ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಹೆಜ್ಜೆ ಹೆಜ್ಜೆಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೇಲೆ ಕಿಡಿಕಾರುತ್ತಿದ್ದಾರೆ.
ಆದರೆ, ಟ್ರಂಪ್ 2020ರ ಚುನಾವಣೆಯಲ್ಲಿ ಗೆಲ್ಲಲು ಚೀನ ಅಧ್ಯಕ್ಷರ ನೆರವು ಕೋರಿದ್ದ ಅಂಶ ಬೆಳಕಿಗೆ ಬಂದಿದೆ.
2019ರಲ್ಲಿ ಜಪಾನ್‌ನಲ್ಲಿ ನಡೆದ ಜಿ-20 ಶೃಂಗಸಭೆ ವೇಳೆ ಕ್ಸಿ ಜಿನ್‌ಪಿಂಗ್ ಜೊತೆ ಟ್ರಂಪ್ ಈ ಮಾತುಕತೆ ನಡೆಸಿದ್ದಾರೆ. ‘ಚೀನ ಆರ್ಥಿಕವಾಗಿ ಬೆಂಬಲಿಸಿದರೆ ಖಂಡಿತಾ ನಾನು 2020ರ ಚುನಾವಣೆಯಲ್ಲಿ ಮರು ಆಯ್ಕೆಯಾಗುತ್ತೇನೆ. ಚೀನವು ಅಮೆರಿಕದ ರೈತರಿಂದ ಹೆಚ್ಚೆಚ್ಚು ಗೋಧಿ ಮತ್ತು ಸೊಯಾಬೀನ್ಸ್ ಖರೀದಿಸಿದರೆ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗುತ್ತದೆ. ರೈತರಿಂದ ನನಗೆ ಮತಗಳು ಬೀಳುತ್ತವೆ’ ಎಂದು ಟ್ರಂಪ್ ಅನಿಸಿಕೆ ಹಂಚಿಕೊಂಡಿದ್ದರಂತೆ. 2016ರ ಚುನಾವಣೆಯಲ್ಲೂ ರೈತರ ನಿರ್ಣಾಯಕ ಮತಗಳಿಂದಲೇ ಟ್ರಂಪ್ ಗೆದ್ದಿದ್ದರು.
ಟ್ರಂಪ್ ಆಪ್ತರಾಗಿದ್ದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್‌ರ “ದಿ ರೂಮ್ ವೇರ್ ಇಟ್ ಹ್ಯಾಪನ್ಡ್’ ಎಂಬ ಕೃತಿಯಲ್ಲಿ ಈ ಸ್ಫೋಟಕ ಮಾಹಿತಿ ಉಲ್ಲೇಖವಾಗಿದೆ. “ನ್ಯೂಯಾರ್ಕ್ ಟೈಮ್ಸ್’ ಮತ್ತು “ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಳು ಕೃತಿಯ ಆಯ್ದಭಾಗ ಪ್ರಕಟಿಸಿ ಟ್ರಂಪ್‌ಗೆ ಆಘಾತ ನೀಡಿವೆ.
ದಬ್ಟಾಳಿಕೆ ತಡೆಗೆ ಮಸೂದೆಗೆ ಸಹಿ: ಮತ್ತೂಂದೆಡೆ, ಚೀನದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಅಮೆರಿಕ ಸಂಸತ್ ರೂಪಿಸಿರುವ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ತಪ್ಪಿತಸ್ಥ ಚೀನ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಈ ಕಾಯ್ದೆ ದಾರಿ ಮಾಡಿಕೊಡುತ್ತದೆ.
ಚೀನದ ಉಯಿಘರ್ ಮುಸ್ಲಿಮರು ಸೇರಿದಂತೆ ಇತರ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಜನಾಂಗೀಯ ಅಸ್ಮಿತೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಿರ್ಮೂಲನೆ ಮಾಡಲು ಯತ್ನಿಸುವವರನ್ನು “ದಿ ಉಯಿಘರ್ ಮಾನವ ಹಕ್ಕು ಉಲ್ಲಂಘನೆ ಕಾಯ್ದೆ-2020’ರಡಿ ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಉಯಿಘರ್ ಮುಸ್ಲಿಮರ ಮೇಲೆ ದಬ್ಟಾಳಿಕೆ ನಡೆಸುವ ಚೀನದ ಅಧಿಕಾರಿಗಳನ್ನು ಈ ಕಾಯ್ದೆ ಹೊಣೆಗಾರರನ್ನಾಗಿ ಮಾಡಲಿದೆ.
ಟ್ರಂಪ್ ಸಹಿ ಹಾಕುವುದಕ್ಕೂ ಮೊದಲು, ಅಮೆರಿಕದ ಸಂಸತ್‌ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಸದಸ್ಯರ ಬೆಂಬಲದೊಂದಿಗೆ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಮಧ್ಯೆ, ಈ ಕಾಯ್ದೆಯನ್ನು ಟೀಕಿಸಿರುವ ಚೀನ, ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ತನ್ನ ನೀತಿಗಳ ಮೇಲೆ ಆಕ್ರಮಣ ಮಾಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಈ ನಿಟ್ಟಿನಲ್ಲಿ ಅಮೆರಿಕಕ್ಕೆ ತಿರುಗೇಟು ನೀಡಲಾಗುವುದು. ಮುಂದಾಗುವ ಪರಿಣಾಮಗಳನ್ನು ಅಮೆರಿಕ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.