ಅಂಕೋಲಾ : ಕಾರವಾರ ಮೂಲದ ವ್ಯಕ್ತಿಯೋರ್ವರು ಅಮೇರಿಕಾದಲ್ಲಿ ಮರಣ ಹೊಂದಿದ್ದು ವ್ಯಕ್ತಿಯ ಮೃತದೇಹವನ್ನು ತರಿಸಲು ಕುಟುಂಬದ ಸದಸ್ಯರು ಕೇಂದ್ರ ಸಚಿವರ ಮೊರೆ ಹೋಗಿದ್ದಾರೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಕಾರವಾರ ಸದಾಶಿವಗಡದ ಫರ್ನಾಂಡಿಸ್ ಜೊಸೆಫ್ ಮೇಟ್ಸ್ (46) ಮಾರ್ಚ್ 14 ರಂದು ಮೃತಪಟ್ಟಿದ್ದರು.
ಕೇಂದ್ರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ಪುರುಶೋತ್ತಮ ರುಪಾಲಾ ಅಂಕೋಲಾದ ಬೆಳಂಬಾರದ ಬಂದರು ಸ್ಥಳ ವೀಕ್ಷಣೆಗೆಂದು ಆಗಮಿಸಿದ ವೇಳೆ ಭೇಟಿಯಾದ ಮೃತರ ಪತ್ನಿ ಮತ್ತು ಅವರ ಸಹೋದರಿ ರೆನಿಟಾ ಡಿಸಿಲ್ವಾ ಸಚಿವರನ್ನು ಭೇಟಿ ಮಾಡಿ ಮೃತರ ಶವವನ್ನು ಭಾರತಕ್ಕೆ ತರಲು ಸಹಾಯ ಕೋರಿ ಮನವಿಯನ್ನು ಅರ್ಪಿಸಿದರು. ಕೇಂದ್ರ ವಿದೇಶಾಂಗ ಸಚಿವರಿಗೂ ಪತ್ರ ಬರೆದಿದ್ದು ಮೀನುಗಾರಿಕೆಯ ಸಚಿವರು ಮುತುವರ್ಜಿವಹಿಸಿ ಸಹಾಯ ಮಾಡಬೇಕಾಗಿ ವಿನಂತಿಸಿದರು.
ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವ ಪುರುಷೋತ್ತಮ ರುಪಾಲಾ ತಕ್ಷಣ ನೆರವು ನೀಡುವದಾಗಿ ಭರವಸೆಯಿತ್ತರು ಹಾಗೂ ಇಂದೇ ಕೇಂದ್ರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸುವುದಾಗಿ ತಿಳಿಸಿದರು.