ಗಂಗಸ್ವಾಮಿ ಮತ್ತು ತುಂಗಾ ಇಬ್ಬರೂ ಸ್ವಚ್ಛಂದವಾಗಿ ಹಾರಾಡಿಕೊಂಡಿರುವ ಪ್ರಣಯ ಪಕ್ಷಿಗಳು. ಕಾಲಿಗೆ ಚಿನ್ನದ ಗೆಜ್ಜೆ, ಕಾಲ್ಬೆರಳಿಗೆ ಚಿನ್ನದ ಕಾಲುಂಗರ ಧರಿಸಿ ರೋಲ್ಸ್ ರಾಯ್ಸ್ ಕಾರಿನಲ್ಲಿ ಓಡಾಡಿಕೊಂಡಿರಬೇಕೆಂಬ ಅವಳ ಆಸೆಗೆ, ಊರಿನಲ್ಲಿ ಬಾಜಿ ಕಟ್ಟುವವರ ಎಲ್ಲಾ ಆಟದಲ್ಲೂ “ಗರ’ ಹಾಕಿ ಗೆಲ್ಲುತ್ತಾ ಬರುವ ಗಂಗಸ್ವಾಮಿಗೆ ಅದೃಷ್ಟದ ಕೈ ಜೊತೆಯಾಗಿರುತ್ತದೆ.
ಎಲ್ಲವೂ ಸರಿಯಾಗಿದೆ ಎನ್ನುವಾಗಲೇ ಗಂಗಸ್ವಾಮಿಯ “ಗರ’ದ ಅದೃಷ್ಟ ಬದಲಾಗುತ್ತದೆ. ನೋಡುನೋಡುತ್ತಲೇ “ಗರ’ ನಂಬಿಕೊಂಡವರ ಗತಿ ಬದಲಾಗುತ್ತದೆ. ಹಾಗಾದರೆ, ಈ “ಗರ’ದ ಬದಲಾವಣೆಯಲ್ಲಿ ಯಾರ್ಯಾರು ಬದಲಾಗುತ್ತಾರೆ, ಯಾರ್ಯಾರು ಬಯಲಾಗುತ್ತಾರೆ. ಯಾರ್ಯಾರು “ಗರ’ ಬಡಿಸಿಕೊಳ್ಳುತ್ತಾರೆ ಅನ್ನೋದೇ “ಗರ’ ಚಿತ್ರದ ಕಥಾಹಂದರ.
“ಗರ’ ಎಂಬ ಅದೃಷ್ಟದ ಆಟದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ “ಗರ’ ಬಡಿದವರ, ಬಡಿಸಿಕೊಳ್ಳುವವರ ಕಥೆಯನ್ನು ನೈಜ ಜೀವನಕ್ಕೆ ಹೋಲಿಕೆ ಮಾಡಿ ತೆರೆಮೇಲೆ ತಂದಿರುವ ನಿರ್ದೇಶಕ ಕೆ.ಆರ್ ಮುರಳೀಕೃಷ್ಣ ಪ್ರಯತ್ನವನ್ನು ಮೆಚ್ಚಬಹುದು. ಚಿತ್ರದ ಪರಿಕಲ್ಪನೆ, ಕಥೆ ಎರಡೂ ಚೆನ್ನಾಗಿದೆ. ಆದರೆ ಮನರಂಜನಾತ್ಮಕವಾಗಿ ಚಿತ್ರ ಎಷ್ಟರ ಮಟ್ಟಿಗೆ ಮೂಡಿಬಂದಿದೆ ಎಂಬುದೇ ಇಲ್ಲಿರುವ ಪ್ರಶ್ನೆ.
ಚಿತ್ರಕಥೆ ಮತ್ತು ಅದರ ಹಿಮ್ಮುಖ ನಿರೂಪಣೆ (ರಿವರ್ಸ್ ಆರ್ಡರ್ ಸ್ಕ್ರೀನ್ ಪ್ಲೇ) ನೋಡುಗರನ್ನು ಅಲ್ಲಲ್ಲಿ ಗೊಂದಲಕ್ಕೆ ನೂಕುವುದರಿಂದ, “ಗರ’ದ ಸರಾಗ ಓಟಕ್ಕೆ, ಕುತೂಹಲಕ್ಕೆ ಆಗಾಗ್ಗೆ ಬ್ರೇಕ್ ಬೀಳುತ್ತಲೇ ಇರುತ್ತದೆ. ಕೆಲವು ಸನ್ನಿವೇಶಗಳಲ್ಲಿ ಪ್ರೇಕ್ಷಕನಿಗೆ ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಮತ್ತೂಂದು ಸನ್ನಿವೇಶ ತೆರೆದುಕೊಂಡಿರುತ್ತದೆ. ಚಿತ್ರದ ಕೆಲವು ದೃಶ್ಯಗಳಿಗೆ, ಪಾತ್ರಗಳಿಗೆ ಕತ್ತರಿ ಹಾಕಿದ್ದಾರೆ “ಗರ’ದ ಪರಿಣಾಮ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದ್ದವು.
ಇನ್ನು ಚಿತ್ರದಲ್ಲಿ ಬಹುಭಾಗ ಕಾಣಿಸಿಕೊಳ್ಳುವ ರೆಹಮಾನ್ ಹಾಸನ್, ಆವಂತಿಕಾ, ಆರ್ಯನ್, ಪ್ರಶಾಂತ್ ಸಿದ್ದಿ ಅಭಿನಯ ಪರವಾಗಿಲ್ಲ ಎನ್ನಬಹುದು. ಉಳಿದಂತೆ ತಬಲ ನಾಣಿ, ಮನದೀಪ್ ರಾಯ್, ಸುನೇತ್ರ ಪಂಡಿತ್, ಸುಚಿತ್ರಾ, ರಾಮಕೃಷ್ಣ, ದಯಾನಂದ್, ರಮೇಶ್ ಭಟ್ ಮೊದಲಾದ ಕಲಾವಿದರು ಎಂದಿನಂತೆ ತಮ್ಮ ಅಭಿನಯವನ್ನೂ ಇಲ್ಲಿಯೂ ಮುಂದುವರೆಸಿರುವುದರಿಂದ, ಚಿತ್ರದ ಪಾತ್ರ ಪೋಷಣೆಯಲ್ಲಿ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ.
ಇನ್ನು ಬಾಲಿವುಡ್ ನಟ ಜಾನಿ ಲೀವರ್ ಮತ್ತು ಸಾಧು ಕೋಕಿಲ ಜುಗಾರಿ ಬ್ರದರ್ ಪಾತ್ರದಲ್ಲಿ ಕಾಣಿಸಿಕೊಂಡರೂ, ಇಬ್ಬರ ಜಂಟಿ ಕಾಮಿಡಿ ಕಮಾಲ್ ಹೆಚ್ಚು ವರ್ಕೌಟ್ ಆಗಲಿಲ್ಲ. ಇನ್ನು ಶ್ರೀಕಾಂತ್ ಹೆಬ್ಳೀಕರ್, ರೂಪಾದೇವಿ, ರೋಹಿತ್, ನಿರಂಜನ್, ರಾಜೇಶ್ ರಾವ್, ಸೋನು, ನೇಹಾ ಪಾಟೀಲ್ ಹೀಗೆ ಅನೇಕ ಕಲಾವಿದರ ಬೃಹತ್ ದಂಡೇ “ಗರ’ದಲ್ಲಿದೆ.
ತಾಂತ್ರಿಕವಾಗಿ “ಗರ’ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಛಾಯಾಗ್ರಹಣ, ಸಂಕಲನ ಚಿತ್ರದ ಪ್ಲಸ್ ಪಾಯಿಂಟ್ಸ್. ಚಿತ್ರದ ಒಂದೆರಡು ಹಾಡುಗಳು ಕೆಲಹೊತ್ತು ಗುನುಗುವಂತಿದೆ. ಹಿನ್ನೆಲೆ ಸಂಗೀತ ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಅಲ್ಲಲ್ಲಿ ಬರುವ ಕಂಪ್ಯೂಟರ್ ಗ್ರಾಫಿಕ್ಸ್, ಕಲಾ ವಿಭಾಗದ ಕೆಲಸಗಳಿಗೆ ನಿರ್ದೇಶಕರು ಇನ್ನೂ ಗಮನ ಕೊಡಬಹುದಿತ್ತು. ಕೆಲವು ಸಣ್ಣ ಲೋಪ-ದೋಷಗಳನ್ನು ದೂಷಿಸದೆ ಬದಿಗಿಟ್ಟು ನೋಡುವುದಾದರೆ, “ಗರ’ ಪರಿಣಾಮಕಾರಿಯಾಗಿರದ, ಆದರೆ ಒಂದೊಳ್ಳೆ ಪ್ರಯತ್ನದ ಚಿತ್ರ ಎನ್ನಲು ಅಡ್ಡಿ ಇಲ್ಲ.
ಚಿತ್ರ: ಗರ
ನಿರ್ಮಾಣ: “25ಫ್ರೇಂ ಫಿಲಂಸ್’
ನಿರ್ದೇಶನ: ಕೆ. ಆರ್. ಮುರಳೀಕೃಷ್ಣ
ತಾರಾಗಣ: ರೆಹಮಾನ್ ಹಾಸನ್, ಆವಂತಿಕಾ, ಆರ್ಯನ್, ನೇಹಾ ಪಾಟೀಲ್, ಸುಚಿತ್ರಾ, ನಿರಂಜನ್, ರಾಜೇಶ್ ರಾವ್, ಸಾಧುಕೋಕಿಲ, ಜಾನಿ ಲೀವರ್ ಮತ್ತಿತರರು.
* ಜಿ.ಎಸ್.ಕಾರ್ತಿಕ ಸುಧನ್