Advertisement

ಲೈಂಗಿಕ ಕಿರುಕುಳ ಆರೋಪ ಪ್ರಕರಣ : ಸಿಜೆ ರಂಜನ್‌ ಗೊಗೋಯ್‌ ಆರೋಪ ಮುಕ್ತ

09:02 AM May 07, 2019 | Hari Prasad |

ನವದೆಹಲಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರ ಮೇಲೆ ಕೇಳಿ ಬಂದಿದ್ದ ಮಹಿಳೆಯೊಬ್ಬರ ಮೆಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ.

Advertisement

ಸರ್ವೋಚ್ಛ ನ್ಯಾಯಾಲಯದ ಆಂತರಿಕ ವಿಚಾರಣಾ ಮಂಡಳಿಯು ಗೊಗೋಯ್‌ ಮೇಲಿನ ಈ ಆರೋಪಗಳನ್ನು ವಜಾಗೊಳಿಸಿದೆ. ಮೂರು ಜನ ನ್ಯಾಯಾಧೀಶರನ್ನು ಒಳಗೊಂಡಿದ್ದ ಈ ಮಂಡಳಿಯು ತನ್ನ ವರದಿಯನ್ನು ಮೇ 5ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದೆ.

ಸರ್ವೋಚ್ಛ ನ್ಯಾಯಾಲಯದ ಮಾಜೀ ಮಹಿಳಾ ಉದ್ಯೋಗಿಯೊಬ್ಬರು ಮುಖ್ಯ ನ್ಯಾಯಮೂರ್ತಿಯವರ ಮೇಲೆ ಲೈಂಗಿಕ ಕಿರುಕುಳ ಆರೋಪವನ್ನು ವಹಿಸಿದ್ದರು. ತನ್ನ ಮೇಲೆ ಕೇಳಿಬಂದಿರುವ ಈ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೊಗೋಯ್‌ ಅವರು ಆಂತರಿಕ ವಿಚಾರಣಾ ಮಂಡಳಿಯೊಂದನ್ನು ರಚನೆ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ಅವರು ಈ ತ್ರಿಸದಸ್ಯ ವಿಚಾರಣಾ ಮಂಡಳಿಯ ಮುಂದೆ ಕಳೆದ ವಾರ ಹಾಜರಾಗಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆಯನ್ನು ನೀಡಿದ್ದರು. ಮುಖ್ಯ ನ್ಯಾಯಮೂರ್ತಿಗಳ ಮೇಲೆ ಮಹಿಳೆ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಸತ್ಯತೆ ಇಲ್ಲ ಎಂಬ ನಿರ್ಧಾರಕ್ಕೆ ವಿಚಾರಣಾ ಮಂಡಳಿಯು ಬಂದಿರುವುದರಿಂದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನು ಮಂಡಳಿಯು ದೋಷಮುಕ್ತಗೊಳಿಸಿದೆ ಎಂದು ತಿಳಿದುಬಂದಿದೆ.

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೊಬ್ಬರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಅವರು ಆಂತರಿಕ ವಿಚಾರಣಾ ಮಂಡಳಿಯ ಮುಂದೆ ಹಾಜರಾಗಿರುವುದು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ.

Advertisement

ಈ ವಿಚಾರಣಾ ಮಂಡಳಿಯು ಸಲ್ಲಿಸಿರುವ ವರದಿಯನ್ನು ಬಹಿರಂಗಗೊಳಿಸಲಾಗುವುದಿಲ್ಲ. ಆಂತರಿಕ ಕಾರ್ಯಚಟುವಟಿಕೆಗಳ ಭಾಗವಾಗಿ ಈ ಮಂಡಳಿ ರಚನೆಯಾಗಿರುವುದರಿಂದ ಇದು ನೀಡುವ ವರದಿಗಳನ್ನು 2003ರಿಂದ ಬಹಿರಂಗಗೊಳಿಸಲಾಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next