Advertisement

ʼನಮ್ಮ ಕ್ಲಿನಿಕ್‌ʼಗೆ ನಾಳೆ ಬೊಮ್ಮಾಯಿ ಚಾಲನೆ

03:23 PM Dec 13, 2022 | Team Udayavani |

ಧಾರವಾಡ: ನಗರ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರಕಾರ ನಗರ ಪ್ರದೇಶಗಳಲ್ಲಿ ಸ್ಥಾಪಿಸಿರುವ 438 ನಮ್ಮ ಕ್ಲಿನಿಕ್‌ಗಳನ್ನು ಡಿ.14ರಂದು ಹುಬ್ಬಳ್ಳಿಯ ಬೈರಿದೇವರಕೊಪ್ಪದಿಂದ ಏಕಕಾಲಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿ.14ರಂದು ಬೆಳಿಗ್ಗೆ ಬೈರಿದೇವರಕೊಪ್ಪದ ರೇಣುಕಾ ನಗರದಲ್ಲಿ ಸಿಎಂ ನಮ್ಮ ಕ್ಲಿನಿಕ್‌ ಉದ್ಘಾಟಿಸಲಿದ್ದು, ಎಲ್ಲ 438 ನಮ್ಮ ಕ್ಲಿನಿಕ್‌ಗಳನ್ನು ವರ್ಚುವಲ್‌ ಮೂಲಕ ಏಕಕಾಲಕ್ಕೆ ಚಾಲನೆ ನೀಡಲಿದ್ದಾರೆ.

ಆರೋಗ್ಯ ಸಚಿವ ಡಾ|ಕೆ. ಸುಧಾಕರ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ನಗರ ಪ್ರದೇಶಗಳ ಬಡ ಜನತೆಗೆ ನಮ್ಮ ಕ್ಲಿನಿಕ್‌ ಗಳು 12 ಆರೋಗ್ಯ ಸೇವೆಗಳ ಮೂಲಕ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು, ನಿರಂತರ ಆರೈಕೆ ನೀಡುವ ನಿಟ್ಟಿನಲ್ಲಿ ದ್ವಿತೀಯ-ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ರೆಫರಲ್‌ ಸೇವೆಗಳನ್ನು ಒದಗಿಸುವ ಮೂಲಕ, ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸುಧಾರಿಸಲು, ಸೂಕ್ತ ಕಾರ್ಯ ವಿಧಾನಗಳನ್ನು ಬಲಪಡಿಸಲು, ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ನಮ್ಮ ಕ್ಲಿನಿಕ್‌ಗಳು ಸಹಾಯಕಾರಿಯಾಗಲಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಶಿ ಪಾಟೀಲ ಮಾತನಾಡಿ, ನಮ್ಮ ಕ್ಲಿನಿಕ್‌ 1000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಇಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ಕೊಠಡಿ, ಚುಚ್ಚುಮದ್ದು ನೀಡುವ ಕೊಠಡಿ, ಪ್ರಯೋಗಶಾಲೆ, ಯೋಗ ಕೊಠಡಿ, ಔಷಧ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಚೇರಿ ಹೀಗೆ ಪ್ರತ್ಯೇಕ ಕೊಠಡಿಗಳಿದ್ದು ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಕ್ಲಿನಿಕ್‌ಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಶುಶ್ರೂಷಕರು, ತಲಾ ಒಬ್ಬೊಬ್ಬ ಪ್ರಯೋಗ ಶಾಲಾ ತಂತ್ರಜ್ಞರು, ಕಿರಿಯ ದರ್ಜೆ ಸಹಾಯಕರು, ಒಬ್ಬರು ಡಿ ದರ್ಜೆ ನೌಕರರು ಕಾರ್ಯ ನಿರ್ವಹಿಸಲಿದ್ದಾರೆ. ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9:00 ರಿಂದ ಸಂಜೆ 4:30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯ ನಿರ್ವಹಿಸುತ್ತವೆ ಎಂದರು.

Advertisement

ನಮ್ಮ ಕ್ಲಿನಿಕ್‌ಗಳಲ್ಲಿ 12 ಪ್ರಮುಖ ಆರೋಗ್ಯ ಸೇವೆಗಳನ್ನು ನೀಡುವುದರ ಜತೆಗೆ ಮಾನಸಿಕ ಆರೋಗ್ಯದ ಮೂಲಭೂತ ಸ್ಕ್ರೀನಿಂಗ್‌ ಸೇವೆಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ, ಉಚಿತ ಪ್ರಯೋಗಶಾಲಾ ಸೇವೆಗಳು ರಕ್ತಹೀನತೆ, ಸಕ್ಕರೆ ಕಾಯಿಲೆ, ಮೂತ್ರ ಪರೀಕ್ಷೆ, ಕ್ಷಯ ಪರೀಕ್ಷೆ, ಡೆಂಘೀ, ಮಲೇರಿಯಾದಂತಹ ಕನಿಷ್ಠ 14 ಪರೀಕ್ಷೆಗಳ ಸೇವೆಯನ್ನು ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಉಪ ಆಯುಕ್ತ ಡಾ|ಗೋಪಾಲ ಬ್ಯಾಕೋಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಆರೋಗ್ಯಾ ಧಿಕಾರಿ ಡಾ|ಶಶಿಕಲಾ, ಡಾ|ಹೊನಕೇರಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next