Advertisement

ಮೇಕೆಯ ‘ದುಬಾರಿ’ಹಸಿವು!..ಮಾಲೀಕನಿಗೆ ಬರೋಬ್ಬರಿ 62 ಸಾವಿರ ರೂ. ನಷ್ಟ

04:56 PM Jun 07, 2017 | Team Udayavani |

ನವದೆಹಲಿ: ಪ್ರಾಣಿ, ಪಕ್ಷಿಗಳಿಗೆ ಹಸಿವಾಗುವುದು ಸಹಜ. ಆಗ ಅವುಗಳು ಹುಲ್ಲನ್ನು ತಿಂದೋ, ನೀರನ್ನು ಕುಡಿದೋ ಅಥವಾ ಮನೆಯಲ್ಲಿರುವ ಪ್ರಾಣಿಗಳಾದರೆ ಮನೆಯ ಮಾಲೀಕರು ನೀಡುವ ಆಹಾರವನ್ನು ತಿನ್ನುತ್ತವೆ. ಆದರೆ ಹಸಿವಿನಿಂದ ಕಂಗೆಟ್ಟಿದ್ದ ಮೇಕೆಯೊಂದು ತನ್ನ ಮಾಲೀಕ ದುಬಾರಿ ಬೆಲೆ ತೆರುವಂತೆ ಮಾಡಿಬಿಟ್ಟಿದೆ!

Advertisement

ಮೇಕೆ ಹಸಿವಿಗೆ 66 ಸಾವಿರ ರೂ. ಬೆಲೆ ತೆತ್ತ!
ಉತ್ತರಪ್ರದೇಶದ ಕನ್ನೌಜ್ ಜಿಲ್ಲೆಯ ಸಿಲುವಪುರ್ ಗ್ರಾಮದಲ್ಲಿ ರೈತ ಸರ್ವೇಶ್ ಕುಮಾರ್ ಪಟೇಲ್ ಅವರು ಗರಿ, ಗರಿ ಪಿಂಕ್ ಬಣ್ಣದ 2 ಸಾವಿರ ರೂಪಾಯಿ ನೋಟುಗಳನ್ನು (ಒಟ್ಟು 66 ಸಾವಿರ) ಹೊಂದಿದ್ದ ಪರ್ಸ್ ಅನ್ನು ಕಿಸೆಯಲ್ಲಿಟ್ಟುಕೊಂಡಿದ್ದರು. ಸರ್ವೇಶ್ ಅವರು ಸ್ನಾನಕ್ಕೆ ತೆರಳುವ ಗಡಿಬಿಡಿಯಲ್ಲಿ ಮೇಕೆಯನ್ನು ಕಟ್ಟಿ ಹಾಕಿದ್ದ ಜಾಗದ ಸಮೀಪವೇ ಫೈಜಾಮ, ಪರ್ಸ್ ಇಟ್ಟು ಹೋಗಿದ್ದರು.

(ಇದನ್ನೂ ಓದಿ: ಶಿವಲಿಂಗಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಅಗೆದ)

ಹಸಿವಿನಿಂದ ಕಂಗೆಟ್ಟಿದ್ದ ಮೇಕೆ ಪಿಂಕ್ ಬಣ್ಣದ ನೋಟುಗಳನ್ನು ನೋಡಿ ತಿನ್ನುವ ವಸ್ತುವೇ ಇರಬೇಕೆಂದು ಪರ್ಸ್ ಗೆ ಬಾಯಿ ಹಾಕಿ ನೋಟುಗಳನ್ನು ತಿಂದು ಹಾಕಿತ್ತು. ಸರ್ವೇಶ್ ಅವರು ಸ್ನಾನ ಮಾಡಿ ಬಂದು ನೋಡಿದಾಗ ಮೇಕೆ ನೋಟುಗಳನ್ನು ತಿನ್ನುತ್ತಿತ್ತು! ಪರ್ಸ್ ನಲ್ಲಿ 2 ಸಾವಿರ ರೂ. ಮುಖಬೆಲೆಯ 33 ನೋಟುಗಳಿದ್ದವು, ಅದರಲ್ಲಿ ಮೇಕೆ 31 ನೋಟು(62 ಸಾವಿರ) ನೋಟುಗಳನ್ನು ತಿಂದು ಬಿಟ್ಟಿತ್ತು!

ಅಯ್ಯೋ…ಅಯ್ಯೋ ಅಂತ ಮೇಕೆ ಬಾಯಿಂದ 2 ನೋಟುಗಳನ್ನು (4ಸಾವಿರ) ಎಳೆದು ತೆಗೆದುಕೊಂಡಿರುವುದಾಗಿ ಸರ್ವೇಶ್ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೂ ಆ ನೋಟುಗಳು ಅರ್ಧಂಬರ್ಧ ಹರಿದಿದೆಯಂತೆ!

Advertisement

ಸರ್ವೇಶ್ ಅವರು ಮನೆ ಕಟ್ಟುತ್ತಿದ್ದು, ಅದಕ್ಕಾಗಿ ಇಟ್ಟಿಗೆ ಖರೀದಿಸಲೆಂದು ಅವರು ಆ ಹಣವನ್ನು ಕೂಡಿ ಇಟ್ಟಿದ್ದರಂತೆ. ಆದರೆ ಏನು ಮಾಡೋದು 66 ಸಾವಿರದಲ್ಲಿ ನನಗೀಗ ಸಿಕ್ಕಿರುವುದು 2ಸಾವಿರದ 2 ನೋಟುಗಳು ಮಾತ್ರ, ಉಳಿದ ಎಲ್ಲಾ ನೋಟುಗಳನ್ನು ಅದು ತಿಂದು ಬಿಟ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪರ್ಸ್ ನಲ್ಲಿದ್ದ ನೋಟು ಸೇರಿದಂತೆ ಅದರಲ್ಲಿದ್ದ ಎಲ್ಲಾ ಪೇಪರ್ ಗಳನ್ನು ತಿಂದು ಹಾಕಿರುವುದಾಗಿ ಸರ್ವೇಶ್ ತಿಳಿಸಿದ್ದಾರೆ. ಅಚ್ಚರಿ ಏನಪ್ಪಾ ಅಂದರೆ ಏನ್ ಮಾಡೋದು…ಆ ಮೇಕೆ ನನಗೆ ಮಗು ಇದ್ದಂತೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಮಾನವೀಯತೆ ಮೆರೆದಿರುವುದಾಗಿ ವರದಿ ವಿವರಿಸಿದೆ.

ಈ ಸುದ್ದಿ ಆ ಊರಿನಾದ್ಯಂತ ವೈರಲ್ ಆಗಿದ್ದೇ ತಡ ನೋಟು ತಿಂದು ಹಾಕಿದ ಮೇಕೆಯನ್ನು ನೋಡಲು ಸುತ್ತ ಮುತ್ತಲಿನಿಂದ ನೂರಾರು ಮಂದಿ ಸರ್ವೇಶ್ ಮನೆಗೆ ಆಗಮಿಸಿಸುತ್ತಿದ್ದಾರಂತೆ! ಅಷ್ಟೇ ಅಲ್ಲ ಸರ್ವೇಶ್ ಗೆ ಪುಕ್ಕಟ್ಟೆ ಸಲಹೆಯನ್ನೂ ನೀಡುತ್ತಿದ್ದಾರಂತೆ, ನೀವು ಆ ಮೇಕೆಯನ್ನು ಮಾರಾಟ ಮಾಡು, ಪೊಲೀಸರ ವಶಕ್ಕೆ ಒಪ್ಪಿಸು ಅಂತ. ಆದರೆ ಸರ್ವೇಶ್ ಅದ್ಯಾವುದನ್ನೂ ಲೆಕ್ಕಿಸದೆ ಮೇಕೆಯನ್ನು ಮನೆಯಲ್ಲೇ ಇಟ್ಟುಕೊಂಡು ಸಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next