Advertisement

ತುಂಜನ್‌ ಪರಂಬಿನಲ್ಲಿ  ಹಂದೆ ಯಕ್ಷ ವೃಂದ

02:23 PM Oct 06, 2017 | Team Udayavani |

ಕೇರಳದ ತಿರೂರಿನಲ್ಲಿ ಮಲಯಾಳ ಕಾವ್ಯದ ಪಿತಾಮಹನೆಂದು ಕರೆಯಲ್ಪಡುವ ತುಂಜತ್ತ್ ಎಳುತ್ತಚ್ಚನ್‌ ಅವರ ಸ್ಮಾರಕವಿದೆ. ಇಲ್ಲಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆಂದೇ ತುಂಜನ್‌ ಸ್ಮಾರಕ ಟ್ರಸ್ಟ್‌ ಹುಟ್ಟಿಕೊಂಡಿದೆ. ಹಿರಿಯ ಸಾಹಿತಿ ಎಂ.ಟಿ. ವಾಸುದೇವನ್‌ ನಾಯರ್‌ ಇದರ ಅಧ್ಯಕ್ಷರಾಗಿ ಆರಂಭದಿಂದಲೇ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ. ನವರಾತ್ರಿಯ ಕಾಲದಲ್ಲಿ “ವಿದ್ಯಾರಂಭ ಕಲೋತ್ಸವ’ವನ್ನು ನಡೆಸುವುದು ಅಲ್ಲಿ ಪದ್ಧತಿ. ಪ್ರತಿದಿನ ಭಾರತದ ಇತರ ಪ್ರದೇಶಗಳ ಕಲಾಪ್ರದರ್ಶನ ಈ ಸಂದರ್ಭದಲ್ಲಿ ನಡೆಯುತ್ತದೆ. ಐದು ದಿನಗಳ ಪರ್ಯಂತ ನಡೆಯುವ ಈ ಉತ್ಸವದಲ್ಲಿ ಎರಡನೆಯ ದಿನ ಕೋಟದ “ಯಕ್ಷ ವೃಂದ’ದವರು ಸುಜಯೀಂದ್ರ ಹಂದೆಯವರ ನೇತೃತ್ವದಲ್ಲಿ “ಪಂಚವಟಿ-ಜಟಾಯು ಮೋಕ್ಷ’ ಎಂಬ ಕಥಾ ಪ್ರಸಂಗವನ್ನು ಆಡಿ ತೋರಿಸಿದರು. ತುಂಜನ್‌ ಪರಂಬಿನಲ್ಲಿ ಮೊತ್ತಮೊದಲ ಬಾರಿಗೆ ನಡೆದ ಈ ಯಕ್ಷಗಾನ ಪ್ರದರ್ಶನವು ಮಲಯಾಳಿ ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸಿತು.

Advertisement

ರಾಮ -ಲಕ್ಷ್ಮಣ -ಸೀತೆಯರು ವನವಾಸಕ್ಕೆ ಹೊರಟು ದಂಡಕಾರಣ್ಯವನ್ನು ಪ್ರವೇಶಿಸಿ, ಅಲ್ಲಿ ಎಲೆಮನೆಯನ್ನು ಕಟ್ಟಿ ವಾಸವಾಗಿರುವುದೆಂದು ನಿರ್ಧಾರ ಮಾಡುವುದರೊಂದಿಗೆ ಆರಂಭವಾಗುವ ಕಥಾ ಪ್ರಸಂಗವು ಶೂರ್ಪನಖೀಯ ಆಗಮನ, ಮಾಯಾಶೂರ್ಪನಖೀ, ಆಕೆಯ ಮಾನಭಂಗ, ಸೇಡು ತೀರಿಸಿಕೊಳ್ಳಲು ಅವಳು ರಾವಣನ ಬಳಿಸಾರುವುದು, ರಾವಣ ಬ್ರಾಹ್ಮಣ ಸನ್ಯಾಸಿಯಾಗಿ ಬರುವುದು, ಸೀತಾಪಹರಣ, ಜಟಾಯು ಪ್ರತಿಭಟಿಸಿ ಪ್ರಾಣಾಂತಿಕವಾಗಿ ಗಾಯಗೊಳ್ಳುವುದು, ರಾಮ ಲಕ್ಷ್ಮಣರ ಆಗಮನದೊಂದಿಗೆ ಮುಂದುವರೆದು ಜಟಾಯು ಮೋಕ್ಷದಲ್ಲಿ ಕೊನೆಗೊಳ್ಳುತ್ತದೆ.

    ರಾಮನ ಪಾತ್ರದಲ್ಲಿ ಸುಜಯೀಂದ್ರ ಹಂದೆ ತಮ್ಮ ಪಾತ್ರೋಚಿತ ಗಾಂಭೀರ್ಯ ಮತ್ತು ಸಮರ್ಥ ಅಭಿವ್ಯಕ್ತಿಗಳಿಂದ ಗಮನ ಸೆಳೆದರು. ಸೀತೆಯಾಗಿ ಗಣಪತಿ ಹೆಗಡೆ, ಲಕ್ಷ್ಮಣನಾಗಿ ತಮ್ಮಣ್ಣ ಗಾಂವ್ಕರ್‌, ಶೂರ್ಪನಖೀಯಾಗಿ ನರಸಿಂಹ ತುಂಗ, ಮಾಯಾ ಶೂರ್ಪನಖೀಯಾಗಿ ಮನೋಜ್‌ ಭಟ್‌, ರಾವಣನಾಗಿ ಕೃಷ್ಣಮೂರ್ತಿ ಉರಾಳ, ರಾವಣ ಸನ್ಯಾಸಿಯಾಗಿ ರಾಘವೇಂದ್ರ ತುಂಗ, ಮಾಯಾ ಜಿಂಕೆಯಾಗಿ ಉದಯ ಬೋವಿ ಮತ್ತು ಜಟಾಯುವಾಗಿ ನವೀನ್‌ ಮಣೂರು ಮನಮುಟ್ಟುವ ಅಭಿನಯ ನೀಡಿದರು. ಕೊನೆಯ ಜಟಾಯು ಮೋಕ್ಷದ ಸನ್ನಿವೇಶವು ಬಹಳ ಹೃದಯ ಸ್ಪರ್ಶಿಯಾಗಿತ್ತು. ಲಂಬೋದರ ಹೆಗಡೆಯವರ ಭಾವಪೂರ್ಣ ಭಾಗವತಿಕೆ, ಭಾರ್ಗವ ಹೆಗ್ಗೊಡು ಅವರ ಚೆಂಡೆ ಮತ್ತು ವೆಂಕಟರಮಣ ಅವರ ಮದ್ದಳೆ ವಾದನಗಳು ಪ್ರಸ್ತುತಿಯ ಯಶಸ್ಸಿಗೆ ಪೂರಕವಾಗಿ ಪ್ರವರ್ತಿಸಿದವು. ರಾಜು ಹಂದಟ್ಟು ಮತ್ತು ಸುದರ್ಶನ ಉರಾಳ ಅವರ ಪ್ರಸಾದನ ಮತ್ತು ವಸ್ತ್ರಾಲಂಕಾರಗಳು ಬಹಳ ಅಚ್ಚುಕಟ್ಟಾಗಿದ್ದವು.

    ಕರಾವಳಿ ಪ್ರದೇಶದ ಯಕ್ಷಗಾನದೊಂದಿಗೆ ಬಹಳಷ್ಟು ಸಾಮ್ಯವಿರುವ ಕಥಕಳಿ, ಕೂಡಿಯಾಟ್ಟಂ, ಓಟ್ಟಂ ತುಳ್ಳಲ್‌ಗ‌ಳನ್ನು ನೋಡಿ ರೂಢಿಯಿರುವ ಕೇರಳಿಗರಿಗೆ ಅಚ್ಚರಿಯೆನಿಸಿದ್ದು ಭಾಗವತರ ಏರುಧ್ವನಿಯ ಕಂಠ. ಅಪಾರ ಶ್ರಮ ಮತ್ತು ತರಬೇತಿಯನ್ನು ಬೇಡುವ ಭಾಗವತಿಕೆಯಲ್ಲಿ ಲಂಬೋದರ ಹೆಗಡೆಯವರ ನಿರ್ವಹಣೆಯನ್ನು ಅನೇಕರು ಮೆಚ್ಚಿಕೊಂಡರು. ರಾವಣನ ಮಾತಿನ ಮತ್ತು ಆರ್ಭಟದ ವೈಖರಿ, ಶೂರ್ಪನಖೀಯ ಅಭಿನಯಗಳೂ ಜನ ಮೆಚ್ಚುಗೆ ಪಡೆದವು.

ಪಾರ್ವತಿ ಜಿ. ಐತಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next