Advertisement

ಆರು ವರ್ಷದಲ್ಲಿ 562 ಮಂದಿ ರೌಡಿ ಪಟ್ಟಿಯಿಂದ ಹೊರಕ್ಕೆ

04:41 PM Jul 15, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ 2018ರಿಂದ 2023ರ ವರೆಗೂ 6 ವರ್ಷದಲ್ಲಿ ಬರೋಬ್ಬರಿ ಒಟ್ಟು 562 ರೌಡಿಗಳನ್ನು ಪೊಲೀಸ್‌ ಇಲಾಖೆ ರೌಡಿಶೀಟರ್‌ ಪಟ್ಟಿಯಿಂದ ಮುಕ್ತಿಗೊಳಿಸಿದೆ. ಹೌದು, ರಾಜ್ಯದಲ್ಲಿ ಕಳೆದ 6 ವರ್ಷ ದಲ್ಲಿ ರೌಡಿಪಟ್ಟಿಯಿಂದ ಕೈ ಬಿಟ್ಟವರ ಮಾಹಿತಿ ಉದಯವಾಣಿಗೆ ಲಭ್ಯವಾಗಿದ್ದು, ಜಿಲ್ಲೆಯಲ್ಲಿ 562 ಮಂದಿಯನ್ನು ರೌಡಿ ಶೀಟರ್‌ ಪಟ್ಟಿಯಿಂದ ವಿವಿಧ ಕಾರಣಗಳಿಗೆ ಕೈ ಬಿಟ್ಟಿದೆ.

Advertisement

ರಾಜ್ಯದಲ್ಲಿ 6 ವರ್ಷದಲ್ಲಿ ಬರೋಬ್ಬರಿ 27,294 ಮಂದಿಯನ್ನು ರೌಡಿಶೀಟರ್‌ ಪಟ್ಟಿಯಿಂದ ಬಿಡುಗಡೆ ಗೊಳಿಸಿದ್ದು, ಜಿಲ್ಲೆಯಲ್ಲಿ ಕಳೆದ 2018 ರಲ್ಲಿ 4, 2019 ರಲ್ಲಿ 24, 2020 ರಲ್ಲಿ 46, 2021ರಲ್ಲಿ 294, 2022ರಲ್ಲಿ 180, 2023ರಲ್ಲಿ ಇಲ್ಲಿವರೆಗೂ ಒಟ್ಟು 14 ಮಂದಿ ಯನ್ನು ಜಿಲ್ಲೆಯ ಪೊಲೀಸ್‌ ಇಲಾಖೆ ರೌಡಿಪಟ್ಟಿಯಿಂದ ಬಿಡುಗಡೆ ಮಾಡಿದೆ.

ಮಾನದಂಡಗಳೇನು?: ರೌಡಿ ಪಟ್ಟಿ ಯಲ್ಲಿದ್ದವರ ಪೈಕಿ ಮೃತಪಟ್ಟಿರುವರನ್ನು, 65 ವರ್ಷ ವಯಸ್ಸಾದವರನ್ನು ಹಾಗೂ ರೌಡಿ ಅಸಾಮಿಯು ಸಂಪೂರ್ಣ ಮಾನಸಿಕ ಅಸ್ವಸ್ಥನಾಗಿದ್ದರೆ ಅಥವಾ ಅಂಗವಿಕಲನಾಗಿದ್ದರಲ್ಲಿ ಹಾಗೂ ಸುಮಾರು 10 ವರ್ಷದಿಂದ ಯಾವುದೇ ಪ್ರಕರಣದಲ್ಲಿ ಭಾಗಿ ಆಗದೇ ಕಾನೂನು ಸುವ್ಯವಸ್ಥೆ ಪಾಲಿಸುತ್ತಿರುವವರನ್ನು ಗುರುತಿಸಿಕೊಂಡು ಜಿಲ್ಲೆಯ ಪೊಲೀಸರು ಒಟ್ಟು 562 ಮಂದಿಗೆ ರೌಡಿಪಟ್ಟಿಯಿಂದ ಗೇಟ್‌ಪಾಸ್‌ ನೀಡಿದ್ದಾರೆ.

ಗೌರಿಬಿದನೂರು ಭಾಗದಲ್ಲಿ ರೌಡಿಗಳ ಉಪಟಳ!: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಗೌರಿಬಿದನೂರಲ್ಲಿ ಇಂದಿಗೂ ರೌಡಿಗಳ ಉಪಟಳ ಹೆಚ್ಚಾಗಿದೆ. ಗೌರಿಬಿದನೂರು ನಗರ, ಗ್ರಾಮಾಂತರ ಹಾಗೂ ಮಂಚೇನಹಳ್ಳಿ ವ್ಯಾಪ್ತಿಯಲ್ಲಿ ಜೊತೆಗೆ ಹೊಸೂರು ಭಾಗದಲ್ಲಿ ನೂರಾರು ರೌಡಿಗಳಿದ್ದು, ಕಾನೂನು ಸುವ್ಯವಸ್ಥೆಗೆ ಆಗಾಗ ಭಂಗ ತರುವ ಕೆಲಸವನ್ನು ಮಾಡುತ್ತಿರುತ್ತಾರೆ.ಆಂಧ್ರದ ಹಿಂದೂಪುರ, ಅನಂತಪುರ ಭಾಗ ಗೌರಿಬಿದನೂರಿಗೆ ಅಂಟಿಕೊಂಡಿದ್ದು, ಇಲ್ಲಿ ಅಕ್ರಮ, ಅನೈತಿಕ ಚಟುವಟಿಕೆಗಳಲ್ಲಿ ರೌಡಿಗಳು ಭಾಗಿ ಇದ್ದೇ ಇರುತ್ತದೆ. ಇನ್ನೂ ಚಿಂತಾಮಣಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟದಲ್ಲಿ ಕೂಡ ರೌಡಿ ಅಸಾಮಿಗಳು ಕಿರಿಕಿರಿ ಇದ್ದೇ ಇದೆ.

ಪರೇಡ್‌ ಮರೆತ ಪೊಲೀಸ್‌ ಇಲಾಖೆ!: ಜಿಲ್ಲೆಯಲ್ಲಿ ರೌಡಿ ಅಸಾಮಿಗಳ ಚಲನವಲನಗಳ ಮೇಲೆ ಪೊಲೀಸ್‌ ಇಲಾಖೆ ನಿಗಾ ವಹಿಸುತ್ತಿದ್ದರೂ ಕಾಲಕಾಲಕ್ಕೆ ಅಸಾಮಿಗಳನ್ನು ಠಾಣೆಗೆ ಕರೆಸಿ ಸೂಕ್ತ ಎಚ್ಚರಿಕೆ ನೀಡುವ ಪರೇಡ್‌ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಪ್ರತಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ವೇಳೆಯಲ್ಲಿ ರೌಡಿಗಳನ್ನು ಪೊಲೀಸರು ಕಡ್ಡಾಯವಾಗಿ ಠಾಣೆಗೆ ಅಥವಾ ತಾಲೂಕು ದಂಡಾಧಿಕಾರಿ ಮುಂದೆ ಹಾಜರುಪಡಿಸಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವುದು ನಡೆಯುತ್ತಿದೆ.

Advertisement

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next