ರಬಕವಿ-ಬನಹಟ್ಟಿ: ಅಂಗನವಾಡಿ ಕೇಂದ್ರಗಳ ಕಟ್ಟಡದ ನಿರ್ಮಾಣದಲ್ಲಿ ಹಲವಾರು ತೊಂದರೆಗಳಿಂದ ತಡವಾಗಿದ್ದು, ಅದೇ ರೀತಿಯಾಗಿ ಕೆಲವು ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆದಿದೆ. ಅವುಗಳನ್ನು ಸರಿ ಪಡಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಕಾರ ಕೂಡಾ ಮುಖ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಸೋಮವಾರ ಅವರು ಹೊಸೂರ, ಯರಗಟ್ಟಿ ಹಾಗೂ ರಬಕವಿಯಲ್ಲಿಯ ಅಂಗನವಾಡಿ ಕೇಂದ್ರಗಳ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ಕಡೆಗಳಲ್ಲಿ ಸಾರ್ವಜನಿಕರೇ ವಿಶೇಷ ಕಾಳಜಿಯನ್ನು ತೆಗೆದುಕೊಂಡು ಅಂಗನವಾಡಿ ಕೇಂದ್ರಗಳಿಗೆ ಸಾಕಷ್ಟು ದೇಣಿಗೆಗಳನ್ನು ಕೂಡಾ ನೀಡಿದ್ದಾರೆ. ಅಂಗನವಾಡಿ ಕಟ್ಟಡಗಳ ಕೊರತೆ ಇದ್ದಲ್ಲಿ ಅವುಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಹಂತ ಹಂತವಾಗಿ ಅವುಗಳನ್ನು ಕೂಡಾ ಅಭಿವೃದ್ಧಿ ಪಡಿಸಲಾಗುವುದು. ಕ್ಷೇತ್ರದಲ್ಲಿ ಹೊಸೂರ, ರಬಕವಿ ಮತ್ತು ಯರಗಟ್ಟಿಯಲ್ಲಿ ಮೂರು ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಲಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಈ ಸಂದರ್ಭದಲ್ಲಿ ಜಮಖಂಡಿ ಸಿಡಿಪಿಓ ಮಾತನಾಡಿ ರಬಕವಿ ಬನಹಟ್ಟಿ ತಾಲ್ಲೂಕು ವ್ಯಾಪ್ತಿಯಲ್ಲಿ 232 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. 140ಕೇಂದ್ರಗಳು ಸ್ವಂತ ಕಟ್ಟಡದಲ್ಲಿ, 72 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಮತ್ತು 20 ಕೇಂದ್ರಗಳು ಶಾಲಾ ಹಾಗೂ ಇತರೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಸೊನ್ನೆಯಿಂದ 6 ವರ್ಷದವರೆಗೆ 24,419 ಮಕ್ಕಳು ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಮಹಾದೇವ ಕೋಟ್ಯಾಳ, ಲಕ್ಕಪ್ಪ ಪಾಟೀಲ, ಚಿದಾನಂದ ಬೆಳಗಲಿ, ಜಯಪ್ರಕಾಶ ಸೊಲ್ಲಾಪುರ, ಎನ್.ಎಸ್. ಚೆನ್ನಿ, ಎಸ್.ಕೆ.ಹೂಗಾರ, ಬಿ.ಜಿ.ಜಿರೇಮಠ ಸೇರಿದಂತೆ ಅನೇಕರು ಇದ್ದರು.