ಸಿಂದಗಿ (ವಿಜಯಪುರ): ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯದಿದ್ದ ಕಾರಣ ಕೇಂದ್ರದ ಮುಂದೆಯೇ ಮಹಿಳೆಯೊಬ್ಬರಿಗೆ ಹೆರಿಗೆಯಾದ ಘಟನೆ ಶುಕ್ರವಾರ ಬೆಳಗ್ಗೆ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ಸುನಂದಾ ಹೂಗಾರ ಎಂಬುವರು ಬೆಳಗ್ಗೆ 6 ಗಂಟೆಗೆ ಬಂದಿದ್ದರು.
ಆದರೆ, ಆಸ್ಪತ್ರೆಗೆ ಕೀಲಿ ಹಾಕಿದ್ದರು. ಹೀಗಾಗಿ, ಗರ್ಭಿಣಿಯನ್ನು ಆಸ್ಪತ್ರೆಯ ಹೊರಗಡೆ ಮಲಗಿಸಿ, ಅಲ್ಲಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯನ್ನು ಕರೆದುಕೊಂಡು ಬರುವಷ್ಟರಲ್ಲಿ ಹೆರಿಗೆಯಾಗಿದೆ. ಸುನಂದಾಗೆ ಇದು ಎರಡನೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆಗ ಅಲ್ಲಿಗೆ ಬಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಮಗುವಿನ ಮೇಲಿದ್ದ ಮಾಸವನ್ನು ಬೇರ್ಪಡಿಸಿ 108 ಆಂಬ್ಯುಲೆನ್ಸ್ ಮೂಲಕ ಸಿಂದಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಿದರು. ಸಿಂದಗಿ ಸರಕಾರಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ.
ಬಳಗಾನೂರ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ 24 ಗಂಟೆ ಸೇವೆ ನೀಡುವ ಆಸ್ಪತ್ರೆಯಾಗಿಲ್ಲವಾದ್ದರಿಂದ ಪ್ರತಿದಿನ 9 ಗಂಟೆಗೆ ಆಸ್ಪತ್ರೆ ತೆರೆಯುತ್ತದೆ. ಆದರೆ, ಇಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಇರುತ್ತಾರೆ. ಸುನಂದಾ ಹೂಗಾರ ಹೆರಿಗೆಗಾಗಿ ಆಸ್ಪತ್ರೆಗೆ ಬೆಳಗ್ಗೆ ಬಂದಿದ್ದರು.
ಆಸ್ಪತ್ರೆ ಹೊರಗೆ ಹೆರಿಗೆಯಾಗಿದೆ. ಅಲ್ಲಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಹಾಯದಿಂದ ಸಿಂದಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಿಂದಗಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಆರ್.ಎಸ್. ಇಂಗಳೆ ತಿಳಿಸಿದ್ದಾರೆ.
ತನಿಖೆಗೆ ಸೂಚನೆ
ಚಿತ್ರದುರ್ಗ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಬಳಗಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಯಲಲ್ಲೇ ಹೆರಿಗೆಯಾದ ಪ್ರಕರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ ಕುರಿತು ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳಗಾನೂರು ಆರೋಗ್ಯ ಕೇಂದ್ರದ ಸಿಬ್ಬಂದಿ ಶಿಫ್ಟ್ ಬದಲಾವಣೆ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.