ಭ್ರಾಮರಿ ಯಕ್ಷಮಿತ್ರರು ಇದರ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಚೂಡಾಮಣಿ- ರಾಮಾಂಜನೇಯ – ದ್ರೌಪದೀ ಪ್ರತಾಪ ಪ್ರದರ್ಶನವು ಯಕ್ಷರಸಿಕರ ಮನ ತಣಿಸಿತು . ಸುಪ್ರಸಿದ್ಧ ಕಲಾವಿದರ ಗಡಣದೊಂದಿಗೆ ಉತ್ತಮ ಸಂಯೋಜನೆ ಪ್ರದರ್ಶನದ ಯಶಸ್ಸಿಗೆ ಕಾರಣವಾಯಿತು .
ಸೀತಾನ್ವೇಷಣೆಗೆ ಹೊರಟ ಹನುಮಂತನು ಲಂಕಾದ್ವೀಪ ತಲುಪುತ್ತಾನೆ . ರಾಮಧ್ಯಾನದಲ್ಲಿ ನಿರತಳಾದ ಸೀತೆಯನ್ನು ಅಶೋಕವನದಲ್ಲಿ ಪತ್ತೆ ಹಚ್ಚಿ ಅವಳಿಗೆ ಶ್ರೀರಾಮನ ಬಗ್ಗೆ ತಿಳಿಸಿ , ಅವಳಿಂದ ಗುರುತಿಗಾಗಿ ಚೂಡಾಮಣಿಯನ್ನು ಪಡೆದು ಶ್ರೀರಾಮನಿಗೆ ಕೊಡುತ್ತಾನೆ. ಪ್ರಸಂಗದ ಮುಖ್ಯ ಪಾತ್ರವಾದ ಹನೂಮಂತನಾಗಿ ಅಮ್ಮುಂಜೆ ಮೋಹನರು ಪರಂಪರೆಯ ಹನೂಮಂತನ ವೇಷದಲ್ಲಿ ಭಾವನಾತ್ಮಕವಾಗಿ ಅಭಿನಯ ನೀಡಿದರು. ಹೆಣ್ಣುಬಣ್ಣದಲ್ಲಿ ಲಂಕಿಣಿಯಾಗಿ ಹರಿನಾರಾಯಣ ಭಟ್ಟರು ಪರಂಪರೆಯ ಶೈಲಿಯಲ್ಲೇ ಮಿಂಚಿದರು. ಶೃಂಗಾರ ರಾವಣನಾಗಿ ರಾಧಾಕೃಷ್ಣ ನಾವಡರು ಶೃಂಗಾರ ರಸವನ್ನು ಸ್ಪುರಿಸುವಲ್ಲಿ ಯಶಸ್ವಿಯಾದರು. ರಾವಣನ ದೂತನಾಗಿ ದಿನೇಶ್ ಕೋಡಪದವು ಪರಂಪರೆಯ ಹಾಸ್ಯದ ಮೂಲಕ ರಂಜಿಸಿದರು. ಅನುಕೂಲ ಸ್ತ್ರೀಯರಾಗಿ ಲಕ್ಷ್ಮಣ ಮರಕಡ ,ಬಾಬು ಗೌಡ , ಪ್ರಜ್ವಲ್ ಗುರುವಾಯನಕೆರೆಯವರು ಹಾಸ್ಯದ ಹೊನಲನ್ನೇ ಹರಿಸಿದರು . ಸೀತಾಮಾತೆಯಾಗಿ ಅನುಭವಿ ಕಲಾವಿದರಾದ ಅಕ್ಷಯ ಮಾರ್ನಾಡರದ್ದು ಪ್ರಬುದ್ಧ ನಿರ್ವಹಣೆ. ಸರಮೆ, ತ್ರಿಜಟೆಯರಾಗಿ ರಾಮಚಂದ್ರ ಮುಕ್ಕ , ವಿಶ್ವಾಸ್ ಕಾವೂರು ತೃಪ್ತಿಕರ. ಭಾಗವತರಾಗಿ ದಿನೇಶ ಅಮ್ಮಣ್ಣಾಯರು ತಮ್ಮದೇ ಅಮ್ಮಣ್ಣಾಯ ಶೈಲಿಯಲ್ಲಿ ಹಾಡಿ ಮನ ಸೂರೆಗೊಂಡರು. ಕೆಲವೊಂದು ಅಪೂರ್ವ ರಾಗಗಳ ಬಳಕೆ ಕರ್ಣಾನಂದಕರವಾಯಿತು. ಚೆಂಡೆ ಮದ್ದಲೆ ವಾದನದಲ್ಲಿ ಚೈತನ್ಯ, ಗುರುಪ್ರಸಾದ್ ಬೊಳಿಂಜಡ್ಕರ ಕೈ ಚಳಕ ಎದ್ದು ಕಂಡಿತು.
ಎರಡನೇ ಪ್ರಸಂಗ ರಾಮಾಂಜನೇಯ.ಸಿಂಧು ದೇಶದ ಅರಸ ಶಕುಂತ ರಾಜನು ಮೃಗಬೇಟೆಗೆ ಹೋಗುವ ಸಂದರ್ಭದಲ್ಲಿ ಪಕ್ಷಿಯೊಂದಕ್ಕೆ ಬಾಣ ಬಿಟ್ಟಾಗ ಆ ಪಕ್ಷಿ ಸನಿಹದಲ್ಲಿದ್ದ ಮಹರ್ಷಿ ವಿಶ್ವಾಮಿತ್ರರ ಅಗ್ನಿಕುಂಡದಲ್ಲಿ ಬಿದ್ದು ಕಲುಷಿತಗೊಳ್ಳುತ್ತದೆ. ಕೋಪದಿಂದ, ವಿಶ್ವಾಮಿತ್ರನು ಇಂತಹ ಕೃತ್ಯ ಮಾಡಿದ ಶಕುಂತನನ್ನು ತನ್ನ ಶಿಷ್ಯನಾದ ಶ್ರೀರಾಮನಿಂದ ಎಂಟು ದಿನಗಳೊಳಗೆ ಕೊಲ್ಲಿಸುತ್ತೇನೆ ಎಂಬ ಪ್ರತಿಜ್ಞೆ ಮಾಡುತ್ತಾನೆ. ಭೀತನಾದ ಶಕುಂತನು ನಾರದರ ಪ್ರೇರಣೆಯಂತೆ , ಹನೂಮಂತನ ತಾಯಿಯಾದ ಅಂಜನಾದೇವಿಗೆ ಶರಣಾಗತನಾಗಿ ಪ್ರಾಣಭಿಕ್ಷೆ ಕೇಳುತ್ತಾನೆ. ವಿಷಯ ಅರಿಯದ ಅಂಜನಾ ದೇವಿ ಮಗನಾದ ಹನೂಮಂತನ ಆಣೆಯಾಗಿ ನಿನ್ನನ್ನು ರಕ್ಷಿಸುತ್ತೇನೆ ಎಂಬ ಅಭಯ ನೀಡುತ್ತಾಳೆ.
ಶ್ರೀರಾಮನಲ್ಲೇ ಶಕುಂತನಿಗೆ ವಿರೋಧ ಎಂದು ಅರಿತಾಗ ಹನೂಮಂತನು ತೀವ್ರವಾದ ವೇದನೆಯಲ್ಲೂ ಧರ್ಮಪ್ರಜ್ಞೆ ಮೆರೆದು ತಾಯಿ ಕೊಟ್ಟ ಮಾತಿನಂತೆ ಶಕುಂತನನ್ನು ರಕ್ಷಿಸಲು ಮುಂದಾಗುತ್ತಾನೆ . ಮುಂದೆ ರಾಮ – ಹನೂಮಂತರ ಕಾಳಗವಾಗಿ ಕೊನೆಗೆ ನಾರದರಿಂದ ಸುಖಾಂತವಾಗುತ್ತದೆ . ಹನೂಮಂತನಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆಯವರ ನಿರರ್ಗಳ ಮಾತುಗಾರಿಕೆ ಪ್ರೇಕ್ಷಕರನ್ನು ಆಕರ್ಷಿಸಲು ಸಫಲವಾಯಿತು. ಶ್ರೀರಾಮನಾಗಿ ಜಯಪ್ರಕಾಶ್ ಶೆಟ್ಟಿಯವರ ನಿರ್ವಹಣೆ ಅತ್ಯುತ್ತಮ. ರಾಮ- ಹನೂಮಂತರ ಕಾಳಗದ ಸಂದರ್ಭದಲ್ಲಿ ಉತ್ತಮ ವಿಚಾರಗಳು ಮಂಡಿಸಲ್ಪಟ್ಟವು . ಸೀತೆಯಾಗಿ ಸಂತೋಷ್ ಹಿಲಿಯಾಣರ ನಿರ್ವಹಣೆ ಶ್ರೇಷ್ಠ ಮಟ್ಟದಲ್ಲಿತ್ತು .ಶ್ರೀರಾಮನೊಂದಿಗಿನ ಸಂಭಾಷಣೆಯಲ್ಲಿ ಲೌಕಿಕ – ಅಲೌಕಿಕ ಶಬ್ದಗಳ ದ್ವಂದ್ವಾರ್ಥದ ಸಮನ್ವಯ ಕಂಡು ಬಂದು , ಆದರ್ಶ ದಂಪತಿಗಳ ಚಿತ್ರಣ ನೀಡಿದ್ದು ಪ್ರಸಂಗದ ಹೈಲೈಟ್ ಆಗಿ ಮೂಡಿಬಂತು. ಶಕುಂತನಾಗಿ ಜಯಾನಂದ ಸಂಪಾಜೆಯವರು, ಸುಗ್ರೀವನಾಗಿ ಪ್ರಸಾದ್ ಸವಣೂರರು ಶ್ರೇಷ್ಠ ಮಟ್ಟದ ಪ್ರಸ್ತುತಿ ನೀಡಿದರು. ವಿಶ್ವಾಮಿತ್ರನಾಗಿ ಪೆರ್ಲ ಜಗನ್ನಾಥ ಶೆಟ್ಟರು ತಮಗೆ ದೊರಕಿದ ಸೀಮಿತ ಅವಕಾಶದಲ್ಲಿ ಪ್ರಸಂಗದ ನಡೆಯಲ್ಲೇ ಪಾತ್ರ ನಿರ್ವಹಣೆ ನೀಡಿದರು. ನಾರದನಾಗಿ ವಾದಿರಾಜ ಕಲ್ಲೂರಾಯರು ಪಂಚಿಂಗ್ ಡೈಲಾಗ್‌ನಿಂದ ಆಕರ್ಷಿಸಿದರು. ಪಾತಾಳ ಅಂಬಾ ಪ್ರಸಾದರು ಅಂಜನೆಯ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು. ಬೇಟೆಗಾರರಾಗಿ ಬಾಲಕೃಷ್ಣ ಮಣಿಯಾಣಿ, ಬಾಬು ಗೌಡರ ಪರಂಪರೆಯ ಹಾಸ್ಯ ಮುದ ನೀಡಿತು. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ ಹಾಗೂ ರವಿಚಂದ್ರ ಕನ್ನಡಿಕಟ್ಟೆಯವರ ಪ್ರಸ್ತುತಿ ಶ್ರೇಷ್ಠ ಮಟ್ಟದ್ದಾಗಿತ್ತು. ಚೆಂಡೆ ಮದ್ದಲೆವಾದನದಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಕೃಷ್ಣಪ್ರಕಾಶ್ ಉಳಿತ್ತಾಯರು ಹಿಮ್ಮೇಳದ ವೈಭವಕ್ಕೆ ಕಾರಣರಾದರು .
ಚೆಂಡೆಗೆ ಅವಕಾಶವಿರುವ ದ್ರೌಪದೀ ಪ್ರತಾಪ ವೇಗವಾಗಿ ಸಾಗಿತು. ಪ್ರಾರಂಭದಲ್ಲೇ ಹೊಸಮೂಲೆ, ಬಲಿಪರ ಏರು ಶ್ರುತಿಯ ಪದ್ಯಕ್ಕೆ ಅರ್ಜುನನಾಗಿ ಸುಬ್ರಾಯ ಹೊಳ್ಳ, ಭೀಮನಾಗಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರ ಏಕಕಾಲದ ಪ್ರವೇಶವು ಮಿಂಚಿನ ಸಂಚಾರ ಮಾಡಿದ್ದಲ್ಲದೆ, ಹೊಳ್ಳ – ಶೆಟ್ಟಿಗಾರರ ಪ್ರಸ್ತುತಿಯು ಪರಂಪರೆಯ ಯಕ್ಷಗಾನ ನೋಡಿದ ಅನುಭವ ನೀಡಿತು. ಸೂರ್ಯವರ್ಮ, ಚಂದ್ರವರ್ಮನಾಗಿ ಶಶಿಕಿರಣ ಕಾವು ಹಾಗೂ ಮನೀಷ್ ಪಾಟಾಳಿಯವರು ಅದ್ಭುತವಾದ ಬಣ್ಣದ ವೇಷದಲ್ಲಿ, ಪರಂಪರೆಯ ನಾಟ್ಯ, ಮಾತುಗಾರಿಕೆಯ ಮೂಲಕ ಗಮನ ಸೆಳೆದರು. ಪೂರ್ವಾರ್ಧದ ದ್ರೌಪದಿಯಾಗಿ ಶಶಿಕಾಂತ ಶೆಟ್ಟಿಯವರು ಕಸೆ ಸ್ತ್ರೀ ವೇಷದಲ್ಲಿ ಮಿಂಚಿದರು.
ಉತ್ತರಾರ್ಧದ ದ್ರೌಪದಿಯಾಗಿ ರಕ್ಷಿತ್ ಶೆಟ್ಟಿ ಪಡ್ರೆಯವರಿಗೆ ಸಮಯಾವಕಾಶ ಸಾಲದಿದ್ದರೂ, ಉತ್ತಮ ನಾಟ್ಯ, ಸಂಭಾಷಣೆ ಮೂಲಕ ಮೆಚ್ಚುಗೆ ಗಳಿಸಿದರು. ಸುಭದ್ರೆಯಾಗಿ ಮಹೇಶ್ ಕುಮಾರ್ ಸಾಣೂರು ಕಸೆ ಸ್ತ್ರೀಪಾತ್ರದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದರು. ಉಳಿದ ಪಾತ್ರಗಳಲ್ಲಿ ಹರಿರಾಜ್, ಮಾಧವ ಕೊಳತ್ತಮಜಲು, ಲೋಕೇಶ್, ರಾಜೇಶ್, ವೆಂಕಟೇಶ ಕಲ್ಲುಗುಂಡಿ, ಚಂದ್ರಶೇಖರ ಬನಾರಿ, ಚಂದ್ರಕಾಂತ ಸಿಮಂತೂರು, ಮಂದಾರ ಮೂಡಬಿದಿರೆ ಮುಂತಾದವರು ಪಾತ್ರೋಚಿತವಾದ ಪ್ರಸ್ತುತಿ ನೀಡಿ ಪ್ರಸಂಗದ ಯಶಸ್ಸಿಗೆ ಕಾರಣರಾದರು. ಭಾಗವತರಾಗಿ ಗಣೇಶ ಭಟ್, ಪ್ರಸಾದ್ ಬಲಿಪರ ಪರಂಪರೆಯ ಶೈಲಿಯ ದ್ವಂದ್ವ ಭಾಗವತಿಕೆಯು ಪ್ರೇಕ್ಷಕರನ್ನು ಮುಂಜಾವದ ನಿದ್ರೆಯಿಂದ ಬಡಿದೆಬ್ಬಿಸಿತು. ಚೆಂಡೆಯ ದ್ವಂದ್ವ ವಾದನದಲ್ಲಿ ಮುರಾರಿ ಕಡಂಬಳಿತ್ತಾಯ, ಅಡೂರು ಲಕ್ಷ್ಮೀನಾರಾಯಣ ಮದ್ದಲೆ ವಾದನದಲ್ಲಿ ನೆಕ್ಕರಮೂಲೆ ಗಣೇಶ್ ಭಟ್ ,
ಚಕ್ರತಾಳದಲ್ಲಿ ರಾಜೇಂದ್ರರ ಕೊಡುಗೆಯೂ ಇದಕ್ಕೆ ಕಾರಣವಾಯಿತು.
ಎಂ.ಶಾಂತರಾಮ ಕುಡ್ವ