Advertisement

ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’

09:21 AM Mar 31, 2023 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ನಡೆದ 14 ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಯುವ ನಿರ್ದೇಶಕ ದೇವೇಂದ್ರ ಬಡಿಗೇರ್ ನಿರ್ದೇಶನದ ‘ಇನ್’ ಕನ್ನಡ ಚಿತ್ರ ಏಷಿಯನ್ ಫಿಲ್ಮ್ ವಿಭಾಗದಲ್ಲಿ ಜ್ಯೂರಿ ಮೆಚ್ಚುಗೆಯ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

Advertisement

ವಿಶ್ವಾದ್ಯಂತ ಕೊರೊನಾ ಕಾರಣದಿಂದ ಉಂಟಾದ ಲಾಕ್ ಡೌನ್ ಪರಿಣಾಮದಿಂದ ಬೆಂಗಳೂರಿನಂತ‌ ಮಹಾನಗರದಲ್ಲಿ ಒಂಟಿಯಾಗಿರುವ ಮಧ್ಯಮ ವರ್ಗದ ಯುವತಿ ಅನುಭವಿಸುವ ಯಾತನೆ, ಸಂಕಟ, ಲಾಕ್ ಡೌನ್ ಸದರ್ಭದಲ್ಲಿ ಅವಳ ಜೀವನದಲ್ಲಾಗುವ ಬದಲಾವಣೆಯನ್ನು ಇಡೀ ಚಿತ್ರದಲ್ಲಿ ಒಬ್ಬಳೆ ಪಾತ್ರದ ಮೂಲಕ ಇಡೀ ಚಿತ್ರವನ್ನು ಒಂದೇ ಮನೆಯಲ್ಲಿ ನಿರ್ಮಾಣ .ಮಾಡುವ ಮೂಲಕ ವಿಭಿನ್ನ ಪ್ರಯೋಗ ಮಾಡಿದ್ದು, ಚಿತ್ರ ಪ್ರೇಕ್ಷಕರು ಹಾಗೂ ಫೆಸ್ಟಿವಲ್‌ನಲ್ಲಿ ಜ್ಯೂರಿಗಳ ಮೆಚ್ಚುಗೆ ಪಡೆದಿದೆ.

ನಟಿ ಪಾವನಾ ಗೌಡ ಇಡೀ ಚಿತ್ರದಲ್ಲಿ ಒಬ್ಬರೇ ಪಾತ್ರವನ್ನು ನಿಭಾಯಿಸಿದ್ದು, ಅವರ ಅಭಿನಯಕ್ಕೆ ಜ್ಯೂರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಕುರಿತು ಮಾತನಾಡಿರುವ ನಿರ್ದೇಶಕ ಬಡಿಗೇರ ದೇವೇಂದ್ರ, ಇದೊಂದು ಐತಿಹಾಸಿಕ ಮರೆಯಲಾರದ ಕ್ಷಣ, ಲಾಕ್ ಡೌನ್ ಸಮಯದಲ್ಲಿ ನಮ್ಮ ರೈಟರ್ ಶಂಕರ ಪಾಗೋಜಿ ಅವರೊಂದಿಗೆ ಸೇರಿ ಬರೆದು ಕಷ್ಟ ಪಟ್ಟು ಸಿನೆಮಾ ಮಾಡಿದ್ದು ನಮ್ಮ ಪ್ರಯೋಗ ಏಷ್ಯನ್ ಕೆಟಗೆರಿಯಲ್ಲಿ ಜ್ಯೂರಿಗಳ‌ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲು ಪ್ರೇರಣೆ ನೀಡಿದೆ ಎಂದು ತಿಳಿಸಿದ್ದಾರೆ.‌

Advertisement

ಚಿತ್ರದ ನಟಿ ಪಾವನಾ ಗೌಡ ‘ಇನ್’ ಚಿತ್ರ ನನ್ನ ಜೀವನದಲ್ಲಿ ಮರೆಯಲಾರದ ಅನುಭವ ನೀಡಿದೆ‌‌. ಲಾಕ್ ಡೌನ್ ಸಮಯದಲ್ಲಿ ಇಡೀ ಚಿತ್ರದಲ್ಲಿ ಒಬ್ಬಳೇ ಪಾತ್ರ ನಿಭಾಯಿಸುವುದು ಸವಾಲಿನ ಕೆಲಸವಾಗಿತ್ತು. ನಮ್ಮ ಶ್ರಮಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಅವಾರ್ಡ್ ಸಿಕ್ಕಿರುವುದು ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.

ಐಡಿಯಾ ವರ್ಕ್ಸ್ ಮೋಷನ್ ಪಿಚ್ಚರ್ ಅಡಿಯಲ್ಲಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಶಂಕರ ಪಾಗೋಜಿ ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.‌ ಭರತ್ ನಾಯ್ಕ್ ಸಂಗೀತ ನೀಡಿದ್ದಾರೆ. ಪ್ರಶಾಂತ್ ಅಯ್ಯಗಾರಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next