ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ 17,720 ಸೀಟಿಗೆ ಸೋಮವಾರ ಮೊದಲ ಸುತ್ತಿನ ಆನ್‌ಲೈನ್ ಲಾಟರಿ ಪ್ರಕ್ರಿಯೆ ನಡೆಯಿತು.
ಮೊದಲನೇ ಸುತ್ತಿನಲ್ಲಿ 7636 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ವಿಶೇಷ ವರ್ಗಕ್ಕೆ 23, ಪರಿಶಿಷ್ಟ ಜಾತಿಗೆ 1,382, ಪರಿಶಿಷ್ಟ ಪಂಗಡಕ್ಕೆ 262, ಇತರ ವರ್ಗಕ್ಕೆ 5969 ಸೀಟುಗಳನ್ನು ಆನ್‌ಲೈನ್ ಮೂಲಕ ಹಂಚಿಕೆ ಮಾಡಲಾಗಿದೆ. ಆದರೆ, 643 ಶಾಲೆಗಳ 7243 ಸೀಟುಗಳಿಗೆ ಒಂದು ಅರ್ಜಿಯೂ ಬಂದಿಲ್ಲ.
ರಾಜ್ಯದ 2172 ಅನುದಾನಿತ ಮತ್ತು 219 ಅನುದಾನ ರಹಿತ ಶಾಲೆಗಳ 17,720 ಸೀಟುಗಳಲ್ಲಿ, ಪರಿಶಿಷ್ಟ ಜಾತಿಗೆ 5,461, ಪರಿಶಿಷ್ಟ ಪಂಗಡಕ್ಕೆ 1,157 ಮತ್ತು ಇತರೆ ವರ್ಗಕ್ಕೆ 1,102 ಸೀಟುಗಳನ್ನು ನಿಗದಿ ಮಾಡಲಾಗಿದೆ. ಅನುದಾನಿತ ಶಾಲೆಗಳಲ್ಲಿ 15,011 ಒಂದನೇ ತರಗತಿ ಹಾಗೂ 92 ಎಲ್‌ಕೆಜಿ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1,209 ಎಲ್‌ಕೆಜಿ ಮತ್ತು 1,408 ಒಂದನೇ ತರಗತಿ ಲಭ್ಯವಿದೆ.
ಆನ್‌ಲೈನ್ ಲಾಟರಿ ಪ್ರಕ್ರಿಯೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಎಂ.ಟಿ.ರೇಜು, ಎಲ್‌ಕೆಜಿಗೆ 5,197 ಮತ್ತು ಒಂದನೇ ತರಗತಿಗೆ 13,201 ಸೇರಿದಂತೆ 18,398 ಅರ್ಜಿಗಳು ದಾಖಲಾಗಿವೆ. ಇದರಲ್ಲಿ ಎಲ್‌ಕೆಜಿಗೆ 4,269 ಮತ್ತು 1ನೇ ತರಗತಿಗೆ 12,294 ಅರ್ಜಿಗಳು ಅರ್ಹವಾಗಿದೆ. ಸಮರ್ಪಕ ದಾಖಲೆಗಳಿಲ್ಲದ 1,836 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ವಿವರಿಸಿದರು.
ಸೀಟು ಸಿಕ್ಕಿರುವ ಮಕ್ಕಳ ಪಾಲಕ, ಪೋಷಕರ ಮೊಬೈಲ್‌ಗಳಿಗೆ ಸಂದೇಶ ರವಾನೆಯಾಗಿರುತ್ತದೆ. ಮೇ 15ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲು ಮಾಡಬೇಕು. ಎರಡನೇ ಸುತ್ತಿನ ಲಾಟರಿ ಪ್ರಕ್ರಿಯೆ ಮೇ 25ರಂದು ನಡೆಯಲಿದೆ. ಮೇ 30ರೊಳಗೆ ಆರ್‌ಟಿಇ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆರ್‌ಟಿಇ ಕಾಯ್ದೆಯ ನಿಯಮಕ್ಕೆ ತಿದ್ದುಪಡಿ ತಂದಿದ್ದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಬರುವ ಅಂತಿಮ ತೀರ್ಪಿಗೆ ಇಲಾಖೆ ಬದ್ಧವಾಗಿರುತ್ತದೆ. ಹೊಸ ನಿಯಮದಂತೆ ಲಾಟರಿ ಪ್ರಕ್ರಿಯೆ ನಡೆಸಿದ್ದೇವೆ. ಬೆಂಗಳೂರಿನ ಗಿರಿನಗರ ಮತ್ತು ಗಣೇಶ ಮಂದಿರ ವಾರ್ಡ್‌ಗಳಲ್ಲಿ ಸರ್ಕಾರಿ ಶಾಲೆಗಳು ಇಲ್ಲದಿರುವುದರಿಂದ ಈ ವಾರ್ಡ್‌ಗಳಲ್ಲಿ ಆರ್‌ಟಿಇ ಸೀಟು ಹಂಚಿಕೆ ಮಾಡಿದ್ದೇವೆ ಎಂದರು.