Advertisement
ಮಣಿಪಾಲದ ಬ್ರಹ್ಮನೆಂದೇ ಖ್ಯಾತರಾದ ದಿ.ಡಾ.ಟಿ.ಎಂ.ಎ.ಪೈ ಅವರು 1949ರಲ್ಲಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಅನ್ನುವ ವಿದ್ಯಾ ಸಂಸ್ಥೆಯ ಹಣತೆಯನ್ನು ಹಚ್ಚಿದರು. ಇಂದು ಈ ವಿದ್ಯಾ ಸಂಸ್ಥೆ ವರುಷದಿಂದ ವರುಷಕ್ಕೆ ಪ್ರವರ್ಧಮಾನವಾಗಿ ಬೆಳೆದು ಬಂದು ಇದೀಗ 75ರ ಸಂವತ್ಸರದ ಅಮೃತ ಮಹೋತ್ಸವದ ಸಂಭ್ರಮದ ಹೊಸ್ತಿಲಲ್ಲಿ ಬಂದು ನಿಂತಿದೆ. ಈ ಎಪ್ಪತ್ತೈದು ವರುಷಗಳ ಅವಧಿಯಲ್ಲಿ ಹೊತ್ತಿಸಿದ ಜ್ಞಾನ ದೀಪಗಳು ಜಗತ್ತಿನ ಮೂಲೆ ಮೂಲೆಗಳಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿವೆ.
Related Articles
Advertisement
ಜೂನ್27,1949ರಲ್ಲಿ ಉಡುಪಿ ನಗರದ ಮುದ್ದಣ ಕವಿ ಮಾರ್ಗದಲ್ಲಿರುವ ಮೈನ್ (ಮಹಾತ್ಮ ಗಾಂಧಿ ಹಿರಿಯ ಪ್ರಾಥಮಿಕ ಶಾಲೆ)ಶಾಲೆಯಲ್ಲಿ ಮೊದಲ ತಂಡದ ವಿದ್ಯಾರ್ಥಿಗಳ ಪಾದಾರ್ಪಣೆಯಾಯಿತು.ಮುಂದಿನ ವರುಷವೇ ಅಂದರೆ 1951ರಲ್ಲಿ ಇಂದಿನ ಕ್ಯಾಂಪಸ್‌ನ ಕಟ್ಟಡಕ್ಕೆ ಸ್ಥಳಾಂತರವಾಯಿತು.
ಇಲ್ಲಿ ಪ್ರಾರಂಭವಾದ ಮೊದಲ ಕೋರ್ಸ್ ಇಂಟ ರ್ ಮಿಡಿಯೆಟ್ ಶಿಕ್ಷಣ.ಅನಂತರದಲ್ಲಿ ವರುಷದಿಂದ ವರುಷಕ್ಕೆ ವಿವಿಧ ವಿಷಯಗಳ ಕೇೂರ್ಸುಗಳನ್ನು ಪ್ರಾರಂಭಿಸುವುದರ ಮೂಲಕ ಸಮಗ್ರ ಶಿಕ್ಷಣದ ಅಧ್ಯಯನಕ್ಕೆ ಎಂಜಿಎಂ.ಕಾಲೇಜು ಪ್ರಧಾನ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಿತು.ಮೊದಲ ವರುಷದಲ್ಲಿ ಕೇವಲ 89 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಕಾಲೇಜು ಇಂದು ಮೂರು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಒಂದೇ ಕ್ಯಾಂಪಸ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ವಿದ್ಯಾರ್ಜನೆ ಮತ್ತು ವ್ಯಕ್ತಿತ್ವದ ಪರಿಪೂರ್ಣತೆಗೆ ಬೇಕಾಗುವ ಪರಿಸರ; ಪರಿಕರ ಮತ್ತು ಬಹು ಆಕರ್ಷಿತ ವಿಶಾಲವಾದ ಸುಮಾರು 46 ಎಕರೆ ವಿಸ್ತಾರವಾದ ಕ್ಯಾಂಪಸ್ ಹೊಂದಿರುವ ರಾಜ್ಯದ ಕೆಲವೇ ಕಾಲೇಜುಗಳಲ್ಲಿ ಎಂಜಿಎಂ ಒಂದು ಅನ್ನುವುದು ಈ ವಿದ್ಯಾ ಸಂಸ್ಥೆಯ ಇನ್ನೊಂದು ಗರಿಮೆ.
ಸಮಗ್ರ ಶಿಕ್ಷಣ
ಒಂದು ವಿಶ್ವವಿದ್ಯಾಲಯ ರೂಢಿಸಿ ಕೊಳ್ಳ ಬೇಕಾದ ಸಮಗ್ರ ಶಿಕ್ಷಣ ಪದ್ಧತಿ ಒಂದು ಕಾಲೇಜಿನ ಆವರಣದೊಳಗೆ ತನ್ನ ವಿದ್ಯಾರ್ಥಿಗಳಿಗೆ ದೊರಕಸಿಕೊಡುತ್ತಿದೆ ಅಂದರೆ ಒಂದು ವಿಶ್ವವಿದ್ಯಾಲಯ ಮಾಡ ಬೇಕಾದ ಜವಾಬ್ದಾರಿಯನ್ನು ಎಂಜಿಎಂ.ಸಂಸ್ಥೆ ಮಾಡಿತೋರಿಸಿದೆ ಅನ್ನುವುದು ವಾಸ್ತವಿಕ ಸತ್ಯ. ಪ್ರಾಮುಖ್ಯವಾಗಿ ಭಾಷೆ; ಸಾಹಿತ್ಯ ; ನಾಟಕ; ಸಂಗೀತ ;ಜಾನಪದ ಸಂಶೋಧನೆ ಮುಂತಾದ ಮಾನವಿಕ ಮೌಲ್ಯಗಳ ಚಿಂತನೆ; ಅಧ್ಯಯನ; ಸಂಶೋಧನಾ ಕಾರ್ಯಗಳು ಈ ಕ್ಯಾಂಪಸ್ ಒಳಗೆ ಅನುಚಾನವಾಗಿ ನಡೆಯುತ್ತಿರುವುದರಿಂದಾಗಿ ದೇಶ ವಿದೇಶಗಳ ತಜ್ಞರು, ಸಂಶೋಧಕರು, ಕಲಾ ಪುರುಷರು ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಚಿತರಾಗುತ್ತಾ ಬಂದಿದ್ದಾರೆ. ಹಾಗಾಗಿಯೇ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈಯಲು ಪ್ರೇರಣಾ ಶಕ್ತಿಯಾಯಿತು ಅಂದರೂ ತಪ್ಪಾಗಲಾರದು.
ಕಾಲೇಜಿನ ವಾಸ್ತು
ಕಟ್ಟಡಗಳ ವಿನ್ಯಾಸದಲ್ಲಿ ಕೂಡಾ ಎಂ.ಜಿ.ಎಂ.ಗೆ ತನ್ನದೇ ಆದ ವಿಶೇಷತೆ ಇದೆ.ನೈಸರ್ಗಿಕ ಮಡಿಲಲ್ಲಿ ಹಳೆಯದಾದ ಶೈಲಿಯನ್ನು ಬಿಂಬಿಸುವ ಕಲ್ಲಿನ ಮೇಲೆ ಕೆತ್ತಿದಂತಿರುವ ಗಟ್ಟಿ ಮುಟ್ಟಾದ ಕಟ್ಟಡಗಳು ಇಂದಿಗೂ ಎಂದಿಗೂ ಕಾಲೇಜಿನ ಇತಿಹಾಸವನ್ನು ದಾಖಲಿಸುವ ವಾಸ್ತು ಶಿಲೆಗಳಾಗಿವೆ.ಮೊದಲಿನ ಆಡಳಿತ ಕಛೇರಿಯ ಸೌಧವಾಗಲಿ; ದಿನನಿತ್ಯದ ಸಭೆ ಸಮಾರಂಭಗಳಿಗೆ ಜೀವ ತುಂಬುವ ಮುದ್ದಣ ಮಂಟಪವಾಗಲಿ ; ಕಲಾ ರಸಿಕರನ್ನು ಕೂರಿಸಿ ತನು ಮನ ತಂಪಾಗಿಸುವ ನೂತನ ರವೀಂದ್ರ ಮಂಟಪ ವಾಗಲಿ;ಪರಿಪಕ್ವ ಚಿಂತನೆಗಳಿಗೆ ನೆಲೆಯಾದ ಗೀತಾಂಜಲಿ ಸಭಾಭವನವಾಗಲಿ ಹಾಗೂ ಶೈಕ್ಷಣಿಕ ಚಿಂತನ ಮಂಥನಗಳಿಗೆ ಮುದ ನೀಡುವ ದ್ರಶ್ಯ ಶ್ರಾವ್ಯ ಮಿನಿ ಸಭಾಂಗಣ..
ಇವೆಲ್ಲವೂ ಈ ಶಿಕ್ಷಣ ಸಂಸ್ಥೆಯ ವ್ಯಕ್ತಿತ್ವವನ್ನು ಉತ್ತುಂಗಕ್ಕೆ ಏರಿಸಿದೆ. ನಾಲ್ಕು ವಿ.ವಿ. ಗಳ ಆರೈಕೆ ಹಾರೈಕೆಗಳ ಮಾನ್ಯತೆಯಲ್ಲಿ ಬೆಳೆದು ಬಂದ ರಾಜ್ಯದ ಅಪರೂಪದ ಶಿಕ್ಷಣ ಸಂಸ್ಥೆ ಅಂದರೆ ಎಂ.ಜಿ.ಎಂ. ಕಾಲೇಜು. ಮೊದಲ ಪ್ರಾರಂಭಿಕ ವರುಷದಲ್ಲಿ ಮದ್ರಾಸ್ ವಿ.ವಿ., ಅನಂತರದಲ್ಲಿ ಕರ್ನಾಟಕ ವಿ.ವಿ. ಧಾರವಾಡ ತದನಂತರ ಮೈಸೂರು ವಿ.ವಿ.ಹಾಗೂ ಪ್ರಸ್ತುತ ಮಂಗಳೂರು ವಿ.ವಿ. ಮಾನ್ಯತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಇತ್ತೀಚಿನ ಯು.ಜಿ.ಸಿ ಮೌಲ್ಯಾಂಕನ ವೀಕ್ಷಣಾ ತಂಡದ ಅಧ್ಯಯನ ವರದಿ ಪ್ರಕಾರ ಎಂ.ಜಿ.ಎಂ.ಕಾಲೇಜು ಎ+ಶ್ರೇಣಿ ಪಡೆಯುವುದರೊಂದಿಗೆ ಸ್ವಾಯತ್ತತೆ ಸಂಸ್ಥೆಯಾಗಿ ಬೆಳೆಯ ಬಲ್ಲ ಎಲ್ಲಾ ಆರ್ಹತೆ ಹೊಂದಿದೆ ಅನ್ನುವುದು ಇನ್ನೊಂದು ಮೈಲುಗಲ್ಲು.
ಎಂ.ಜಿ.ಎಂ.ಸಂಸ್ಥೆಯ ಗುರು ಪರಂಪರೆ
ಕಲ್ಪನೆಗೂ ಮೀರಿದ ಯಶಸ್ವಿನ ಸಾಧನೆಯನ್ನು ಒಂದು ವಿದ್ಯಾ ಸಂಸ್ಥೆ ಸಾಧಿಸಿದೆ ಅಂದರೆ ಅದರ ಹಿಂದಿರುವ ಗುರು ಪರಂಪರೆ ಮತ್ತು ಪ್ರಾಚಾರ್ಯರ ಪಾತ್ರ ಅಷ್ಟೇ ಮುಖ್ಯ. ಎಂ.ಜಿ.ಎಂ.ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ತಾನು ಎಂಜಿಎಂ. ವಿದ್ಯಾರ್ಥಿ ಅನ್ನುವುದರಲ್ಲಿಯೇ ಹೆಮ್ಮೆ ಪಡುತ್ತಾನೆ ಮಾತ್ರವಲ್ಲ ವಿಶೇಷ ಗೌರವವನ್ನು ಪಡೆಯುತ್ತಾನೆ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ತನ್ನ ವಿದ್ಯಾರ್ಥಿ ಜೀವನ ನೆನಪಿಸಿಕೊಳ್ಳುವಾಗ ಆಯಾಯ ಕಾಲದ ಪ್ರಾಂಶುಪಾಲರುಗಳ ಹೆಸರಿನಲ್ಲಿಯೇ ತನ್ನ ಅಧ್ಯಯನ ವರುಷವನ್ನು ನೆನಪಿಸಿಕೆುಳ್ಳುವ ಒಂದು ಪರಂಪರೆ ಇಲ್ಲಿ ಬೆಳೆದು ಬಂದಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು. ಸ್ಥಾಪಕ ಪ್ರಾಂಶುಪಾಲರದ ಪ್ರೋ. ಸುಂದರರಾವ್ ಶಿಸ್ತು ಘನ ಗಾಂಭೀರ್ಯ ಉಡುಗೆ ತೊಡುಗೆಗಳಿಂದಲೇ ಇಂಗ್ಲಿಷ್ ಶೇಕ್ಸ್ಪಿಯರ್ ಎಂದೇ ವಿದ್ಯಾರ್ಥಿಗಳಿಂದ ಗುರುತಿಸಿಕೊಂಡಿದ್ದಾರೆ.
ಅನಂತರದಲ್ಲಿ ಕು.ಶಿ.ಅವರ ಆಡಳಿತ ಕಾಲ ಎಂಜಿಎಂ.ಅಂದರೆ ಕೇವಲ ನಾಲ್ಕು ಗೋಡೆಗಳ ಒಳಗಿನ ಶಿಕ್ಷಣವಾಗದೆ ಹೊರಗಿನ ಸಾಂಸ್ಕೃತಿಕ ಪರಿಸರದ ಜೊತೆ ಬೆರೆತು ವ್ಯಕ್ತಿತ್ವ ರೂಪಿಸಿ ಕೊಳ್ಳಬೇಕು ಅನ್ನುವ ಅರ್ಥದಲ್ಲಿ ಎಂಜಿಎಂ.ಸಂಸ್ಥೆಯನ್ನು ರೂಪಿಸಿದ ಕೀರ್ತಿ ಪ್ರೊ.ಕು.ಶಿ.ಅವರಿಗೆ ಸಲ್ಲುತ್ತದೆ.ಇದನ್ನೇ ನಾವು ಸುವರ್ಣ ಯುಗವೆಂದೇ ಕರೆಯುತ್ತೇವೆ. ಮುಂದೆ ಬಂದ ಎಲ್ಲಾ ಪ್ರಾಚಾರ್ಯರು ಕೂಡಾ ಈ ಪರಂಪರೆಯನ್ನು ಉಳಿಸಿ ಬೆಳೆಸಿ ತಮ್ಮದೇ ಆದ ಆಡಳಿತದ ಛಾಪನ್ನು ಒತ್ತುವುದರ ಮೂಲಕ ಸರ್ವ ವಿದ್ಯಾರ್ಥಿಗಳ ಪ್ರೀತಿಗೂ ಪಾತ್ರರಾಗಿದೆ.
ಎಂಜಿಎಂ.ಕಾಲೇಜಿಗೆ 75 ವರ್ಷತುಂಬುವ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟು ಸೇರಿ ಆಚರಿಸುವ ಅಪೂರ್ವ ಅವಕಾಶವೇ ಅಮೃತ ಸಂಗಮ.ಹಳೆಯ ಸ್ನೇಹಿತರೆಲ್ಲ ಒಂದೇ ವೇದಿಕೆಯಲ್ಲಿ ಸೇರಿ ಮತ್ತೆ ಹಳೆಯ ನೆನಪುಗಳನ್ನು ನೆನಪಿಸಿ ಕೊಂಡುಹಳೆಯ ಬಾಂಧವ್ಯವನ್ನು ಮತ್ತೆ ಬೆಸೆದು ಕೊಳ್ಳುವ ಪ್ರಯತ್ನವೇ ಅಮೃತ ಸಂಗಮ.ನಮ್ಮೆಲ್ಲ ಹಳೆಯ ವಿದ್ಯಾರ್ಥಿಗಳು ತಮ್ಮದೇ ಮನೆಯ ಕಾರ್ಯಕ್ರಮವೆಂದೇ ಭಾವಿಸಿ ಇಂದಿನ ಅಮೃತ ಸಂಗಮ ಕಾರ್ಯಕ್ರಮವನ್ನು ಸಂಪನ್ನಗೊಳಿಸಿ ಕೊಡ ಬೇಕಾಗಿ ವಿನಂತಿ. ಪ್ರೊ. ಎಂ.ಎಲ್. ಸಾಮಗ ಪ್ರಧಾನ ಸಂಘಟಕರು , ಹಳೆ ವಿದ್ಯಾರ್ಥಿಅಮೃತ ಸಂಗಮ ಸಮಿತಿ, ಎಂಜಿಎಂ.ಕಾಲೇಜು ಉಡುಪಿ
ಹಳೆ ವಿದ್ಯಾರ್ಥಿ ಸಂಘ
ಪ್ರತಿಯೊಂದು ವಿದ್ಯಾ ಸಂಸ್ಥೆಯಲ್ಲಿ ಅಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ಆ ಸಂಸ್ಥೆಯ ರಾಯಭಾರಿ ಇದ್ದ ಹಾಗೆ. ವಿದ್ಯಾರ್ಥಿಗಳು ಕಟ್ಟಿ ಕೊಂಡ ಬದುಕಿನ ಸಾಧನೆಯ ಮೇಲೆ ಶಿಕ್ಷಣ ಸಂಸ್ಥೆಯ ಮೌಲ್ಯ ಮಾಪನವೂ ನಡೆಯುತ್ತದೆ. ಈ ನಿಟ್ಟಿನಲ್ಲಿ ನಮ್ಮಿ ಎಂಜಿಎಂ.ಸಂಸ್ಥೆ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಾಮಾಜಕ್ಕೆ ನೀಡುವುದರ ಮೂಲಕ ತನ್ನ ಘನತೆ ಗೌರವವನ್ನು ಜಗದಗಲಕ್ಕೆ ವಿಸ್ತಾರಿಸಿಕೊಂಡಿದೆ. ಎಂ.ಜಿ.ಎಂ.ಸಂಸ್ಥೆಯಿಂದ ಕಲಿತ ಆರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ವಿಶ್ವ ವಿದ್ಯಾಲಯಗಳ ಉನ್ನತ ಹುದ್ದೆಯಾದ ಕುಲಪತಿ; ಸಹ ಕುಲಾಧಿಪತಿ; ಕುಲಾಧಿಪತಿಗಳ ಸ್ಥಾನವನ್ನು ಆಲಂಕರಿಸಿದ್ದಾರೆ ಅನ್ನುವುದು ಈ ಸಂಸ್ಥೆಯ ಶಿಖರಕ್ಕೊಂದು ಚಿನ್ನದ ಗರಿ.
ಅದೇ ರೀತಿಯಲ್ಲಿ ಭಾರತೀಯ ಆಡಳಿತ ಸೇವೆಯಾದ ಐ.ಎ.ಎಸ್, ಐ.ಪಿ.ಎಸ್; ಐ.ಇ.ಎಸ್.; ಐ.ಆರ್.ಎಸ್. ಪದವಿಗೇರಿದ ಹಳೆ ವಿದ್ಯಾರ್ಥಿಗಳು ಹಲವು ಮಂದಿ ಅನ್ನುವುದು ನಮಗೂ ಹೆಮ್ಮೆ. ಅದೇಷ್ಟೊ ಮಂದಿ ವೈದ್ಯರು; ಇಂಜಿನಿಯರ್ಸ್; ಲೆಕ್ಕಪರಿಶೋಧಕರು; ನ್ಯಾಯಾಂಗ ಪರಿಣಿತರು ; ಬ್ಯಾಂಕರ್ಸ್ ಗಳು; ಶಿಕ್ಷಕರು; ಕ್ರೀಡಾ ಸಾಧಕರು; ಯಶಸ್ವಿ ಉದ್ಯಮಿಗಳು; ರಾಜಕೀಯ ಸಾಮಾಜಿಕ ಸೇವೆಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ಗುರುತಿಸಿ ಕೊಂಡಿರುವುದು ಈ ನಮ್ಮ ಮಾತೃ ಸಂಸ್ಥೆಯ ಯಶಸ್ವಿನ ಸಂಕೇತವು ಹೌದು.
ಎಂಜಿಎಂ. ಹಳೆ ವಿದ್ಯಾರ್ಥಿ ಸಂಘ ಪ್ರಾರಂಭದಿಂದಲೂ ತನ್ನ ಅಳಿಲ ಸೇವೆಯನ್ನು ಈ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ರೂಪದಲ್ಲಿ ನೀಡುತ್ತಾ ಬಂದಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ಅರ್ಹ ಬಡವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಭೋಜನ ನಿಧಿಗೆ ದೇಣಿಗೆ ನೀಡುವುದರ ಮೂಲಕ ತನ್ನ ಜವಾಬ್ದಾರಿಯನ್ನು ತೋರುತ್ತಾ ಬಂದಿದೆ. ಇದರ ಸ್ಥಾಪಕ ಅಧ್ಯಕ್ಷರಾಗಿ ಪ್ರೊ.ಶ್ರೀಶ ಆಚಾರ್ಯರು ಹಳೆ ವಿದ್ಯಾರ್ಥಿ ಸಂಘಕ್ಕೊಂದು ಅಸ್ತಿತ್ವವನ್ನು ರೂಪಿಸಿ ಕೊಟ್ಟವರು. ಅನಂತರದಲ್ಲಿ ಪ್ರೋ.ಜಯರಾಂ; ಪ್ರೋ.ದಯಾನಂದ ಶೆಟ್ಟಿ; ಪ್ರೋ.ಎಂ.ಎಲ್. ಸಾಮಗರು ಈ ಹಳೆ ವಿದ್ಯಾರ್ಥಿ ಸಂಘ ಕಟ್ಟಿ ಬೆಳೆಸುವುದರಲ್ಲಿ ಇನ್ನಷ್ಟು ಪ್ರಯತ್ನ ಶೀಲರಾದರು.ಪ್ರಸ್ತುತ ಪೊ›. ಕೊಕ್ಕರ್ಣೆಸುರೇಂದ್ರನಾಥ ಶೆಟ್ಟಿ ಅಧ್ಯಕ್ಷರಾಗಿ; ಡಾ.ವಿಶ್ವನಾಥ ಪೈ ಕಾರ್ಯದರ್ಶಿಗಳಾಗಿ; ದೀಪಾಲಿ ಕಾಮತ್ ಕೋಶಾಧಿಕಾರಿಗಳಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ .
ಇಂದು ಕಾಲೇಜಿನ ಅಮೃತ ಸಂಭ್ರಮ ಕಾಲದಲ್ಲಿ ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟು ಸೇರಿ ಅಮೃತ ಸಂಗಮ ಅನ್ನುವ ಸವಿನೆನಪಿನ ರಥವನ್ನು ಅತ್ಯಂತ ಪ್ರೀತಿ ಭಕ್ತಿ ಭಾವದಿಂದ ವೈಭವಭರಿತವಾಗಿ ಎಳೆಯ ಬೇಕೆಂಬ ಸಂಕಲ್ಪವನ್ನು ಹೊಂದಿದ್ದಾರೆ. ಈ ಸಂಸ್ಥೆಯ ಇತಿಹಾಸದಲ್ಲೇ ಇಂದು ಮೊದಲ ಬಾರಿಗೆ ಸಾವಿರಾರು ಹಳೆ ವಿದ್ಯಾರ್ಥಿಗಳು ಒಂದುಗೂಡಿ ಸಂಭ್ರಮಿಸುವ ಶುಭ ಘಳಿಗೆಗೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.
ಕಾಲೇಜಿನ ಇತಿಹಾಸ ದಾಖಲಿಸುವ ಫೊಟೊ ಗ್ಯಾಲರಿ ವಿಶೇಷ ಆಕರ್ಷಣೆ
ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಪ್ರಾರಂಭವಾದ ವರುಷದಿಂದ ಇಂದಿನ ತನಕ ಕಾಲೇಜಿನಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳ ಛಾಯಾಂಕಣ; ಮೊದಲ ತಂಡದಿಂದ ಇಂದಿನ ತನಕ ಕಲಿತು ಹೊರಗೆ ಹೋದ ವಿದ್ಯಾರ್ಥಿಗಳ ಗ್ರೂಪ್ ಫೊಟೊ ವೀಕ್ಷಣೆಗೆ ಅವಕಾಶವಿದೆ. ತಮಗೆ ಫೊಟೊ ಬೇಕಾದಲ್ಲಿ ಫೊಟೊ ಗ್ಯಾಲರಿ ಕೌಂಟ ರ್‌ನಲ್ಲಿ ತಮ್ಮ ಹೆಸರು ವಿಳಾಸ ದಾಖಲಿಸಿ ಮತ್ತೆ ಪಡೆದು ಕೊಳ್ಳುವ ಅವಕಾಶವೂ ಲಭ್ಯವಿದೆ.ಸಾಧನೆಗೈದ ಕೆಲವೊಂದು ಸಾಧಕ ವಿದ್ಯಾರ್ಥಿಗಳ ತಮ್ಮ ಕಾಲೇಜು ದಿನದ ಫೊಟೊಗಳು ಕೂಡ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಒಟ್ಟಿನಲ್ಲಿ ಇದೊಂದು ಹಳೆಯ ನೆನಪುಗಳನ್ನು ನೋಡಿ ಆಸ್ವಾದಿಸುವ ಅಮೃತ ಸಮಯ.ನಮ್ಮ ಕಾಲೇಜಿನಲ್ಲಿ ಲಭ್ಯವಿರುವ ವಾರ್ಷಿಕ ಸಂಚಿಕೆಗಳಿಂದ ತೆಗೆದುಕೊಂಡು ಸ್ಕ್ರೀನ್‌ನಲ್ಲಿ ನೋಡುವ ಅವಕಾಶವನ್ನು ಎಂಜಿಎಂ.ಕಾಲೇಜಿನ ಹಳೆ ವಿದ್ಯಾರ್ಥಿಗಳು ಪರಿಶ್ರಮವಹಿಸಿ ಅಮೃತ ಸಂಗಮ ಸಂದರ್ಭದಲ್ಲಿ ಪ್ರಸ್ತುತ ಪಡಿಸುವ ಪ್ರಯತ್ನ ಮಾಡಿರುವುದು ಅತ್ಯಂತ ಶ್ಲಾಘನೀಯ.
ಲೇಖನ: ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಎಂಜಿಎಂ.ಕಾಲೇಜು, ಉಡುಪಿ