Advertisement

ಜೆಡಿಎಸ್ ನಲ್ಲಿ ಕುಟುಂಬದ ಎಲ್ಲರಿಗೂ ಟಿಕೆಟ್ ಕೊಟ್ಟರೂ ಬಡಿದಾಟ ಸಾಮಾನ್ಯ:ಜೋಶಿ

02:36 PM Feb 26, 2023 | Team Udayavani |

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಟಿಕೆಟ್ ಕೊಟ್ಟರೂ ಅವರಲ್ಲಿ ಬಡಿದಾಟ ಸಾಮಾನ್ಯ. ಮೊದಲು ಅವರು ತಮ್ಮ ಕುಟುಂಬ ಸರಿ ಪಡಿಸಿಕೊಳ್ಳಲಿ. ಆಮೇಲೆ ರಾಜ್ಯ ಆಳಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕುಟುಕಿದರು.

Advertisement

ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಮೊದಲು ತಮ್ಮ ಮನೆ ನಿರ್ವಹಿಸಲಿ. ಕುಟುಂಬದ 10-12 ಮಂದಿ ಚುನಾವಣೆಯಲ್ಲಿ ನಿಂತರೂ ಅವರಿಗೆ ಸಮಾಧಾನವಿಲ್ಲ. ಹಾಗಿದ್ದ ಮೇಲೂ ಪರಸ್ಪರ ಬಡಿದಾಡುತ್ತಿರುವುದೇಕೆ? ಕುಟುಂಬವನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.

ಮೂರನೇ ದರ್ಜೆಯ ರಂಗ
ಕಳೆದ ಒಂಬತ್ತು ವರ್ಷಗಳಿಂದ ತೃತೀಯ ಶಕ್ತಿ ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ. ಅವರಲ್ಲಿ ಒಗ್ಗಟ್ಟು ಹಾಗೂ ಸ್ಪಷ್ಟ ಉದ್ದೇಶವಿಲ್ಲದ್ದರಿಂದ ಅದು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ಪ್ರಧಾನಿಯಾಗಬೇಕೆನ್ನುವ ಉದ್ದೇಶ ಅವರದ್ದು. ಉದಾತ್ತ ಮನೋಭಾವ ಇದ್ದರೆ ತೃತೀಯ ರಂಗ ನಿರ್ಮಾಣವಾಗುತ್ತಿತ್ತು. ಅದು ತೃತೀಯ ರಂಗವಲ್ಲ ಮೂರನೇ ದರ್ಜೆಯ ರಂಗವಾಗಿ ಹೊರಹೊಮ್ಮಲಿದೆ ಎಂದು ವ್ಯಂಗ್ಯವಾಡಿದರು.

ಭಾರತ ಜಗತ್ತಿನ ಹಿರಿಯಣ್ಣ ಆಗಬೇಕು, ಭಾರತ ಜಗನ್ಮಾತೆಯಾಗಬೇಕು ಎನ್ನುವ ಕಲ್ಪನೆ ಬಿಜೆಪಿಯಲ್ಲಿದೆ. ಅದರಿಂದಾಗಿ ನಮ್ಮಲ್ಲಿ ಒಮ್ಮೆಯೂ ಒಡಕಾಗಿಲ್ಲ. ಆದರೆ ತೃತೀಯ ರಂಗದ್ದು ಹಾಗಲ್ಲ ಎಂದರು.

ಮಠಾಧೀಶರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಮಠಾಧೀಶರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯಾರು, ಯಾವ ಅರ್ಥದಲ್ಲಿ ಮಠಾಧೀಶರ ಬಗ್ಗೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ ಎಂದರು.

Advertisement

ರಾಹುಲ್ ಗಾಂಧಿಗೆ ಭಾರತ ಮತ್ತು ಇಲ್ಲಿಯ ವಿಜ್ಞಾನಿಗಳ ಬಗ್ಗೆ ನಂಬಿಕೆಯಿಲ್ಲ. ಹೀಗಾಗಿ ಕೋವಿಡ್ ವ್ಯಾಕ್ಸಿನ್ ಬಗ್ಗೆ ಆಗಾಗ ಸುಳ್ಳು ಸುದ್ದಿ ಹಬ್ಬಿಸಿ ಅಪಮಾನ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next