Advertisement

ಒಳ ಪಟದಲ್ಲಿ…

07:41 PM Oct 04, 2019 | Lakshmi GovindaRaju |

ಪಕ್ಷಿ, ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಕೊಂಡಾಗ, ಅದರ ಎದೆಯಲ್ಲಿ ಹುಟ್ಟುವ ಝಲ್ಲೆನ್ನುವ ಭಯ; ಆ ಭಯವನ್ನು ಭೇದಿಸುತ್ತಲೇ, ಕನ್ನಡಿಯೊಳಗೆ ಕುಳಿತವರಾರು ಎನ್ನುವ ಶೋಧಕ್ಕೆ ಇಳಿಯುತ್ತದೆ…

Advertisement

ಸಾಮಾನ್ಯವಾಗಿ ಬರ್ಡ್‌ ಫೋಟೊಗ್ರಫಿಗೆ ನಾನು ಹೋಗುವುದು, ಸ್ಕೂಟರಿನಲ್ಲಿ. ನನಗೆ ಕಾರು ಬಿಡಲು ಬರಲ್ಲ ಅನ್ನೋದು ಮುಖ್ಯ ಕಾರಣವಾದರೆ, ಎಲ್ಲಿಗೆ ಬೇಕಾದರೂ ಈ ಗಾಡಿಯನ್ನು ನುಗ್ಗಿಸಿಕೊಂಡು ಹೋಗಬಹುದು ಅನ್ನೋದು ಮರಿ ಕಾರಣ. ಗಾಡಿ ನಿಲ್ಲಿಸಬೇಕಿದ್ದರೆ, ಎಲ್ಲಿ ನಿಲ್ಲಿಸಿದರೆ ಗಾಡಿಯಿಂದ ಉಪಯೋಗ ಅನ್ನೋ ಯೋಚನೆ ಮಾಡಿ ನಿಲ್ಲಿಸುತ್ತೇನೆ.

ನಾನು ಹಕ್ಕಿ ಪೋಟೊ ತೆಗೆಯೋಕೆ ಶುರುಮಾಡಿದ್ದು ನನ್ನ ಮನೆಯಂಗಳದಲ್ಲಿ. ಒಂದು ದಿನ ಸನ್‌ ಬರ್ಡ್‌, ನನ್ನ ಸ್ಕೂಟರಿನ ಕನ್ನಡಿಯಲ್ಲಿ ಮುಖವನ್ನು ಇಣುಕಿಸುತ್ತಾ, ಮೂತಿಯಿಂದ ಕುಕ್ಕುತ್ತಿತ್ತು. ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಂಡಾಗ, ಹಕ್ಕಿಗಳಲ್ಲಿ ಆಗುವ ಒಂದು ಭಯ, ಆ ಭಯ ಭೇದಿಸುತ್ತಾ, ಅವುಗಳೊಳಗೆ ಹುಟ್ಟುವ “ಹುಡುಕಾಟ’ವನ್ನು ಬಗೆಬಗೆಯಲ್ಲಿ ಕಂಡೆ.

ಸ್ಕೂಟರ್‌ ಪಂಕ್ಚರ್‌ ಆದಾಗಲೆಲ್ಲ, ಅದರಿಂದ ನನಗೆ ಉಪಯೋಗವಿದೆ. ಒಮ್ಮೆ ಮಂಡ್ಯದ ಹಳ್ಳಿಯೊಂದಕ್ಕೆ ಗಿಳಿಗಳ ಫೋಟೊ ತೆಗೆಯಲು ಹೊರಟಿದ್ದೆ. ಆಗ ಗಾಡಿ ನಿಲ್ಲಿಸಿ, ನಾಲ್ಕೈದು ನಿಮಿಷವೂ ಆಗಿರಲಿಲ್ಲ. ಎರಡು ಎಲೆ ಹಕ್ಕಿಗಳು (Jerdons leaf bird) ಕನ್ನಡಿಯಲ್ಲಿ ನೋಡಿಕೊಂಡು ಕುಕ್ಕಾಟ ಆಡುತ್ತಿವೆ. ತಮ್ಮದೇ ಭಾಷೆಯಲ್ಲಿ ಏನನ್ನೋ ಪಿಸುಗುಡುತ್ತಿವೆ. ಆ ಇಡೀ ದಿನ ಅವು ಮೂರ್ನಾಲ್ಕು ಸಲ ಬಂದೂ ಬಂದು, ಕನ್ನಡಿ ನೋಡಿಕೊಂಡು ಹೋದವು.

ಒಮ್ಮೆ ಮುನ್ನಾರಿಗೆ ಹೋಗಿದ್ದಾಗ, ಪುಟ್ಟ ವಾಕಿಂಗ್‌ಗೆ ಹೊರಟಿದ್ದೆ. ಕೈಯಲ್ಲಿ ಕ್ಯಾಮೆರಾ ಇದ್ದೇ ಇತ್ತು. ಆ ಸಣ್ಣ ದಾರಿಯಲ್ಲಿ ಕಾರೊಂದನ್ನು ತೊಳೆಯಲು ನಿಲ್ಲಿಸಿದ್ದರು. ಹಳದಿ ಚೇಕಡಿ ಪಕ್ಷಿಯೊಂದು ಕಾರಿನ ಗಾಜುಗಳಲ್ಲಿ ಪ್ರತಿಬಿಂಬಾಕಾಂಕ್ಷಿಯಾಗಿ ಹುಡುಕಾಡುತ್ತಿತ್ತು. ಅಷ್ಟೇ ಅಲ್ಲ, ಏರಿಯಲ್‌ ಮೇಲೇರಿ ಏನೇನೋ ಸರ್ಕಸ್‌ ಮಾಡುತ್ತಿತ್ತು. ಮತ್ತೂಮ್ಮೆ ಕುರಿಮರಿಯೊಂದು ಸ್ಕೂಟರನ್ನೇರಿ ಕನ್ನಡಿಯಲ್ಲಿ ಇಣುಕುವ ಪ್ರಯತ್ನ ನನಗೆ ಸ್ವಲ್ಪದರಲ್ಲೇ ಮಿಸ್ಸಾಗಿತ್ತು.

Advertisement

ತೀರಾ ಇತ್ತೀಚೆಗೆ, ಮಂಡ್ಯದ ಕ್ಯಾತುಂಗೆರೆಯ ಬಳಿ ಫೋಟೊ­ಗ್ರಫಿಗಾಗಿ ಹೋಗಿದ್ದೆ. ಸನ್‌ ಬರ್ಡ್‌ ಆರಾಮಾಗಿ ಸ್ಕೂಟರ್‌, ಏರಿ ವಿವಿಧ ಭಂಗಿಗಳಲ್ಲಿ ಕನ್ನಡಿಯೊಳಗಿನ ಹಕ್ಕಿಗಾಗಿ ಹುಡುಕಾ­ಡುತ್ತಿತ್ತು. ಸ್ವಲ್ಪ ಹೊತ್ತು ಕಳೆದ ಬಳಿಕ ಮತ್ತೂ ಎರಡು, ಮೂರು ಜೊತೆಗೂಡಿದವು. ಅವುಗಳ ಹುಡುಕಾಟದ ಆತುರ, ಎರಡೂ ಕಡೆಯ ಕನ್ನಡಿಗಳಿಗೆ ಹಾರಾಟ, ಭಾವತೀವ್ರತೆಯಿಂದ ಕೂಡಿತ್ತು. ಹೇಗಾದರೂ ಸರಿ ಒಳಗಿರುವ, ತೀರಾ ಸನಿಹದಲ್ಲಿರುವ ಆ ಹಕ್ಕಿಯನ್ನು ಹಿಡಿಯಲೇಬೇಕೆಂಬ ಹಂಬಲವೇನೋ!

ಕೆಲವು ಕ್ಲಿಕ್ಕಾದವು, ಮತ್ತೆ ಕೆಲವು ಮಿಸ್ಸಾದವು. ಅಷ್ಟು ವೇಗದಲ್ಲಿರುವ ಕಾರಣ ಅಪರ್ಚರ್‌, ಷಟರ್‌ ಸ್ಪೀಡ್‌ ಅನ್ನು ಕೆಲವು ಸಲ ಹೊಂದಿಸಲಾಗಲ್ಲ. ಹ್ಯಾಂಡ್‌ ಹೆಲ್ಡ್‌ ಷಾಟ್‌ ಆದರೆ ಸ್ವಲ್ಪವಾದರೂ ಬ್ಲಿರ್ರ ಆಗುತ್ತದೆ. ಹೇಳಿಕೇಳಿ, ನನ್ನದು ಅರವತ್ತು ದಾಟಿದ ಕೈಗಳು. ಆದರೆ, ಟ್ರೈಪಾಡ್‌ ಹಾಕಿದಾಗ ಆ ಎತ್ತರ ತಗ್ಗುಗಳಿಗೆ ತಕ್ಷಣ ಅಡ್ಜಸ್ಟ್‌ ಮಾಡಲೂ ಕಷ್ಟ. ಇನ್ನು ಕೆಲವು ಸಲ, ಕೆಲವು ಹಕ್ಕಿಗಳು ಸ್ಕೂಟರ್‌ನ ಮೇಲೆ ಕುಣಿದು ಕುಪ್ಪಳಿಸಿ, ನೆರಳಿನ ಜಾಗದಲ್ಲಿ ವಿರಮಿಸಿ ಹೋಗುತ್ತವೆ.

* ಡಾ. ಲೀಲಾ ಅಪ್ಪಾಜಿ

Advertisement

Udayavani is now on Telegram. Click here to join our channel and stay updated with the latest news.

Next