Advertisement

ಸಂಗೀತ ಚಿಂತನೆ

10:41 AM Feb 01, 2020 | mahesh |

ಲೇಖಕ ಸಚ್ಚಿದಾನಂದ ಹೆಗಡೆಯವರು ಬರೆದ ಈ ಪುಸ್ತಕದ ಹೆಸರು ಸ್ವರ ವಿನ್ಯಾಸ. ಇಲ್ಲಿನ ಲೇಖನಗಳು ಮುಖ್ಯವಾಗಿ ಸಂಗೀತಕ್ಕೆ ಮತ್ತು ವಿನ್ಯಾಸಕ್ಕೆ (ಡಿಸೈನಿಂಗ್‌) ಸೇರಿದವಾದರೂ ನನ್ನ ಕ್ಷೇತ್ರ ಸಂಗೀತವಾದ್ದರಿಂದ ವಿನ್ಯಾಸ ಎನ್ನುವ ಶಬ್ದವನ್ನು ಸ್ವರಕ್ಕೇ ಸೇರಿಸಿ ಗ್ರಹಿಸಲು ಪ್ರಯತ್ನಿಸುವೆ.

Advertisement

ಸಂಗೀತದ ಬಗೆಗಿನ ಆಳವಾದ ಚಿಂತನೆ ಮತ್ತು ಪ್ರಯೋಗಶೀಲತೆ ಕಲಾವಿದನನ್ನು ಗ್ಯಾಲರಿಯ ಕಡೆಗೆ ಮುಖ ಮಾಡಲು ಕೊಡುವುದಿಲ್ಲ. ಅದನ್ನು ಕಿಶೋರಿ ತಾಯಿ ಮತ್ತು ಕುಮಾರ ಗಂಧರ್ವರಲ್ಲಿ ಪ್ರಖರವಾಗಿ ಕಂಡಿದ್ದೇನೆ. ಜಾಗದೊಡನೆ ಅಂದರೆ ಯಾವ ಊರು, ಯಾವ ಹಾಲ್‌ ಅಥವಾ ಯಾರ ಮುಂದೆ ಅವರಿಗೆ ಮುಖ್ಯವಾಗುವುದಿಲ್ಲ. ಅವರ ಸಂಬಂಧವೇನಿದ್ದರೂ ಸಂಗೀತದೊಡನೆ ಅಷ್ಟೆ.

ಈ ಪುಸ್ತಕದಲ್ಲಿ ಘರಾಣಾದ ಪ್ರಸ್ತಾಪ ಇದೆ. ಒಂದೇ ಗುರುವಿನ ಹತ್ತು ಶಿಷ್ಯರು ಹತ್ತು ರೀತಿಯಲ್ಲಿ ಹಾಡುತ್ತಾರೆ. ಈಗಿನ ಆಧುನಿಕ ಸಂಪರ್ಕ ಸಾಧನಗಳಿಂದಾಗಿ ವಿದ್ಯಾರ್ಥಿ ಎಲ್ಲರನ್ನೂ ಕೇಳುತ್ತಾನೆ, ತನಗೆ ಹೊಂದುವುದನ್ನು ಸ್ವೀಕರಿಸುತ್ತಾನೆ. ಈ ಸಂದರ್ಭದಲ್ಲಿ ಕುಮಾರ ಗಂಧರ್ವರ ಮಾತೊಂದು ನನಗೆ ನೆನಪಾಗುತ್ತದೆ. ಅದು ಹೀಗಿದೆ, “ಘರಾಣಾ ಎನ್ನುವುದು ಲಾಸ್ಟ್‌ ಕಾಪಿ ಆಫ್ ಒರಿಜಿನಲ್‌’ ಈ ವಾಕ್ಯ ಎಲ್ಲವನ್ನೂ ಹೇಳುತ್ತಿದೆ ನೋಡಿ.

ಸ್ವರಗಳ ಹುಡುಕಾಟ ಹೊಸದೊಂದರ ಹುಡುಕಾಟವಲ್ಲ, ಇದ್ದದ್ದರ ಹುಡುಕಾಟ. ಸ್ವರಗಳನ್ನು ಒಲಿಸಿಕೊಳ್ಳುವ ನಿರಂತರ ಪ್ರಯತ್ನವಷ್ಟೇ. ಹಾರ್ಮೋನಿಯಂ ಬಗೆಗಿನ ದೀರ್ಘ‌ ಲೇಖನವನ್ನು ಈ ಕೃತಿಯಲ್ಲಿ ಗಮನಿಸಿದೆ. ಹಾರ್ಮೋನಿಯಂ ಜೊತೆಗಿನ ಬಾಲ್ಯದ ಸಂಬಂಧದಿಂದ ಪ್ರಾರಂಭವಾಗಿ, ಅದರ ಮೇಲಿನ ಬ್ಯಾನ್‌ ಇತ್ಯಾದಿಗಳ ಬಗ್ಗೆ ಚರ್ಚೆಯಾಗಿ, ಸಾರಂಗಿ ಇತ್ಯಾದಿ ತಂತು ವಾದ್ಯಕ್ಕೆ ಹೋಲಿಸಿ ಹಾರ್ಮೋನಿಯಂನ ಮಿತಿಯ ಬಗ್ಗೆ ಉಲ್ಲೇಖೀಸುತ್ತಾರೆ. ಹಾರ್ಮೋನಿಯಂ ಯಾಕೆ ಅಷ್ಟು ಪೂರಕವಾಯಿತು ಎಂಬುದನ್ನೂ ಗಮನಿಸಬೇಕು. ಸಂಗೀತಗಾರನಾಗಿ ನನ್ನ ವೈಯಕ್ತಿಕ ಅನುಭವದಿಂದ ಹೇಳುವುದಾದರೆ ಹೆಚ್ಚಾಗಿ ಸಾರಂಗಿ ಸಾಥ್‌ ಮಾಡುವವರು ನಾವು ಮುಂದುವರಿದಂತೆ ಅವರು ಹಿಂಬಾಲಿಸದೇ ನಮ್ಮನ್ನು ರಿಪೀಟ್‌ ಮಾಡಲು ತೊಡಗುತ್ತಾರೆ. ಆಗ ಹಾಡುವವನಿಗೆ ಗೊಂದಲವೂ ಆಗುತ್ತದೆ. ಪೂರ್ವನಿರ್ಧಾರಿತವಲ್ಲದ, ಆ ನಿರ್ದಿಷ್ಟ ಸಮಯ, ವಾತಾವರಣ ಮತ್ತು ಗಾಯಕನ ಆ ಸಂದರ್ಭದ ಮನೋಧರ್ಮಕ್ಕೆ ಹುಟ್ಟುವ ಆಶು ಪ್ರಸ್ತುತಿಗೆ ಈ ರಿಪೀಟ್‌ ಪದ್ಧತಿ ಸ್ವಲ್ಪ ತ್ರಾಸು ಕೊಡುವುದುಂಟು. ಆದರೆ, ಹಾರ್ಮೋನಿಯಂ ಸಾಥ್‌ನಲ್ಲಿ ಹಾಗಾಗುವುದು ಕಡಿಮೆ.ಅವರು ನಮ್ಮನ್ನು ಅನುಸರಿಸುತ್ತ ನಮ್ಮೊಡನೆಯೇ ಕ್ರಮಿಸುತ್ತಾರೆ. ಇಲ್ಲಿ ಬಣ್ಣಗಳು ಪ್ರತ್ಯೇಕವಾಗದೇ ಪೂರಕವಾಗುತ್ತ ಒಂದಾಗುತ್ತವೆ. ನೀವು ಇದನ್ನು ವಾದಕರಿಗೆ ಸಂಬಂಧಿಸಿದ್ದು ಎಂದು ಹೇಳಬಹುದು. ನಾನು ಇಲ್ಲಿ ಸಾಂದರ್ಭಿಕವಾಗಿ ಹೇಳಬೇಕಾದುದೇನೆಂದರೆ ಇದರಲ್ಲಿ ಸಂಗೀತ ವಾದ್ಯದ ಮೂಲ ಸ್ವಭಾವ ಮತ್ತು ಅದರ ಮಿತಿಯ ಪಾಲು ಬಹುದೊಡ್ಡದಿದೆ.

ಈ ತರಹದ ಸಂಗೀತ ಸಂಬಂಧಿ ಚಿಂತನೆಯ ಲೇಖನಗಳು ಇನ್ನೂ ಬರಲಿ.

Advertisement

ಸಚ್ಚಿದಾನಂದ ಹೆಗಡೆಯವರು ಬರೆದ ಸ್ವರವಿನ್ಯಾಸ ಲೇಖನಗಳ ಸಂಕಲನವು ಇಂದು ಲೋಕಾರ್ಪಣೆಗೊಳ್ಳುತ್ತಿದೆ.

ಪಂ. ಹಾಸಣಗಿ ಗಣಪತಿ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next