Advertisement

ಅರಿವಿನ ಮನೆ ಉದ್ಘಾಟನೆ; ಸಕಲ ಕ್ಷೇತ್ರದಲ್ಲೂ ಮುನ್ನುಗ್ಗಿ

05:48 PM Aug 15, 2022 | Team Udayavani |

ಕಲಬುರಗಿ: ಮೈಸೂರು ಭಾಗಕ್ಕೆ ಹೋಲಿಸಿದಾಗ ಕೃಷಿ, ಶಿಕ್ಷಣ, ಸಂಸ್ಕೃತಿ ಹೀಗೆ ಯಾವುದೇ ಕ್ಷೇತ್ರದಲ್ಲೂ ಕಲಬುರಗಿ ಹಿಂದುಳಿದಿಲ್ಲ. ಅಂತಹ ಮನೋಭಾವದಿಂದ ಮೇಲೆದ್ದು ಛಲದಿಂದ ಮುಂದೆ ಸಾಗುವ ಅವಶ್ಯಕತೆಯಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಮುರುಗೇಶ ಆರ್‌. ನಿರಾಣಿ ಹೇಳಿದರು.

Advertisement

ರವಿವಾರ ನಗರದ ಐವಾನ್‌-ಎ-ಶಾಹಿ ರಸ್ತೆಯಲ್ಲಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಕಚೇರಿ ಆವರಣದಲ್ಲಿ 2.55ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ “ಅರಿವಿನ ಮನೆ’ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 20 ಸಿಮೆಂಟ್‌ ಕಾರ್ಖಾನಗೆಳಿವೆ. ಇದರ ಮಾಲೀಕರ ಹೊರ ರಾಜ್ಯದವರಾಗಿದ್ದಾರೆ. ಇಲ್ಲಿ ಕೆಲಸ ನಿರ್ವಹಿಸುವ “ಡಿ’ ದರ್ಜೆ ಸಿಬ್ಬಂದಿ ಹೊರತುಪಡಿಸಿ ಅಧಿಕಾರಿಗಳು ನಮ್ಮವರಲ್ಲ. ಹೀಗಾದರೆ ಈ ಪ್ರದೇಶ ಮುಂದೆ ಬರುವುದು ಹೇಗೆ ಎಂದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಸೌಲಭ್ಯ ನೀಡುತ್ತಿದ್ದು, ಉದ್ಯೋಗ ನೀಡುವತ್ತ ಇಲ್ಲಿನ ಉದ್ಯಮಿಗಳು ಮುಂದೆ ಬರಬೇಕು. ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕರೆ ನೀಡಿದರು.

ಸಾಧನೆಗೆ ಛಲ ಇದ್ದಲ್ಲಿ ಹಣದ ಅವಶ್ಯಕತೆವಿಲ್ಲ ಎಂದ ಸಚಿವರು, 1000ಕೋಟಿ ರೂ. ಯೋಜನೆ ಇದ್ದರೂ ಸಹ ಶೇ.50ರಷ್ಟು ಸಬ್ಸಿಡಿ ಬರುತ್ತೆ. ಕಲಬುರಗಿ ಜಿಲ್ಲೆಯಲ್ಲಿ ಜಲಾಶಯಗಳ ಒಂದು ಕಿ.ಮೀ ದೂರದಲ್ಲೇ ಹೊಲಗಳಿಗೆ ನೀರು ಇರುವುದಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಸಚಿವರು, ಪೈಪ್‌ ಲೈನ್‌ ಮೂಲಕ ನಿರಾವರಿ ಕಲ್ಪಿಸಿಕೊಂಡು ರೈತರು ಅಲ್ವಾವಧಿಯ ಬೆಳೆ ಬೆಳೆದು ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು ಎಂದರು.

ನಗರ ದಕ್ಷಿಣ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಮಾತನಾಡಿ, 12ನೇ ಶತಮಾನದಲ್ಲಿನ ಅನುಭವ ಮಂಟಪ ನೋಡಲು ನಮಗೆ ಸಾಧ್ಯವಾಗಿಲ್ಲ. ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ಸುಮಾರು 500ಕೋಟಿ ರೂ. ವೆಚ್ಚದಲ್ಲಿ ಬಸವಕಲ್ಯಾಣದಲ್ಲಿ ಈಗ ನಿರ್ಮಾಣವಾಗುತ್ತಿರುವ ಅನುಭವ ಮಂಟಪಕ್ಕೆ ನಾವು-ನೀವೆಲ್ಲರೂ ಸಾಕ್ಷಿಯಾಗಲಿದ್ದೇವೆ ಎಂದರು.

Advertisement

ಮಂಡಳಿ ಇತಿಹಾಸದಲ್ಲಿ ಈ ವರ್ಷ 3000 ಕೋಟಿ ರೂ. ಅನುದಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಕೆ.ಕೆ.ಆರ್‌.ಡಿ.ಬಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಪರಸ್ಪರ ಸಮನ್ವಯತೆಯಿಂದ ಈ ಭಾಗದ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದೆ. ಬಸವರಾಜ ಪಾಟೀಲ ಸೇಡಂ ಮಾರ್ಗದರ್ಶನದಲ್ಲಿ ಇದೇ ಸೆಪ್ಟೆಂಬರ್‌ 17 ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ವಿಜೃಂಭಣೆಯಿಂದ
ಆಯೋಜಿಸಲಾಗುತ್ತಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಡಾ|ಪಿ.ಎಸ್‌.ಶಂಕರ, ಜಗನ್ನಾಥ ಬಸವತೀರ್ಥಪ್ಪ ಸಜ್ಜನ್‌, ಡಾ|ಶುಭಾಂಗಿ, ವೇಣುಗೋಪಾಲ ಹೇರೂರು, ಎ.ಕೆ.ರಾಮೇಶ್ವರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿದರು. ಇದಲ್ಲದೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಕೃಷಿ-2050 ವಿಜನ್‌ ಕರಡು ಡಾಕ್ಯುಮೆಂಟ್‌ನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಯಿತು.

ಶಾಸಕರಾದ ಡಾ| ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಶಶೀಲ ಜಿ. ನಮೋಶಿ, ಡಾ| ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕ್ರೇಡಲ್‌ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ , ಸಂಘದ ಅಡಳಿತ ಮಂಡಳಿ ನಿರ್ದೇಶಕರಾದ ವಿ.ಎಂ.ಭೂಸನೂರಮಠ, ವಿ.ಶಾಂತರೆಡ್ಡಿ, ರೇವಣಸಿದ್ಧ ಜಾಲಾದಿ, ಪ್ರಭುದೇವ ಕಪಗಲ್‌, ಮಂಜುಳಾ ಡೊಳ್ಳೆ, ಕು.ದುರ್ಗನಾ ಬೇಗಂ, ತಿಪ್ಪಣ್ಣರೆಡ್ಡಿ ಕೋಲಿ, ಶ್ರೀನಿವಾಸ ನಂದಪೂರ, ಪ್ರಭುರಾಜ ಸಿದ್ಧರಾಮಪ್ಪ, ನೀಲಕಂಠ ಇಲೇರಿ, ಜಿಲ್ಲಾ ಧಿಕಾರಿ ಯಶವಂತ ವಿ. ಗುರುಕರ್‌, ಕ.ಕ.ಪ್ರ.ಅ. ಮಂಡಳಿ ಕಾರ್ಯದರ್ಶಿ ಆರ್‌.ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯತ್‌ ಸಿಇಒ ಡಾ| ಗಿರೀಶ್‌ ಡಿ. ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್‌, ಕ.ಕ.ಮಾ.ಸಂ. ಕೃ ಹಾಗೂ ಸಾಂ. ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಸೇರಿದಂತೆ ನಿರ್ದೇಶಕರುಗಳು ಮತ್ತಿತರು ಇದ್ದರು. ಕ.ಕ.ಮಾ.ಸಂ.ಕೃ ಹಾಗೂ ಸಾಂ. ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರು. ಮಂಡಳಿಯ ಪ್ರಗತಿ ವರದಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಸಂಘಕ್ಕೆ 220 ಕೋಟಿ ರೂ. ಬಿಡುಗಡೆ: ಸೇಡಂ ಸಂಘಕ್ಕೆ ಈವರೆಗೆ ನಮಗೆ 220 ಕೋಟಿ ರೂ. ಅನುದಾನ ಸರ್ಕಾರ ನೀಡಿದೆ. ಅದನ್ನು ಸಮರ್ಪಕ ಬಳಸಲಾಗುತ್ತಿದೆ. 4700 ಪ್ರಗತಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಒಂದು ಲಕ್ಷ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮತ್ತು ಸೇನೆ ನೇಮಕಾತಿಗೆ ತರಬೇತಿ ನೀಡುತ್ತಿದ್ದೇವೆ. ಮಹಿಳಾ ಸಶಕ್ತಿಕರಣಕ್ಕೆ ಪ್ರದೇಶದಲ್ಲಿ 1500 ಹೊಲಿಗೆ ಕೇಂದ್ರ ತೆರೆದು ಪ್ರತಿ ಬ್ಯಾಚಿಗೆ 15 ಜನರಂತೆ ಮೂರು ತಿಂಗಳ ತರಬೇತಿ ನೀಡುತ್ತಿದೆ. 75 ಸಾವಿರ ಜನರು ಇದರಲ್ಲಿ ಭಾಗಿಯಾಗಿದ್ದಾರೆ.

ಪ್ರದೇಶವನ್ನು ಹಸಿರುಮಯ ಮಾಡಲು ಸಂಘದಿಂದ ಕಳೆದ ವರ್ಷ 5 ಲಕ್ಷ ಸಸಿ ವಿತರಿಸಿದ್ದು, ಈ ವರ್ಷ 10 ಲಕ್ಷ ಸಸಿ ವಿತರಣೆ ಗುರಿ ಹೊಂದಿದ್ದೇವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next