ಕನ್ನಡ ಚಿತ್ರರಂಗದಲ್ಲೊಂದು ಹೊಸ ಟ್ರೆಂಡ್ ಶುರುವಾಗಿದೆ. ನಿರ್ದೇಶಕರಾಗಬೇಕೆಂದು ಬಯಸುವ ಬಹುತೇಕ ಹೊಸಬರು, ಮೊದಲು ಒಂದು ಶಾರ್ಟ್‌ಫಿಲ್ಮ್ ಮಾಡಿ, ಆ ಬಳಿಕ ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಾರೆ. ಈಗ ಇಲ್ಲಿ ಹೇಳ ಹೊರಟಿರುವ ವಿಷಯ ಕೂಡ ಅದೇ. “ಇನ್ ಸರ್ಚ್ ಆಫ್ ಬಾಪು’ ಇದು ಕಿರುಚಿತ್ರ. ಈ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ ಆರ್ಯನ್ ಶಿವಕುಮಾರ್. ಈ ಶಾರ್ಟ್ ಫಿಲ್ಮ್ ಮಾಡೋಕೆ ಕಾರಣ, ಸುಮನ್ ಶೆಟ್ಟಿ. ಒಮ್ಮೆ ಶಿವಕುಮಾರ್, ಒಂದು ಕಥೆ ಹಿಡಿದು ಸಿನಿಮಾ ಮಾಡಿ ಅಂತ ಸುಮನ್ ಶೆಟ್ಟಿ ಬಳಿ ಹೋದರಂತೆ. ಆಗ, ಸುಮನ್ ಶೆಟ್ಟಿ, “ನನಗೆ ಸಿನಿಮಾ ಅನುಭವ ಇಲ್ಲ, ಏಕಾಏಕಿ ಸಿನಿಮಾ ನಿರ್ಮಾಣಕ್ಕೆ ಮುಂದಾಗೋದು ನನಗಿಷ್ಟವಿಲ್ಲ. ನೀವೊಂದು ಶಾರ್ಟ್ ಫಿಲ್ಮ್ ಮಾಡಿಕೊಂಡು ಬನ್ನಿ, ಅದು ಇಷ್ಟವಾದರೆ, ಆಮೇಲೆ ಸಿನಿಮಾ ನಿರ್ಮಾಣಕ್ಕೆ ಪ್ರಯತ್ನ ಮಾಡ್ತೀನಿ’ ಅಂದರಂತೆ. ಅವರ ಮಾತನ್ನ ಪಾಲಿಸಿದ ನಿರ್ದೇಶಕ ಆರ್ಯನ್ ಶಿವಕುಮಾರ್, “ಇನ್ ಸರ್ಚ್ ಆಫ್ ಬಾಪು’ ಹೆಸರಿನ ಶಾರ್ಟ್‌ಫಿಲ್ಮ್ ಮಾಡಿದ್ದಾರೆ. ಆ ಚಿತ್ರದಲ್ಲಿ ನಿರ್ಮಾಪಕ ಸುಮನ್‌ಶೆಟ್ಟಿ ಅವರೇ ಹೀರೋ ಆಗಿಯೂ ನಟಿಸಿದ್ದಾರೆ. ಇತ್ತೀಚೆಗೆ ಆ ಕಿರುಚಿತ್ರ ಪ್ರದರ್ಶನ ಮಾಡಿ, ಪತ್ರಕರ್ತರ ಮುಂದೆ ಅನುಭವ ಹಂಚಿಕೊಂಡರು.
ಮೊದಲು ಮಾತಿಗಿಳಿದ ನಿರ್ದೇಶಕ ಆರ್ಯನ್ ಶಿವಕುಮಾರ್, “ಇಲ್ಲಿ ಮೋಹನ ಎಂಬ ವ್ಯಕ್ತಿ ಬಾಲ್ಯದಿಂದಲೂ ಗಾಂಧಿ ಬಗ್ಗೆ ಆಸಕ್ತಿ ಇಟ್ಟುಕೊಂಡಾತ. ಅವರ ತತ್ವ, ಆದರ್ಶ ಹಾಗು ಮೌಲ್ಯ ಮೈಗೂಡಿಸಿಕೊಂಡು, ಇಂದಿನ ಸಮಾಜದಲ್ಲಿರುವ ಎಲ್ಲರೂ ಗಾಂಧಿ ಆದರ್ಶ ಮೈಗೂಡಿಸಿಕೊಳ್ಳಬೇಕೆಂಬುದು ಅವನ ಆಶಯ. ಆದರೆ, ಸಮಾಜ ಮಾತ್ರ ಅವರ ತತ್ವ, ಸಿದ್ಧಾಂತ ಒಪ್ಪುವುದಿಲ್ಲ. ಅವನು ಜನರನ್ನು ಬದಲಾಯಿಸುತ್ತಾನಾ ಅಥವಾ ಅವನೇ ಬದಲಾಗುತ್ತಾನಾ ಎಂಬುದು ಕಥೆ’ ಎಂದು ವಿವರಿಸಿದ ನಿರ್ದೇಶಕರು, 23 ನಿಮಿಷಗಳ ಈ ಕಿರುಚಿತ್ರ, ಐದು ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ ಎಂದು ಹೇಳುತ್ತಾರೆ ಅವರು.
ನಿರ್ಮಾಪಕ ಸುಮನ್ ಶೆಟ್ಟಿ, ಇಲ್ಲಿ ಮೋಹನ ಎಂಬ ಪಾತ್ರ ನಿರ್ವಹಿಸಿದ್ದಾರಂತೆ. ಅವರಿಗೆ ಸಿನಿಮಾ ಹೊಸ ಪ್ರಪಂಚ. ನಿರ್ದೇಶಕರು ಸಿನಿಮಾ ಮಾಡೋಕೆ ಬಂದಾಗ, ಮೊದಲು ಕಿರುಚಿತ್ರ ಮಾಡಿ ಆಮೇಲೆ ನೋಡೋಣ ಅಂತ ಹೇಳಿದ್ದಕ್ಕೆ, ಈ ಶಾರ್ಟ್ ಫಿಲ್ಮ್ ಪೂರ್ಣಗೊಂಡಿದೆ. “ನಾನಿಲ್ಲಿ ಹಣಕ್ಕಾಗಿ ಚಿತ್ರ ಮಾಡಿಲ್ಲ. ಸಿನಿಮಾ ಮೇಲೆ ಪ್ರೀತಿ ಇತ್ತು. ನನಗೂ ಗಾಂಧಿ ಇಷ್ಟ. ಅವರಂತೆ ಇತರೆ ಮಹಾನ್ ಪುರುಷರ ತತ್ವಗಳೂ ನನಗಿಷ್ಟ’ ಅಂದರು ಅವರು.
ನಾಯಕಿಯಾಗಿ ನಟಿಸಿರುವ ಪಲ್ಲವಿ ಶೆಟ್ಟಿ ಅವರಿಗೂ ಗಾಂಧಿ ಕುರಿತಾದ ಕಿರುಚಿತ್ರ ಅಂದಾಕ್ಷಣ, ಒಪ್ಪಿ ನಟಿಸಿದ್ದಾರಂತೆ. ಇದೊಂದು ಮೌಲ್ಯವುಳ್ಳ ಕಥೆ ಅಂದರು ಅವರು. ಇನ್ನು, ಇಲ್ಲಿ ಕಲಾವಿದರಾದ ಅರವಿಂದ್‌ರಾಜ್, ಅರ್ಜುನ್ ಕೃಷ್ಣ, ಸಂತೋಷ್, ರಂಜಿತ್, ಪಲ್ಲವಿಶೆಟ್ಟಿ, ಯಮುನ, ರವಿಕುಮಾರ್ ಇತರರು ನಟಿಸಿದ್ದಾರೆ. ಸೋಮು ಗಂಗಣ್ಣ ಅವರು ಕ್ಯಾಮೆರಾ ಹಿಡಿದರೆ, ವಿಜೇತ್ ಚಂದ್ರ ಹಿನ್ನೆಲೆ ಸಂಗೀತ ನೀಡಿದ್ದಾರೆ. ಭುವ ಸಂಭಾಷಣೆ ಬರೆದಿದ್ದಾರೆ.