Advertisement

‘ಕಚೇರಿಯಲ್ಲೇ ಕಾಯ್ತಿದೀನಿ, ಯಾರೂ ರಾಜೀನಾಮೆ ಕೊಡ್ತಿಲ್ಲ’

03:23 AM Jul 05, 2019 | Sriram |

ಬೆಂಗಳೂರು: ‘ನಾನೂ ಪ್ರತಿ ದಿನ ನೂರು ಕಿಲೋ ಮೀಟರ್‌ನಿಂದ ಬಂದು ಕಚೇರಿಯಲ್ಲಿ ಕಾಯ್ತಿದೀನಿ. ಯಾರೂ ರಾಜೀನಾಮೆ ನೀಡಲು ಬರುತ್ತಿಲ್ಲ’ ಎಂದು ಅತೃಪ್ತ ಶಾಸಕರ ರಾಜೀನಾಮೆ ವದಂತಿ ಬಗ್ಗೆ ಸ್ಪೀಕರ್‌ ರಮೇಶ್‌ ಕುಮಾರ್‌ ಹಾಸ್ಯ ಚಟಾಕಿ ಹಾರಿಸಿದರು.


Advertisement

ಗುರುವಾರ ಮಾಧ್ಯಮಗಳೊಂ ದಿಗೆ ಮಾತನಾಡಿದ ಅವರು, ಪ್ರತಿ ದಿನ ಬಂದು ಯಾರಾದರೂ ರಾಜೀ ನಾಮೆ ಕೊಡುತ್ತಾರೋ ಎಂದು ಕಚೇ ರಿಯಲ್ಲಿ ಕಾಯುತ್ತಿದ್ದೇನೆ. ಶಾಸಕರು ಯಾರೂ ಬಂದು ರಾಜೀನಾಮೆ ನೀಡಲು ಅನುಮತಿ ಕೇಳುತ್ತಿಲ್ಲ. ಮಾಧ್ಯಮದವರೇ ಬಂದು ಅನುಮತಿ ಕೇಳುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ಅಸಮಾಧಾನ ಹೊರ ಹಾಕಿದ ಅವರು, ಮಾಡಲಿಕ್ಕೆ ಕೆಲಸ ಇಲ್ಲದವರು ರಾಜೀನಾಮೆ ನೀಡುತ್ತೇನೆಂದು ಹೇಳುತ್ತಾರೆ. ಇದು ಗೌರವಸ್ಥರು ಮಾಡುವ ಕೆಲಸವಲ್ಲ. ರಾಜಕಾರಣದಲ್ಲಿ ಗುಮಾನಿ, ಗುಟ್ಟು ಇರಬಾರದು. ಗುಟ್ಟಾಗಿ ಏನೇ ಮಾಡಿದರೂ ಅದು ವ್ಯಾಪಾರವಾಗುತ್ತದೆ. ನಾನು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ರಾಜೀನಾಮೆ ನೀಡುತ್ತೇನೆಂದು ಹೇಳಿ ಸ್ವತಃ ದಾರಿ ತಪ್ಪಿದವರನ್ನು ನನ್ನ ಬಳಿ ಕರೆದುಕೊಂಡು ಬನ್ನಿ ಎಂದು ಖಾರವಾಗಿ ನುಡಿದರು.

ಇನ್ನು ಕಾಂಗ್ರೆಸ್‌ನವರು ಆನಂದ್‌ಸಿಂಗ್‌ ವಿರುದ್ಧ ಯಾವುದೇ ದೂರು ಕೊಡಲು ಬಂದಿರಲಿಲ್ಲ. ಯಾರೂ ದೂರು ಕೊಟ್ಟಿಲ್ಲ. ಆನಂದ್‌ ಸಿಂಗ್‌ ರಾಜೀನಾಮೆ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಮಳೆಗಾಲದ ಅಧಿವೇಶನದ ಬಗ್ಗೆ ಔಪಚಾರಿಕವಾಗಿ ತಿಳಿಸಲು ಬಂದಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಕೇಳಿ ಬಂದಿದ್ದ ಆಪರೇಷನ್‌ ಕಮಲದ ಆಡಿಯೋ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆ ವಿಳಂಬ ಆಗಿರುವ ಬಗ್ಗೆ ಸ್ಪೀಕರ್‌ ಬೇಸರ ವ್ಯಕ್ತಪಡಿಸಿದರು.

Advertisement

ಬಿಜೆಪಿ ನಿಯೋಗ ಭೇಟಿ: ಬಿಜೆಪಿ ಶಾಸಕರು ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಲು ಗುರು ವಾರ ಅವರ ಕಚೇರಿಗೆ ಆಗಮಿಸಿದಾಗ ರಮೇಶ್‌ ಕುಮಾರ್‌ ಅವರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ನೀಡಿರುವ ಕೊಠಡಿಯಲ್ಲಿ ಕುಳಿತುಕೊಂಡಿದ್ದರು. ಸಿ.ಟಿ. ರವಿ ನೇತೃತ್ವದ ಬಿಜೆಪಿ ಶಾಸಕರ ನಿಯೋಗ ಸ್ಪೀಕರ್‌ ಅವರನ್ನು ಅವರಿಗೆ ಮೀಸಲಾದ ಕೊಠಡಿ ಯಲ್ಲಿಯೇ ಭೇಟಿ ಮಾಡಲು ನಿರ್ಧರಿಸಿ, ಸಿದ್ದರಾಮಯ್ಯ ಅವರಿಗೆ ನೀಡಿರುವ ಕೊಠಡಿ ಯಲ್ಲಿ ಭೇಟಿ ಮಾಡಲು ನಿರಾಕರಿಸಿದರು. ಆದ್ದರಿಂದ ಸ್ಪೀಕರ್‌ ವಿಧಾನಸೌಧದ ಮೊದಲನೇ ಮಹಡಿಯಲ್ಲಿ ತಮಗೆ ನೀಡಿರುವ ಕೊಠಡಿಯಲ್ಲಿಯೇ ಬಿಜೆಪಿ ಶಾಸಕರನ್ನು ಭೇಟಿ ಮಾಡಿ ಅವರ ಅಹವಾಲು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next