ಊರೂರಿಂದ ನೆಂಟರ ಪತ್ರಗಳು ಬರುತ್ತಿದ್ದವು -“ಯಾರಾದ್ರೂ ಈ ಕಡೆ ಬರೋರಿದ್ರೆ, ಒಂದು ಬುಟ್ಟಿ ಅವರೆಕಾಯಿ ಕಳಿಸಿಕೊಡಿ’ ಎಂದು. ಆಗೆಲ್ಲಾ ಒಟ್ಟು ಸಂಸಾರ. “ಒಬ್ಬರಿಗೊಬ್ಬರು’ ಎಂಬ ಸಿದ್ಧಾಂತದ ಕಾಲ. ಹೇಗೆ ಇಲ್ಲಾ ಎನ್ನೋದು? ಸರಿ, ಯಾವೂರಿಗೆ ಕಳುಹಿಸಬೇಕೋ, ಆ ಕಡೆ ಕೆಲಸದಲ್ಲಿದ್ದು, ರಜೆಯ ಮೆಲೆ ಬಂದಿದ್ದ ಹುಡುಗರ ತಲೆಗೆ ಕಟ್ಟುತ್ತಿದ್ದರು ಅವರೆಕಾಯಿ ಬುಟ್ಟಿಗಳನ್ನ!
ನಮ್ಮ ಕಾಲದಲ್ಲಿ (ಏಳೆಂಟು ದಶಕಗಳ ಹಿಂದೆ) ಅವರೆಕಾಯಿಯ ಸೀಸನ್ ಬಂತೆಂದರೆ, ಅದೇ ದೊಡ್ಡ ಸಂಭ್ರಮ. ಎಲ್ಲರ ಮನೆಗಳಲ್ಲಿ ಅದೇ ತಾನೇ ಕಿತ್ತು ತಂದ ರಾಶಿರಾಶಿ ಅವರೆಕಾಯಿ. ಅದರ ಸೊಗಡೇ ಸೊಗಡು! ಅಂಗಳದ ತುಂಬಾ ಹಸಿರು ಅವರೆಕಾಯಿ. ಚಿಕ್ಕಮಕ್ಕಳಿಂದ ಹಿಡಿದು, ಮುದುಕರವರೆಗೆ ಎಲ್ಲರೂ ಸಿಪ್ಪೆ ಸುಲಿಯಲು ಕೂರುತ್ತಿದ್ದರು. ಎಷ್ಟಾದರೂ ನುರಿತ ಕರಗಳು ವಯಸ್ಸಾದವರದು. ಸರಸರನೆ ಸುಲಿದು, ಅದಕ್ಕಾಗಿ ಇಟ್ಟಿರುತ್ತಿದ್ದ ದೊಡ್ಡದೊಡ್ಡ ಬುಟ್ಟಿಗಳಲ್ಲಿ ಹಾಕುತ್ತಿದ್ದರು. ಹುಳ-ಸಿಪ್ಪೆ ಬೇರ್ಪಡಿಸಿ ಕಾಯYಳನ್ನು ಸುಲಿಯುವುದನ್ನು ಮಕ್ಕಳಿಗೂ ಹೇಳಿಕೊಡುತ್ತಿದ್ದರು. ನಡುನಡುವೆ ಹಳೆಯ ನೆನಪುಗಳು, ಕಳೆದ ಘಟನೆಗಳ ಬಗ್ಗೆ ಮೆಲುಕು… ಅವೆಲ್ಲಾ ಕಿರಿಯರ ಕಿವಿಗಳಿಗೆ ಸುಗ್ಗಿ. ಎಂದೋ ಗತಿಸಿಹೋದ ಹಿರಿಯರ ಬಗ್ಗೆ, ಆಗಿನ ಆಗುಹೋಗುಗಳ ಬಗ್ಗೆ ನಮಗೆ ಜ್ಞಾನೋದಯವಾಗುತ್ತಿದ್ದುದೇ ಆಗ.
ಅದರ ಮಧ್ಯೆ ಪುಟ್ಟ ಚರ್ಚೆಗಳು-“ನಾಳೆ ಬೆಳಗ್ಗೆ ತಿಂಡಿಗೆ ಅವರೆಕಾಯಿ ಉಪ್ಪಿಟ್ಟು ಮಾಡೋದೋ, ದೋಸೆ ಮಾಡೋದೋ ಅಥವಾ ಅವರೆಕಾಯಿ ರೊಟ್ಟಿ ಮಾಡೋದೋ ಎಂದು. ಊಟಕ್ಕೆ ಇದ್ದೇ ಇದೆಯಲ್ಲ, ಅವರೆಕಾಯಿಯ ಸಾರು, ಕೂಟು, ಉಸಲಿ, ಇತ್ಯಾದಿ… ಹೀಗೆ ಸೀಸನ್ ಮುಗಿಯುವವರೆಗೂ ಬರೀ ಅವರೆಕಾಯಿಯ ಪಾಕ! ಊರೂರಿಂದ ನೆಂಟರ ಪತ್ರಗಳು ಬರುತ್ತಿದ್ದವು -“ಯಾರಾದ್ರೂ ಈ ಕಡೆ ಬರೋರಿದ್ರೆ, ಒಂದು ಬುಟ್ಟಿ ಅವರೆಕಾಯಿ ಕಳಿಸಿಕೊಡಿ’ ಎಂದು. ಆಗೆಲ್ಲಾ ಒಟ್ಟು ಸಂಸಾರ. “ಒಬ್ಬರಿಗೊಬ್ಬರು’ ಎಂಬ ಸಿದ್ಧಾಂತದ ಕಾಲ. ಹೇಗೆ ಇಲ್ಲಾ ಎನ್ನೋದು? ಸರಿ, ಯಾವೂರಿಗೆ ಕಳುಹಿಸಬೇಕೋ, ಆ ಕಡೆ ಕೆಲಸದಲ್ಲಿದ್ದು, ರಜೆಯ ಮೆಲೆ ಬಂದಿದ್ದ ಹುಡುಗರ ತಲೆಗೆ ಕಟ್ಟುತ್ತಿದ್ದರು ಅವರೆಕಾಯಿ ಬುಟ್ಟಿಗಳನ್ನ!
ಒಂದು ಸಲ, ಮರೆಯಲಾಗದ ಪ್ರಸಂಗ ನಡೆಯಿತು. ನೆಂಟರ ಊರಿನ ಕಡೆಗೆ ಪ್ರಯಾಣ ಮಾಡುವ ಹುಡುಗನೊಬ್ಬ ಸಿಕ್ಕ. ಬೀದಿಯವರೆಲ್ಲಾ ಒಂದೊಂದು ಬುಟ್ಟಿ ತಂದು ಅವನ ಮುಂದೆ ಇಟ್ಟರು. ಆ ಊರಿನಲ್ಲಿರುವ ಮಗಳಿಗೆ, ಮಗನಿಗೆ, ಬೀಗರಿಗೆ, ಮೊಮ್ಮಕ್ಕಳಿಗೆ, ತಂಗಿಗೆ…ಎಂದು. ಜೊತೆಗೆ, “ಹುಶಾರಪ್ಪಾ, ಜೋಪಾನ, ಜೋಪಾನ’ ಎಂಬ ಎಚ್ಚರಿಕೆಯ ಮಾತುಗಳು ಬೇರೆ, ಕೊಹಿನೂರನ್ನು ಕಳಿಸುತ್ತಿರುವ ಹಾಗೆ! ಆ ಹುಡುಗನಿಗೋ, ಅಳು ಬರುವುದೊಂದು ಬಾಕಿ! ಆದರೆ, ಅವರೆಲ್ಲಾ ಚಿಕ್ಕಂದಿನಿಂದ ಕಂಡವರು, ತಿಂಡಿ-ತೀರ್ಥ ಎಲ್ಲಾ ಕೊಟ್ಟು ಮುದ್ದು ಮಾಡಿದವರು. ಕಷ್ಟಕ್ಕೆ ಆಗುವವರು. “ಆಗಲ್ಲ’ ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿ ನಿಷ್ಟುರ ಕಟ್ಟಿಕೊಳ್ಳುವುದಾಗತ್ತದೆಯೇ? ತಾಯಿ ಬೇರೆ, ಕಣÕನ್ನೆಯಲ್ಲೇ ಎಚ್ಚರಿಕೆ ನೀಡಿದರು.
ಸರಿ ಎಂದು, ಸಮಸ್ತರಿಗೂ ಸಾಷ್ಟಾಂಗ ನಮಸ್ಕಾರ ಮಾಡಿ, ಆ ಬುಟ್ಟಿಗಳಿಗೇ ಒಂದು ಪ್ರತ್ಯೇಕ ಜಟಕಾ ಮಾಡಿ, ತಾನು ಬೇರೊಂದು ಜಟಕಾದಲ್ಲಿ ಹೊರಟ. ಅಲ್ಲಿ ರೈಲ್ವೆ ಸ್ಟೇಷನ್‌ನಲ್ಲೂ ಫಜೀತಿಯೇ. ಕಂಪಾರ್ಟ್‌ಮೆಂಟ್‌ನಲ್ಲಿ ಆ ಬುಟ್ಟಿಗಳನ್ನ ಸೇರಿಸಲು ಮಿಕ್ಕ ಪ್ರಯಾಣಿಕರು ಒಲ್ಲರು! ಕನ್ನಡ, ತಮಿಳು, ತೆಲುಗು, ಹಿಂದಿ, ಎಲ್ಲಾ ಭಾಷೆಗಳಲ್ಲೂ ವಾದಿಸಿ-ಒಲಿಸಿ, ಕೊನೆಗೂ ಅವನ್ನೆಲ್ಲಾ ಸಾಲಾಗಿ ಮೇಲೆ ಇರಿಸಿದ, ಒಳ್ಳೇ ದಸರಾ ಬೊಂಬೆಗಳಂತೆ! ಅಲ್ಲಿಗೇ ಮುಗಿಯಿತೆ ತಲೆನೋವು? ಅವರೆಕಾಯಿಯ ಹುಳುಗಳೆಲ್ಲಾ ಹಾಯಾಗಿ ವಾಕಿಂಗ್ ಶುರು ಮಾಡಿದವು, ಎಲ್ಲಿ, ಸಹ ಪ್ರಯಾಣಿಕರ ನೀಟಾದ ಬಟ್ಟೆಬರೆಗಳ ಮೇಲೆ! ಲಗೇಜ್ ಮೇಲೆ, ಲಗೇಜ್ ಒಳಗೆ, ಮಲಗಿದ್ದವರ ಮೂಗಿನ ಮೇಲೆ, ಕಿವಿಗಳ ಒಳಗೆ… ಸುಮ್ಮನಿರಲು ಅವರೇನು ಧರ್ಮರಾಯರೇ? ಆ ಬುಟ್ಟಿಗಳನ್ನೆಲ್ಲಾ ತೆಗೆದು ಹೊರಗೆ ಬಿಸಾಡಲು ಅಣಿಯಾದರು. ಪುಣ್ಯಕ್ಕೆ ಆ ಬುಟ್ಟಿಗಳು ತಲುಪಬೇಕಿದ್ದ ಸ್ಟೇಶನ್‌ಗಳು ಬಂದವು. ಯಾರದು? ಯಾವುದು- ಎಂದು ನೋಡದೆ ಕೈಗೆ ಸಿಕ್ಕ ಸಿಕ್ಕ ಹಾಗೆ ಒಂದೋದಾಗಿ ರವಾನಿಸಿ, ಕೈ ತೊಳೆದುಕೊಂಡನು. “ಇನ್ನೆಂದೂ ಅವರೆಕಾಯನ್ನು ಕೈಯಿಂದ ಮುಟ್ಟುವುದೂ ಇಲ್ಲ, ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ಭೀಷ್ಮ ಪ್ರತಿಜ್ಞೆ ಮಾಡಿದನು, ಸಹಪ್ರಯಾಣಿಕರ ಎದುರಲ್ಲಿ. ಅದಿರಲಿ, ಒಬ್ಬರ ಬುಟ್ಟಿ ಇನ್ನೊಬ್ಬರಿಗೆ ಹೋಗಿ, ಆದ ಅವಾಂತರ, ಒಂದೇ ಎರಡೇ? ಹೇಳಹೊರಟರೆ ಅದೂ ಒಂದು ದೊಡ್ಡ ಕಥೆಯಾದೀತು!
- ನುಗ್ಗೇಹಳ್ಳಿ ಪಂಕಜ