Advertisement
ಛತ್ತೀಸ್‌ಗಢದ ರಾಜಧಾನಿ 500 ಕಿ.ಮೀ. ದೂರವಿರುವ ಬಿಜಾಪುರ ಜಿಲ್ಲೆಯ ಹಳ್ಳಿಯಾದ ಪಾಮೇದ್‌ನ ಪೊಲೀಸ್ ಠಾಣೆಯ ಸರಹದ್ದಿನಲ್ಲಿನ ಪೂಜಾರಿ ಕಾಂಕೆರ್ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಹಿಳಾ ನಕ್ಸಲರು ಸೇರಿ, 12 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದ ಗ್ರೇಹೌಂಡ್ಸ್ ಪಡೆ ಹಾಗೂ ಛತ್ತೀಸ್‌ಗಢ ಪೊಲೀಸರ ವಿಶೇಷ ತಂಡ ಈ ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಎನ್‌ಕೌಂಟರ್‌ನಲ್ಲಿ ಅಸುನೀಗಿರುವ ನಕ್ಸಲರ ಪೈಕಿ ಕೆಲವರು ಆ ಗುಂಪಿನ ಪ್ರಮುಖ ನಾಯಕರಿರರಬಹುದೆಂದು ಶಂಕಿಸಲಾಗಿದೆ. ಮೃತರ ಬಳಿ ಎ.ಕೆ.47 ರೈಫಲ್ ಸಿಕ್ಕಿರುವುದು ಇದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ. ನಕ್ಸಲರ ಹಿರಿಯ ಸದಸ್ಯರಿಗಷ್ಟೇ ಈ ರೈಫಲ್ ಉಪಯೋಗಿಸಲು ಅವಕಾಶ ನೀಡಲಾಗುತ್ತದೆ ಎಂಬುದು ಪೊಲೀಸರ ಅಭಿಪ್ರಾಯ. ಈ ಮಧ್ಯೆ, ಇದೊಂದು ನಕಲಿ ಎನ್ ಕೌಂಟರ್ ಆಗಿದೆ ಎಂದು ತೆಲಂಗಾಣದ “ರೆವಲ್ಯೂಷನರಿ ರೈಟರ್ಸ್ ಅಸೋಸಿಯೇಷನ್’ನ ಸದಸ್ಯ ವಾರಾವರ ರಾವ್ ಅನುಮಾನ ವ್ಯಕ್ತಪಡಿಸಿದ್ದಾರೆ.
Related Articles
ಬೀದರ: ಭದ್ರತಾ ಪಡೆ ಮತ್ತು ನಕ್ಸಲೀಯರ ನಡುವಿನ ಕದನ ದಲ್ಲಿ ರಾಜ್ಯದ ಬೀದರ್ ನಿವಾಸಿ ಕಮಾಂಡರ್ ಸುಶೀಲಕುಮಾರ ವಿಜಯಕುಮಾರ ಬಪ್ಪನಪಳ್ಳಿ (32) ಹುತಾತ್ಮರಾಗಿದ್ದಾರೆ.
Advertisement
ಸುಶೀಲಕುಮಾರ ನಗರದ ಗ್ರೇಸ್ ಕಾಲೋನಿಯ ನಿವಾಸಿಯಾಗಿದ್ದು, ಗುಂಡಿನ ಕಾರ್ಯಾಚರಣೆಯಲ್ಲಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬಂಧು-ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೋಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಸ್ಥರನ್ನು ಸಾವು ದುಃಖದ ಮಡಿಲಲ್ಲಿ ತೇಲಿಸಿದೆ. 2004ರಲ್ಲಿ ಆಂಧ್ರದಲ್ಲಿ ಪೊಲೀಸ್ ಪೇದೆಯಾಗಿ ನೇಮಕಗೊಂಡಿದ್ದ ಸುಶೀಲಕುಮಾರ ಅವರು, ನಂತರ ನಕ್ಸಲ್ ನಿಗ್ರಹ ಪಡೆಯಲ್ಲಿ ಕಮಾಂಡೋ ಆಗಿ ಬಡ್ತಿ ಹೊಂದಿದ್ದರು. 2009ರ ಮೇ 25ರಂದು ಮದುವೆಯಾಗಿದ್ದ ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಸುಶೀಲಕುಮಾರ ಅವರ ಪಾರ್ಥಿವ ಶರೀರ ಶುಕ್ರವಾರ ಸಂಜೆ ವೇಳೆ ಬೀದರ್‌ಗೆ ಆಗಮಿಸಲಿದ್ದು, ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.