Advertisement
ಹೊಸಪೇಟೆಯ ಹೊಸ ಅನುಭವಮುಂಜಾನೆಯ ಹೊತ್ತು. ಆಗಾಗಲೇ ಮೂಡಣದಲ್ಲಿ ರವಿಯ ಜನನವಾಗುತ್ತಿತ್ತು. ಅರುಣನ ಎಳೆ ಕಿರಣಗಳು ಸುತ್ತಲೂ ಪಸರಿಸತೊಡಗಿತ್ತು. ಸ್ವೆಟರ್ ಧರಿಸಿದ್ದರೂ ಚಳಿಗೇನೂ ಕಮ್ಮಿ ಇರಲಿಲ್ಲ. ಮುಂಜಾವಿನ ಹೊತ್ತಲ್ಲಿ ಬಸ್ಸಲ್ಲಿ ಸಂಚರಿಸುವುದು ಹೊಸ ಅನುಭವವಾಗಿತ್ತಾದರೂ ಅರುಣೋದಯದ ಸೊಬಗನ್ನು ಆಸ್ವಾದಿಸುತ್ತಾ, ಆಯಾಸ ಪರಿಹರಿಸಿ ಎಚ್ಚೆತ್ತ ಪ್ರಕೃತಿಯು ರವಿಯನ್ನು ಬರಮಾಡಿಕೊಂಡು ಹೊಸ ದಿನಕ್ಕೆ ಸಿದ್ಧತೆ ನಡೆಸುವ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದು ಒಂದು ರಮ್ಯ ಅನುಭವವಾಗಿತ್ತು. ನಾವು ಮುಂದೆ ಚಲಿಸಿದಂತೆ ಸುತ್ತಮುತ್ತಲಿದ್ದ ಗುಡ್ಡಗಳೂ ನಮ್ಮೊಂದಿಗೆ ಚಲಿಸುವಂತೆ ಭಾಸವಾಗುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿ ಕೃಷಿ ಮಾಡಿದ್ದ ಸೂರ್ಯಕಾಂತಿ ಹೂಗಳು ಸೂರ್ಯನೇ ಕವಲುಗಳಾಗಿ ಒಡೆದು ಬಂದು ಹಸಿರು ಗಿಡಗಳ ಮೇಲೆ ಕುಳಿತು ನಗುತ್ತಿರುವಂತೆ ತೋರುತ್ತಿದ್ದವು. ತಣ್ಣನೆ ಬೀಸಿದ ತಂಗಾಳಿಯಿಂದ ಬಾಗುತ್ತಿದ್ದ ಹೂಗಳು ತಲೆಯಲ್ಲಾಡಿಸಿ ನಮ್ಮನ್ನು ಕನ್ನಡ ನಾಡಿಗೆ ಸ್ವಾಗತಿಸಿದಂತೆ ಭಾಸವಾಯಿತು. ಅಷ್ಟರಲ್ಲಿ ಹೊಸಪೇಟೆ ತಲುಪಿತು ಎಂದು ತಿಳಿದಾಗ ನಮ್ಮೆಲ್ಲರ ಮುಖದಲ್ಲಿ ಕಿರುನಗೆ ಅರಳಿತು. ನಾವು ತಂಗುವ ವಸತಿಯನ್ನು ಮುಂಗಡವಾಗಿಯೇ ಬುಕ್ಕಿಂಗ್ ಮಾಡಲಾಗಿತ್ತು.
ಹಂಪಿಯು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಪ್ರೇಕ್ಷಣೀಯ ಸ್ಥಳ ಹೊಸಪೇಟೆಯಿಂದ ಹಂಪಿಗೆ ಕಡ್ಡಿರಾಂಪುರ ಮತ್ತು ಕಮಲಾಪುರ ಮಾರ್ಗವಾಗಿ ಹೋಗಬಹುದು. ದಾರಿಯಂತೂ ಸುತ್ತಿಬಳಸಿದ್ದಾಗಿತ್ತು. ದೂರದಲ್ಲಿ ಒಂದರ ಮೇಲೊಂದರಂತೆ ವ್ಯವಸ್ಥಿತವಾಗಿದ್ದ ಬೃಹದಾಕಾರದ ಬಂಡೆಗಲ್ಲುಗಳ ಸಮೂಹವು ವಿಚಿತ್ರವಾಗಿದ್ದು ಮುಗಿಲನ್ನು ಚುಂಬಿಸುವಂತೆ ತೋರುತ್ತಿತ್ತು. ಮಟ ಮಟ ಮಧ್ಯಾಹ್ನದ ಸಮಯ ಉರಿಬಿಸಿಲಿಗೆ ನಾವು ಕಂಡದ್ದು ಬಂಡೆಗಲ್ಲುಗಳನ್ನು ಮಾತ್ರ. ಅಲ್ಲಿಂದ ಮಾರ್ಗದರ್ಶಿಗಳ ನೇತೃತ್ವದಲ್ಲಿ ನಮ್ಮ ಯಾನವು ಉಗ್ರನರಸಿಂಹನತ್ತ ಸಾಗಿತು. ಹಂಪಿಯಲ್ಲಿರುವ ಎಲ್ಲ ಮೂರ್ತಿಗಳಿಗಿಂತಲೂ ಬೃಹದಾಕಾರದ ಮೂರ್ತಿ ಇದಾಗಿತ್ತು. ಇದು ಸಾವಿರದ ಐನ್ನೂರಇಪ್ಪತ್ತೆಂಟರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಓರ್ವ ಬ್ರಾಹ್ಮಣನಿಂದ ನಿರ್ಮಿಸಲ್ಪಟ್ಟಿತು. ತೊಡೆಯ ಮೇಲೆ ಲಕ್ಷ್ಮೀಯ ವಿಗ್ರಹವಿದ್ದು ವಿಜಯನಗರದ ಕೊನೆಯ ಯುದ್ಧದಲ್ಲಿ ಮುಸ್ಲಿಂಮರ ದಾಳಿಗೆ ತುತ್ತಾಗಿ ವಿಕೃತಗೊಂಡಿದೆ. ನರಸಿಂಹನ ಹಿಂದೆ ಬೃಹದಾಕಾರದ ಪ್ರಭಾವಳಿ, ತಲೆಯ ಹಿಂದೆ ಹೆಡೆಬಿಚ್ಚಿದ ಸರ್ಪವಿದ್ದು ವಿಗ್ರಹದ ಅನೇಕ ಭಾಗಗಳು ಭಗ್ನಗೊಂಡಿದೆ.ಉಗ್ರನರಸಿಂಹನ ಮೂರ್ತಿಯ ಪಕ್ಕದಲ್ಲಿಯೇ ಒಂದು ಮಂಟಪದಲ್ಲಿ ಕರಿಯ ಕಲ್ಲಿನಿಂದ ನಿರ್ಮಿಸಲಾದ ಲಿಂಗವಿದೆ. ಈ ಲಿಂಗವನ್ನು ಬಡವಿಲಿಂಗ ಎಂಬುದಾಗಿ ಕರೆಯುತ್ತಾರೆ. ಇದರ ಅರ್ಧಭಾಗ ವರ್ಷದ ಮುನ್ನೂರರುವತ್ತೈದು ದಿನಗಳೂ ಕೂಡಾ ನೀರಿನಿಂದ ಆವೃತವಾಗಿರುತ್ತದೆ.
Related Articles
Advertisement
ಇನ್ನೊಮ್ಮೆ ಬರುವೆಮಧ್ಯಾಹ್ನದೂಟವನ್ನು ಮುಗಿಸಿದ ಮೇಲೆ ಬಸ್ಸು ವಿರೂಪಾಕ್ಷ ದೇವಾಲಯದತ್ತ ಹೊರಟಿತು. ವಿರೂಪಾಕ್ಷ ದೇವಾಲಯದಿಂದ ಒಂದು ಕಿ. ಮೀ. ದೂರದಲ್ಲಿ ಬಸ್ಸು ನಿಂತಿತು. ಅದರಿಂದಾಚೆ ಬಸ್ಸು ಹೋಗುವಂತಿರಲಿಲ್ಲ. ಕಾಲ್ನಡಿಗೆಯಲ್ಲಿ ಹೊರಟಿತು ನಮ್ಮ ಪಯಣ. ಅಲ್ಪಸ್ವಲ್ಪ ಆಯಾಸಪಟ್ಟು ಗೆಳತಿಯರೊಂದಿಗೆ ಹರಟೆ ಹೊಡೆಯುತ್ತ ನಡೆವಾಗಿನ ಖುಷಿಯೇ ಬೇರೆ. ಒಂದು ಕಿ.ಮೀ ನಡೆದದ್ದು ತಿಳಿಯಲೇ ಇಲ್ಲ. ಅಲ್ಲಿ ನಾವು ಕಂಡದ್ದು ಭವ್ಯವಾಗಿ ಎತ್ತರವಾಗಿ ಕಂಗೊಳಿಸುವ ಗೋಪುರ. ಈ ಗೋಪುರ ಹನ್ನೊಂದು ಅಂತಸ್ತುಗಳಿಂದ ಕೂಡಿದೆ. ವಿರೂಪಾಕ್ಷನನ್ನು ಪಂಪಾಪತಿ ಎಂದು ಕರೆಯುವುದು ವಾಡಿಕೆ. ಹಂಪಿಯಲ್ಲಿರುವಂಥ ಎಲ್ಲ ದೇವಾಲಯಗಳಿಗಿಂತಲೂ ಪ್ರಸಿದ್ಧವೂ ಪ್ರಾಚೀನವೂ ಆದ ಈ ದೇವಾಲಯದ ಬಾಗಿಲು ಸೊಗಸಾದ ಕೆತ್ತನೆಯಿಂದ ಕೂಡಿದೆ. ಒಳ ಪ್ರವೇಶಿಸಿದಾಗ ಗರ್ಭಗುಡಿಯಲ್ಲಿ ಕಂಗೊಳಿಸುವುದೇ ವಿರೂಪಾಕ್ಷ ಮೂರ್ತಿ. ಅದೇ ರೀತಿ ಜಗದ್ವಿಖ್ಯಾತ ಶಿಲಾರಥವು ನಮ್ಮನ್ನು ತನ್ನೆಡೆಗೆ ಆಕರ್ಷಿಸಿತು. ಶಿಲಾರಥದಲ್ಲಿ ಸೈನಿಕರು, ಬೇಟೆಗಾರರು, ಸವಾರರು ಇವರ ಚಿತ್ರವನ್ನು ಬಿಡಿಸಲಾಗಿದೆ. ನಯನ ಮನೋಹರ ಶಿಲಾರಥವನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದೆವು.ಅಲ್ಲೇ ಬಳಿಯಲ್ಲಿದ್ದಂತಹ ನಾಟ್ಯಮಂಟಪದ ಕಲ್ಲಿನ ಕಂಬಗಳಿಗೆ ಕೈಯಿಂದ ಬಡಿದು ಮಾರ್ಗದರ್ಶಿಗಳು ವಿಧ ವಿಧವಾದ ಇಂಪಾದ ಸಂಗೀತನಾದವನ್ನು ಹೊರಡಿಸಿದಾಗ ಪುಳಕಿತರಾದ ನಾವು ಒಂದು ಕ್ಷಣ ಮೂಕವಿಸ್ಮಿತರಾದೆವು. ಅಷ್ಟು ಹೊತ್ತಿಗಾಗಲೇ ದಿನಕರನು ಪಶ್ಚಿಮ ದಿಕ್ಕಿನ ಮನೆಯೊಳಗೆ ಮರೆಯಾಗಲು ಅಣಿಯಾಗುತ್ತಿದ್ದನು. ನಾವು ಹಿಂತಿರುಗಬೇಕಾದದ್ದು ಅನಿವಾರ್ಯವಾಗಿತ್ತು. ಮುಸ್ಸಂಜೆಯ ಹೊತ್ತಲ್ಲಿ ತಣ್ಣನೆಯ ತಂಗಾಳಿಯು ಬೀಸುತ್ತಿರಲು ನಾವು ಬಸ್ಸಿನ ಬಳಿ ತಲುಪಿದೆವು. ನಿಜಹೇಳಬೇಕೆಂದರೆ ಹಂಪಿಯಲ್ಲಿ ನೋಡತಕ್ಕಂತಹ ಸ್ಥಳಗಳು ಬಹಳಷ್ಟಿದ್ದರೂ ಸಮಯದ ಅಭಾವ ಆ ಭಾಗ್ಯವನ್ನು ನಮ್ಮಿಂದ ಕಿತ್ತುಕೊಂಡಿತು.
ವಿಜಯನಗರ ಸಾಮ್ರಾಜ್ಯದ ವೈಭವ ಒಂದು ಗಳಿಗೆಯಲ್ಲಿ ನೋಡಿಮುಗಿಸುವಂಥದ್ದಲ್ಲ. ಒಂದು ಕಾಲದಲ್ಲಿ ವಿಜಯನಗರದ ರಾಜಧಾನಿಯಾಗಿ ಮೆರೆದು ದೇಶ-ವಿದೇಶ ವ್ಯಾಪಾರಿಗಳಿಂದ ತುಂಬಿ ತುಳುಕಿದ ಆ ಮಹಾನಗರ ಇಂದು ಬರಡಾದುದನ್ನು ಕಂಡು ಮನಸ್ಸಿಗೆ ಬೇಸರವಾಯಿತು. ಇತಿಹಾಸದ ಸುಗಂಧವನ್ನು ಬೀರುತ್ತಿರುವ ಹಂಪಿಯ ಪವಿತ್ರ ಮಣ್ಣನ್ನು ಬಿಟ್ಟು ಬಸ್ಸು ನಮ್ಮನ್ನು ಹೊತ್ತು ಮುಂದೆ ಸಾಗಿತು. ನಾನೊಮ್ಮೆ ಹಿಂತಿರುಗಿ ನೋಡಿದೆ. ದೂರದಲ್ಲಿ ಬಂಡೆಕಲ್ಲುಗಳ ಸಾಲು ದಿಬ್ಬಣ ಹೊರಟಂತೆ ಶೋಭಿಸುತ್ತಿತ್ತು. ನಾನು ಮನದಲ್ಲೇ, ಇನ್ನೊಮ್ಮೆ ಬರುವೆ ಈ ಹಂಪಿಯನ್ನು ಸಂಪೂರ್ಣವಾಗಿ ಕಂಡು ಅದರ ಹಿಂದಿನ ಇತಿಹಾಸವನ್ನು ಅರಿಯಲು ಎಂದು ಹೇಳಿ ಹಂಪಿಗೆ ವಿದಾಯ ಹೇಳಿದೆನು.
ತೇಜಶ್ರೀ ಪ್ರಥಮ ಪತ್ರಿಕೋದ್ಯಮ, ವಿ.ವಿ ಕಾಲೇಜು, ಮಂಗಳೂರು