Advertisement
ಶ್ರೀಲಂಕಾದ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಪೈಕಿ ಆ್ಯತ್ಲೀಟ್ ಡಿ.ಎ. ಯಾಸರೋಹನ ಡೆ ಸಿಲ್ವ ಪ್ರಮುಖರು. ಆ್ಯತ್ಲೀಟ್ ಆಗಿದ್ದ ಅವರು, ಬಳಿಕ ಕ್ರೀಡಾ ತರಬೇತುದಾರರಾಗಿ ಅನೇಕ ಆ್ಯತ್ಲೀಟ್‌ಗಳನ್ನು ರೂಪಿಸಿ ಕ್ರೀಡಾ ಜಗತ್ತಿಗೆ ನೀಡಿದವರು. ಪ್ರಸ್ತುತ ತರಬೇತುದಾರ ರಾಗಿರುವುದರೊಂದಿಗೆ ಶ್ರೀಲಂಕಾದ ಸಿಲೋನೀಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಕ್ಲಬ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ “ಮಂಗಳಾ ಸ್ಟೇಡಿಯಂ’ನಲ್ಲಿ ನಡೆಯುವ ದಕ್ಷಿಣ ಕನ್ನಡ, ಉಡುಪಿ ಮತ್ತು ಶ್ರೀಲಂಕಾ ಜೂನಿಯರ್ ಆ್ಯತ್ಲೆಟಿಕ್ ಮೀಟ್‌ಗೆ ಸುಮಾರು 65 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರಿಗೆ ಕರೆತಂದಿದ್ದು, ಈ ವೇಳೆ “ಉದಯವಾಣಿ’ಯೊಂದಿಗೆ ಅವರು ಮಾತನಾಡಿದರು.
ಶ್ರೀಲಂಕಾದಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಮುಖ್ಯವಾಗಿ ಇತರ ದೇಶಗಳ ಕ್ರೀಡಾಪಟುಗಳಿಗೆ ಸರಕಾರದಿಂದ ಉತ್ತಮ ಬೆಂಬಲ ಸಿಗುತ್ತದೆ. ಆದರೆ ಶ್ರೀಲಂಕಾದಲ್ಲಿ ಸರಕಾರದ ಕ್ರೀಡಾ ಸಚಿವಾಲಯದ ವತಿಯಿಂದ ಯಾವುದೇ ಪ್ರೋತ್ಸಾಹ ದೊರೆಯುತ್ತಿಲ್ಲ. ಇದರಿಂದ ಪ್ರತಿಭೆಗಳಿದ್ದರೂ, ಅದನ್ನು ಬಳಸಿಕೊಳ್ಳಲು ಸೋತಿದ್ದೇವೆ. ಸರಕಾರ ಕ್ರೀಡೆಯನ್ನು ಪ್ರೋತ್ಸಾಹಿಸದಿರಲು ಕಾರಣವೇನು?
ಕ್ರೀಡೆಯ ಬಗ್ಗೆ ಸರಕಾರಕ್ಕೆ ನಿರ್ಲಕ್ಷ ಯಾಕೆ ಎಂಬುದು ತಿಳಿದಿಲ್ಲ. ಇದು ಇವತ್ತು ನಿನ್ನೆಯ ಕತೆಯಲ್ಲ, ಅದೆಷ್ಟೋ ವರ್ಷಗಳಿಂದ ಇದೇ ರೀತಿ ಇದೆ. ಬಹುಶಃ ಕ್ರೀಡೆಯಲ್ಲಿ ದೇಶ ಗುರುತಿಸಿಕೊಳ್ಳಬೇಕೆಂಬ ಆಸಕ್ತಿ ಸರಕಾರಕ್ಕೆ ಇಲ್ಲದಿರಬಹುದು. ಇತರ ದೇಶಗಳಲ್ಲಿ ಸಿಗುವಂತೆ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳ ಆಯೋಜನೆಗೆ ನಮ್ಮಲ್ಲಿ ಸೌಲಭ್ಯಗಳನ್ನೇ ನೀಡುತ್ತಿಲ್ಲ. ಇದರಿಂದಲೇ ನಾವು ಕ್ರೀಡೆಯಲ್ಲಿ ಹಿಂದುಳಿದಿದ್ದೇವೆ ಎಂದರೂ ತಪ್ಪಲ್ಲ.
Related Articles
ಉತ್ತಮ ಕ್ರೀಡಾಪಟುಗಳು ತಯಾರಾಗುವುದು ಶಾಲಾ-ಕಾಲೇಜುಗಳಲ್ಲಿಯೇ. ಆದರೆ ಅಂತಹವರನ್ನು ಗುರುತಿಸಬೇಕಾದರೆ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಿಕೊಡಬೇಕು. ಭಾರತದಲ್ಲಿರುವಂತೆ ಕ್ರೀಡಾ ಹಾಸ್ಟೆಲ್‌ಗಳು ನಮ್ಮ ದೇಶದಲ್ಲಿಲ್ಲ. ಇದರಿಂದ ಕ್ರೀಡಾಸಕ್ತ ಮಕ್ಕಳಿಗೂ ಸಮಸ್ಯೆಯಾಗುತ್ತಿದೆ. ಮಕ್ಕಳು ಯಾವುದೇ ಕ್ರೀಡಾ ಸ್ಪರ್ಧೆಗಳಿಗೆ ಹೋಗುವುದಿದ್ದರೂ, ಹೆತ್ತವರ ಹಣದಲ್ಲಿಯೇ ಹೋಗುತ್ತಾರೆ. 2006ರಲ್ಲಿ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್ ಮತ್ತು ಜೂನಿಯರ್ ಏಶ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಆ್ಯತ್ಲೀಟ್ ರತ್ನಾಯಕ್ ಅವರು 200 ಮೀಟರ್ನಲ್ಲಿ ಬಹುಮಾನ ಪಡೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Advertisement
ನಿಮ್ಮ ಪ್ರಕಾರ ಉತ್ತಮ ಕ್ರೀಡಾಪಟುವನ್ನು ತಯಾರು ಮಾಡುವುದು ಹೇಗೆ?ಸರಕಾರದ ಮಟ್ಟದಿಂದ ಪ್ರೋತ್ಸಾಹ ಮುಖ್ಯವಾಗಿ ಬೇಕು. ಅದು ದೊರಕಿದಲ್ಲಿ ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಬಹುದು. ದಿನಂಪ್ರತಿ ಸರಿಯಾದ ತರಬೇತಿ, ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳು, ಪೂರಕ ವಾತಾವರಣದಿಂದ ಕ್ರೀಡಾಪಟು ಬೆಳೆಯಬಲ್ಲ. ಈ ನಿಟ್ಟಿನಲ್ಲಿ ಸರಕಾರಕ್ಕೂ ಮನವಿ ನೀಡುವ ಆಲೋಚನೆಯಲ್ಲಿದ್ದೇನೆ. ನಿಮ್ಮ ನೆಲದಲ್ಲಿ ಇದುವರೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳೇ ನಡೆದಿಲ್ಲವೇ?
ಹಾಗೇನಿಲ್ಲ. ಕ್ರೀಡಾಕೂಟಗಳು ನಡೆಯುತ್ತವೆ. ಜತೆಗೆ ಇತರ ದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ನಮ್ಮವರೂ ಭಾಗವಹಿಸುತ್ತಿದ್ದಾರೆ. ಮುಂದಿನ ವರ್ಷ ಕೊಲಂಬೋದಲ್ಲಿ 57ನೇ ವಾರ್ಷಿಕ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಕೂಡಾ ಆಮಂತ್ರಿಸಲಾಗುವುದು. ಅತೀ ಹೆಚ್ಚು ವೀಕ್ಷಕರನ್ನು ಹೊಂದಿರುವ ಕ್ರಿಕೆಟಿಗೂ ನಿಮ್ಮಲ್ಲಿ ಪ್ರೋತ್ಸಾಹದ ಕೊರತೆ ಇದೆ ಎನ್ನುವಿರಾ?
ಹೌದು. ಕ್ರಿಕೆಟಿಗೂ ಪ್ರೋತ್ಸಾಹದ ಕೊರತೆ ಇದೆ. ಆದರೆ ಇತರ ಕ್ರೀಡೆಗಳಿಗೆ ಹೋಲಿಸಿದರೆ ಕ್ರಿಕೆಟಿಗೆ ಮನ್ನಣೆ ಇದೆ ಎಂದೇ ಹೇಳಬಹುದು. ಅದರಿಂದಾಗಿಯೇ ನಮ್ಮ ಕ್ರಿಕೆಟಿಗರು ಬೇರೆ ದೇಶಗಳಿಗೆ ಹೋಗಿಯೂ ಉತ್ತಮ ಪ್ರದರ್ಶನ ನೀಡಿರುವುದನ್ನು ಗಮನಿಸಬಹುದು. ಧನ್ಯಾ ಬಾಳೆಕಜೆ