ನೀಡಿದರು.

ಆಯ್ದ ಕುಟುಂಬಗಳಿಗೆ ಮನೆ ವಿತರಣೆ
1980ರಿಂದ 1999ರ ವರೆಗೆ ಕಾಸರಗೋಡು ಜಿಲ್ಲೆಯ ವಿವಿಧೆಡೆ ಸರಕಾರಿ ಗೇರು ತೋಟಗಳಿಗೆ ಹೆಲಿಕಾಪ್ಟರ್‌ ಮೂಲಕ ಎಂಡೋಸಲ್ಫಾನ್‌ ಸಿಂಪಡಿಸಿದ ಪರಿಣಾಮವಾಗಿ ನೂರಾರು ಮಂದಿ ಸಾವಿಗೀಡಾಗಿದ್ದರು, ಹಲವು ಪೀಳಿಗೆಗಳ ಸಾವಿರಾರು ಮಂದಿ ವಿವಿಧ ರೋಗಗಳಿಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇಂಥವರಿಗೆ ಪುನರ್ವಸತಿ ಕಲ್ಪಿಸಲು ಸುಮಾರು 100ರಷ್ಟು ಮನೆಗಳನ್ನು ನಿರ್ಮಿಸುವ ಯೋಜನೆ ಇದಾಗಿದ್ದು, ಆ ಮನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪ್ರಥಮ ಹಂತದ ಉದ್ಘಾಟನೆ ಮುಂದಿನ ತಿಂಗಳು ನಡೆಯಲಿದೆ. ಆಯ್ದ ಎಂಡೋಪೀಡಿತರಿಗೆ ಈ ಮನೆಗಳನ್ನು ವಿತರಿಸಲಾಗುವುದು. ಜಿಲ್ಲೆಯಲ್ಲಿ ಪ್ರಥಮವಾಗಿ ಇಂತಹ ಪುನರ್ವಸತಿ ಕಾಮಗಾರಿ ನಡೆದಿದೆ. ಎಂಡೋಪೀಡಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಡೇಕೇರ್‌ ಕೇಂದ್ರಗಳು ಇವೆ; ಆದರೆ ಪೂರ್ಣ ಪ್ರಮಾಣದ ಪುನರ್ವಸತಿ ಗ್ರಾಮದ ಪರಿಕಲ್ಪನೆ ಇದೇ ಮೊದಲನೆಯದು.

Advertisement

Udayavani is now on Telegram. Click here to join our channel and stay updated with the latest news.

Next