Advertisement

ರಾಜ್ಯದಲ್ಲಿ “ಜಾತಿ’ಗೊಂದು ನಿಗಮ; “ಮತ’ಗಮನ

11:24 PM Mar 19, 2023 | Team Udayavani |

ಬೆಂಗಳೂರು: ಚುನಾವಣೆ ಬಂತೆಂದರೆ ಘೋಷಣೆ ಮತ್ತು ಓಲೈಕೆಗಳ ಸುಗ್ಗಿಯ ಕಾಲ ಬಂದಂತೆ. ಮುಖ್ಯವಾಗಿ ಮತದಾರರನ್ನು ಓಲೈಸಿಕೊಳ್ಳಲು ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಘೋಷಣೆಗಳೆಂಬ “ಬಿತ್ತನೆ’ ಮೂಲಕ “ಮತ’ದ ಇಳುವರಿ ಪಡೆಯುವ ಚುನಾವಣ ಕೃಷಿಯಲ್ಲಿ ರಾಜಕೀಯ ಪಕ್ಷಗಳು ತೊಡಗಿಸಿಕೊಂಡಿರುತ್ತವೆ. ಅದರಂತೆ ದಿನಕ್ಕೊಂದು ಜಾತಿವಾರು ನಿಗಮ ಘೋಷಿಸುವ ಮೂಲಕ ಆಡಳಿತಾರೂಢ ಪಕ್ಷ “ಜಾತಿ ನಿಗಮ’ದ ಮೂಲಕ “ಮತ ಗಮನ’ ಕೇಂದ್ರೀಕರಿಸಿದೆ.
ಹಿಂದುಳಿದ ವರ್ಗಗಳು ಮತ್ತು ಅವಕಾಶ ವಂಚಿತ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಸರಕಾರ ಮತ್ತು ಆಯಾ ಇಲಾಖೆಗಳ ಕಾರ್ಯಕ್ರಮಗಳ ಜತೆಗೆ ನಿಗಮಗಳಿಂದ ಪೂರಕ ವ್ಯವಸ್ಥೆಯನ್ನು ಸರಕಾರಗಳು ಪಾಲಿಸಿ ಕೊಂಡು ಬಂದಿವೆ. ಈ ನಿಗಮಗಳಿಂದ ಜಾತಿ-ಸಮುದಾಯಗಳ ಅಭಿವೃದ್ಧಿ ಆಗುತ್ತದೆಯೇ ಎಂಬ ಪ್ರಶ್ನೆಗೆ ಸಮಾಧಾನಕರ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ ಈ ನಿಗಮಗಳು ರಾಜಕೀಯ ಪುನರ್ವಸತಿ ಕೇಂದ್ರಗಳು ಎಂಬ ಆಪಾದನೆಗಳೂ ಅಂಟಿಕೊಂಡಿವೆ.

Advertisement

ಆರ್ಥಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಸಣ್ಣ-ಸಣ್ಣ ಜಾತಿಗಳು, ಎಸ್ಸಿ-ಎಸ್ಟಿ ಪಂಗಡಗಳು, ಅಲೆಮಾರಿ, ಬುಡಕ್ಕಟ್ಟು ಸಮುದಾಯಗಳಿಗಷ್ಟೇ ಅಲ್ಲದೇ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬಲಿಷ್ಠವಾಗಿರುವ ಸಮುದಾ ಯಗಳಿಗೂ ಅಭಿವೃದ್ಧಿ ನಿಗಮ ಘೋಷಿಸಲಾಗಿದೆ. ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ 25ಕ್ಕೂ ಹೆಚ್ಚು ವಿವಿಧ ಜಾತಿ ವಾರು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಚುನಾವಣೆ ಹೊಸ್ತಿಲಲ್ಲಿರುವ ಈ ವರ್ಷದಲ್ಲಿ ಕಳೆದ ಎರಡು ತಿಂಗಳಲ್ಲಿ ನಿಗಮಗಳ ಘೋಷಣೆ ಹೆಚ್ಚಾಗಿದ್ದು, ಅದರಲ್ಲೂ ಬಜೆಟ್‌ ಅಧಿವೇಶನ ಮುಗಿದ ಬಳಿಕವಂತೂ ದಿನಕ್ಕೊಂದು ಎಂಬಂತೆ ಹೊಸ ನಿಗಮದ ಘೋಷಣೆ ಮಾಡಲಾಗುತ್ತಿದೆ.

ರಾಜ್ಯದಲ್ಲಿನ ಕಾಯಕ ಸಮಾಜಗಳಿಂದ ವೃತ್ತಿ ಆಧಾರಿತ ನಿಗಮಗಳ ಸ್ಥಾಪನೆಗೆ ಸಾಕಷ್ಟು ಬೇಡಿಕೆಗಳು ಬಂದಿದೆ. ಸರಕಾರದಿಂದ ಪ್ರಸಕ್ತ ವರ್ಷದಲ್ಲಿ ಇದನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿಯ ಬಜೆಟ್‌ನಲ್ಲಿ ಹೇಳಿದ್ದಾರೆ. ಅದರಂತೆ ಈಗಾಗಲೇ ನಾರಾಯಣಗುರು ಅಭಿವೃದ್ಧಿ ನಿಗಮ, ಗಾಣಿಗ ಅಭಿವೃದ್ಧಿ ನಿಗಮ, ಹೂಗಾರ ಸಮುದಾಯ ಅಭಿವೃದ್ಧಿ ನಿಗಮ, ಕುಂಬಾರ, ಬಲಿಜ, ಹಡಪದ, ಮೇದಾರ, ತಿಗಳರ ಅಭಿವೃದ್ಧಿ ನಿಗಮಗಳು ಸೇರಿಕೊಂಡಿವೆ. ಈ ಪಟ್ಟಿಯಲ್ಲಿ ಇನ್ನೂ ಕೆಲವು ಹೆಸರುಗಳು ಸೇರಿಕೊಳ್ಳುವುದನ್ನು ಅಲ್ಲಗಳೆಯುವಂತಿಲ್ಲ.

ನಿಗಮಗಳಿಗೆ ಅನುದಾನ ಹೆಚ್ಚಳ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಹಿತ ವಿವಿಧ 6 ಅಭಿವೃದ್ಧಿ ನಿಗಮಗಳಿಗೆ ನೀಡು ತ್ತಿರುವ ಅನುದಾನವನ್ನು ಹೆಚ್ಚಿಸಿ ಈ ವರ್ಷದ ಬಜೆಟ್‌ನಲ್ಲಿ 795 ಕೋಟಿ ರೂ. ಕೊಡಲಾಗಿದೆ. ಹೆಚ್ಚುವರಿ ಅನುದಾನ ಮತ್ತು ನಿಗಮಗಳಲ್ಲಿ ಈಗಾಗಲೇ ಲಭ್ಯವಿರುವ ಅನುದಾನ ಸೇರಿ ಪ್ರಸಕ್ತ ವರ್ಷ 1,842 ಕೋಟಿ ರೂ.ಗಳಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಅದೇ ರೀತಿ ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ 11 ಅಭಿವೃದ್ಧಿ ನಿಗಮಗಳಿಗೆ 596 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದ್ದು, ಒಟ್ಟಾರೆ 1,600 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಗುರಿ ಇಟ್ಟುಕೊಳ್ಳಲಾಗಿದೆ.
ಮೂರು ವರ್ಷಗಳಲ್ಲಿ ನಿಗಮಳಿಗೆ ಕೊಟ್ಟ ಅನುದಾನ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಆರಂಭದಲ್ಲಿ 500 ಕೋಟಿ ರೂ. ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಬ್ರಾಹ್ಮಣ ಅಭಿ ವೃದ್ಧಿ ಮಂಡಳಿಗೆ 50 ಕೋಟಿ ರೂ. ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ.ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ. ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ರೂ ಆರ್ಯವೈಶ್ಯ ಅಭಿವೃದಿ œ ನಿಗಮಕ್ಕೆ 10 ಕೋಟಿ ರೂ.ಗಳನ್ನು, ಕುಂಬಾರ ಸಮುದಾಯದ ಅಭಿವೃದ್ಧಿಗಾಗಿ 20 ಕೋಟಿ ರೂ.ಗಳನ್ನು ಮತ್ತು ಗೊಲ್ಲ ಸಮುದಾಯದವರ ಅಭಿವೃದ್ಧಿಗಾಗಿ 10 ಕೋಟಿ ರೂ.ಗಳನ್ನು 2020-21ರ ಬಜೆಟ್‌ನಲ್ಲಿ ಒದಗಿಸಲಾಗಿತ್ತು.
ಅದೇ ರೀತಿ 2021-2ರ ಬಜೆಟ್‌ನಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಆರ್ಯವೈಶ್ಯ ಸಮುದಾಯ ಅಭಿವೃದಿ œ ನಿಗಮ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ, ಕಾಡುಗೊಲ್ಲರ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಹಾಗೂ ಸವಿತಾ ಸಮಾಜ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ.ಅನುದಾನ ಒದಗಿಸಲಾಗಿತ್ತು.

ಅಭಿವೃದ್ಧಿ ನಿಗಮ; ನ್ಯಾಯಾಲಯದಲ್ಲಿ ಪ್ರಶ್ನೆ
ಜಾತಿವಾರು ನಿಗಮಗಳ ಸ್ಥಾಪನೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಜಾತಿವಾರು ಅಭಿವೃದ್ಧಿ ನಿಗಮಗಳಿಗೆ ಯಥೇತ್ಛವಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಿದ್ದು ಬಿ.ಎಸ್‌ ಯಡಿಯೂರಪ್ಪನವರು, ವಿಶೇಷವಾಗಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ, ಒಕ್ಕಲಿಗರ ಅಭಿವೃದ್ದಿ ನಿಗಮ ಮತ್ತು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ ಸಾಕಷ್ಟು ವಿವಾದ ಮತ್ತು ರಾಜಕೀಯ ಚರ್ಚೆಗೆ ವೇದಿಕೆಯಾಗಿತ್ತು. ಜಾತಿವಾರು ನಿಗಮಗಳನ್ನು ಸ್ಥಾಪಿಸುವ ಸರಕಾರದ ಕ್ರಮವನ್ನು ಹೈಕೋರ್ಟ್‌ ನಲ್ಲೂ ಪ್ರಶ್ನಿಸಲಾಗಿದೆ. ನಾಗನಗೌಡ, ಹಾವನೂರು, ಚಿನ್ನಪ್ಪರೆಡ್ಡಿ ಸಹಿತ ಯಾವ ಹಿಂದುಳಿದ ವರ್ಗಗಳ ಆಯೋಗವು ಲಿಂಗಾಯತ, ಬ್ರಾಹ್ಮಣ, ಮರಾಠ ಮತ್ತು ಆರ್ಯವೈಶ್ಯ ಜನಾಂಗವನ್ನು ಹಿಂದುಳಿದ ವರ್ಗ ಎಂದು ಗುರುತಿಸಿಲ್ಲ. ರಾಜ್ಯದಲ್ಲಿ 352 ಹಿಂದುಳಿದ ವರ್ಗಗಳು, 152 ಎಸ್ಸಿ, ಎಸ್ಟಿ ವರ್ಗಗಳಿವೆ. 352 ಹಿಂದುಳಿದ ವರ್ಗಗಳು ಇರುವಾಗ ಲಿಂಗಾಯತ ಮತ್ತು ಮರಾಠ ಜಾತಿಗಳನ್ನು ಮಾತ್ರ ಸರಕಾರ ಆಯ್ಕೆ ಮಾಡಿಕೊಂಡಿದೆ. ಜಾತಿ ಮತ್ತು ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಉದ್ದೇಶಗಳಿಗೆ ಸರಕಾರ ನಿಗಮ-ಮಂಡಳಿ ರಚಿಸಲಾಗಿದೆ ಎಂದು ಆರೋಪಿಸಲಾಗಿದೆ.

Advertisement

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next