Advertisement

ಕೊನೆಯಲ್ಲಿ ರೋಹಿತ್ ಶರ್ಮಾ ಹೋರಾಟ ವ್ಯರ್ಥ; ಏಕದಿನ ಸರಣಿ ಬಾಂಗ್ಲಾದೇಶಕ್ಕೆ

08:13 PM Dec 07, 2022 | Team Udayavani |

ಢಾಕಾ: ಇಲ್ಲಿನ ಶೇರ್‌ ಎ ಬಾಂಗ್ಲಾ ಸ್ಟೇಡಿಯಂ’ನಲ್ಲಿ ಬುಧವಾರ ನಡೆದ ಸರಣಿ ನಿರ್ಣಾಯಕ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಭಾರತದ ವಿರುದ್ಧ 5 ರನ್‌ಗಳ ರೋಚಕ ಜಯ ಸಾಧಿಸಿತು.

Advertisement

272 ರನ್ ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾಗಿ ಬಂದ ಕೊಹ್ಲಿ 5 , ಧವನ್ 8 ರನ್ ಗಳಿಸಿ ಔಟಾದರು. ತಂಡಕ್ಕೆ ಆಧಾರವಾದ ಶ್ರೇಯಸ್ ಅಯ್ಯರ್ 82(102 ಎಸೆತ), ವಾಷಿಂಗ್ಟನ್ ಸುಂದರ್ 11, ರಾಹುಲ್ 14 , ರನ್ ಗಳಿಸಿ ಬೇಗನೆ ನಿರ್ಗಮಿಸಿದರು. ಗೆಲುವಿನ ಭರವಸೆ ಮೂಡಿಸಿದ್ದ ಅಕ್ಷರ್ ಪಟೇಲ್ 56 ರನ್ ಗಳಿಸಿದ್ದ ವೇಳೆ ಔಟಾದರು. ಶಾರ್ದೂಲ್ ಠಾಕೂರ್ 7, ದೀಪಕ್ ಚಾಹರ್ 11 ರನ್ ಗಳಿಗೆ ಔಟಾದರು.

ಕೊನೆಯಲ್ಲಿ ಬಂದ ನಾಯಕನ ಶ್ರಮ ವ್ಯರ್ಥ

ಬೌಲಿಂಗ್ ವೇಳೆ ರೋಹಿತ್‌ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಅವರನ್ನು ಸ್ಕ್ಯಾನ್‌ಗಾಗಿ ಪಂದ್ಯದ ನಡುವೆಯೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್, ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಅನಾಮುಲ್ ಹಕ್ ಅವರ ಕ್ಯಾಚ್ ಪಡೆಯಲು ಯತ್ನಿಸಿದಾಗ ಎಡಗೈಗೆ ಬಲವಾದ ಪೆಟ್ಟು ಬಿದ್ದಿತ್ತು. ಬಾಂಗ್ಲಾದೇಶ ಇನ್ನಿಂಗ್ಸ್‌ನ 39 ನೇ ಓವರ್‌ನಲ್ಲಿ, ಟಿವಿ ನಿರೂಪಕರು ರೋಹಿತ್ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ ಎಂದು ಹೇಳಿದರಾದರೂ ಅವರು ಫೀಲ್ಡಿಂಗ್‌ಗೆ ಇಳಿಯಲಿಲ್ಲ.ಚೇಸಿಂಗ್‌ನಲ್ಲಿ ರೋಹಿತ್ ಭಾರತದ ಇನ್ನಿಂಗ್ಸ್ ಆರಂಭಿಸಿರಲಿಲ್ಲ. 8 ನೇ ವಿಕೆಟ್ ಗೆ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ ಸ್ಪೋಟಕ ಆಟವಾಡಿದರು. 51 ರನ್ (28 ಎಸೆತ, 3 ಬೌಂಡರಿ ಮತ್ತು ಅಮೋಘ 5 ಸಿಕ್ಸರ್ ಸಿಡಿಸಿ ಅಜೇಯರಾಗಿ ಉಳಿದರು. ವೈಫಲ್ಯ ಅನುಭವಿಸಿದ ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಮಾತ್ರ ಗಳಿಸಲು ಶಕ್ತವಾಗಿ ಸರಣಿಯನ್ನು ಕಳೆದುಕೊಂಡಿತು.

ಕೊನೆಯ ಎರಡು ಎಸೆತಗಳಲ್ಲಿ ಹನ್ನೆರಡು ರನ್ ಬೇಕಾದ ರೋಚಕ ಹಂತಕ್ಕೆ ಪಂದ್ಯವನ್ನು ರೋಹಿತ್ ಶರ್ಮಾ ತಿರುಗಿಸಿದ್ದರು.ಮುಸ್ತಫಿಜುರ್ ಎಸೆದ ( 49.5)ಚೆಂಡನ್ನು ರೋಹಿತ್ ಸಿಕ್ಸ್ ಬಾರಿಸಿದ್ದರು. ಆದರೆ ಕೊನೆಯ ಎಸೆತದಲ್ಲಿ ರನ್ ಗಳಿಸಲು ಸಾಧ್ಯವಾಗದೆ ಸೋಲು ಅನುಭವಿಸಬೇಕಾಯಿತು.

Advertisement

ವಿಕೆಟ್ ಕೀಪರ್, ಉಪನಾಯಕ ಕೆ.ಎಲ್. ರಾಹುಲ್ ಅವರು ರೋಹಿತ್ ಅನುಪಸ್ಥಿತಿ ಇದ್ದ ವೇಳೆ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಅಮೋಘ ಅಜೇಯ ಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ಮೆಹಿದಿ ಹಸನ್ ಮಿರಾಜ್ ಅವರ ಅಮೋಘ ಅಜೇಯ ಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.ಅನಾಮುಲ್ 11 ರನ್ , ಲಿಟ್ಟನ್ ದಾಸ್ 7 , ಶಾಂಟೊ 21 , ಶಕೀಬ್ 8 , ಮುಶ್ಫಿಕರ್ ರಹೀಮ್ 12, ಅಫೀಫ್ ಹೊಸೈನ್ ಶೂನ್ಯಕ್ಕೆ ಔಟಾದರು. ಮಹಮ್ಮದುಲ್ಲಾ 77 ರನ್ ಗಳಿಸಿ ತಂಡಕ್ಕೆ ನೆರವಾದರು. ನಸುಮ್ ಅಹ್ಮದ್ ಔಟಾಗದೆ 18 ರನ್ ಗಳಿಸಿದರು.

ಮೊದಲ ಏಕದಿನ ಪಂದ್ಯದ ಹೀರೋ ಮಿರಾಜ್ 83 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರಿಗೆ ಸಾಥ್ ನೀಡಿದ ಮಹ್ಮದುಲ್ಲಾ (96 ಎಸೆತಗಳಲ್ಲಿ 77) ಅವರೊಂದಿಗೆ 165 ಎಸೆತಗಳಲ್ಲಿ 148 ರನ್‌ಗಳ ಜೊತೆಯಾಟ ಆಡಿದರು. ಮೊದಲು ಭಾರತವು ಬಾಂಗ್ಲಾದೇಶವನ್ನು ಆರು ವಿಕೆಟ್‌ಗೆ 69 ರನ್‌ಗೆ ನಿಯಂತ್ರಿಸಿತ್ತು. ಇದು ಭಾರತದ ವಿರುದ್ಧದ ಏಳನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವಾಗಿದೆ.

ಮಿರಾಜ್ ಅವರು ಶಾರ್ದೂಲ್ ಠಾಕೂರ್ ಅವರ 50 ನೇ ಓವರ್‌ ನಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿ ತಮ್ಮ ಅತ್ಯುತ್ತಮ ಮೊತ್ತವನ್ನು ದಾಖಲಿಸಿದರು.

ಭಾರತದ ಪರ ಬೌಲಿಂಗ್ ನಲ್ಲಿ ವಾಷಿಂಗ್ಟನ್ ಸುಂದರ್ 10ಓವರ್ ಗಳಲ್ಲಿ 37 ರನ್ ಗಳಿಸಿ 3 ವಿಕೆಟ್ ಪಡೆದರು. ಸಿರಾಜ್ 10 ಓವರ್ ಗಳಲ್ಲಿ 73 ರನ್ ನೀಡಿ 2 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ 2 ವಿಕೆಟ್ ಪಡೆದರು.

ಡಿಸೆಂಬರ್ 10, ಶನಿವಾರ ಮೂರನೇ ಏಕದಿನ ಪಂದ್ಯ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next