ಉಡುಪಿ: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಿಗಲಿರುವ ವಿವಿಧ ಸೌಲಭ್ಯಗಳಿಗೆ ಗ್ರಾ. ಪಂ. ಮೂಲಕವೇ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡುವ “ಅಂತ್ಯೋದಯ’ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲೂ ಜಾರಿಗೆ ತರಲಿದ್ದೇವೆ ಎಂದು ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲಾಖೆಯಿಂದ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಜನಪ್ರತಿನಿಧಿಗಳು ಜನ ಸಾಮಾನ್ಯರಿಗೆ ತಲುಪಿಸಲಿದ್ದಾರೆ. ಜನರು ಈ ಸೌಲಭ್ಯಗಳಿಗೆ ಗ್ರಾ.ಪಂ. ಮೂಲಕವೇ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯನ್ನು ಆರಂಭಿಸಲಿದ್ದೇವೆ. ಇದರಿಂದ ಮಧ್ಯವರ್ತಿಗಳ ಸಮಸ್ಯೆ ತಪ್ಪಲಿದೆ ಹಾಗೂ ಎಲ್ಲರಿಗೂ ಯೋಜನೆಯ ಲಾಭ ಸಿಗಲಿದೆ ಎಂದು ಹೇಳಿದರು.
ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಗಳು ಯಾವ ರೀತಿಯಲ್ಲಿ ಅನುಷ್ಠಾನ ಮಾಡಲಾಗಿದೆ ಎಂಬುದರ ಪ್ರಗತಿ ಪರಿಶೀಲನೆ ಮಾಡಲಾಗಿದೆ. ವಿವಿಧ ಇಲಾಖೆಗಳಿಗೆ ಮೀಸಲಿಟ್ಟ ಅನುದಾನದ ಬಳಕೆ ಆಗುತ್ತಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ ಎಂದರು.
ಅಕ್ರಮದ ತನಿಖೆ
ಇಲಾಖೆಯ ಅಧೀನದ ವಸತಿ ನಿಲಯಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಪೂರೈಕೆ ಮಾಡುತ್ತಿರುವ ಹಾಗೂ ಟೆಂಡರ್ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಸುತ್ತಿದ್ದೇವೆ. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
Related Articles
ಇದನ್ನೂ ಓದಿ:ದೇವರಿಗೇ ಪೊಲೀಸ್ ಸಮವಸ್ತ್ರ! ಕಾಶಿಯ ಕೊತ್ವಾಲ ಬಾಬಾ ಕಾಲ ಭೈರವನಿಗೆ ಖಾಕಿ ಸಮವಸ್ತ್ರ
ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕ್ರೈಸ್ ಅಧೀನದ ಸುಮಾರು 1,500 ಮೆಟ್ರಿಕ್ ಅನಂತರ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆಗೆ ಅನುಕೂಲ ಆಗುವಂತೆ ಕರಾಟೆ ತರಬೇತಿ ನೀಡಲಿದ್ದೇವೆ. ತರಬೇತುದಾರರ ನಿಯೋಜನೆ ಆಗಿದೆ. ಶೀಘ್ರವೇ ತರಬೇತಿ ಆರಂಭಿಸಲಿದ್ದೇವೆ. ವಿದ್ಯಾರ್ಥಿನಿಯರಿಗೆ ಕರಾಟೆ ಅಭ್ಯಾಸದ ಸಮವಸ್ತ್ರವನ್ನು ನೀಡಲಾಗುವುದು ಹೇಳಿದರು.
ಭೋವಿ ಸಮುದಾಯದ ಮುಖಂಡರೊಂದಿಗೆ ಚರ್ಚೆ
ಕಲ್ಲು ಕಡಿಯುವುದನ್ನೇ ಕುಲಕಸುಬು ಮಾಡಿಕೊಂಡಿರುವ ಭೋವಿ ಸಮುದಾಯದವರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಎಲ್ಲ ತಹಶೀಲ್ದಾರ್ ಹಂತದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಅಧ್ಯಯನ ವರದಿಯನ್ನು ಶೀಘ್ರ ಜಿಲ್ಲಾಧಿಕಾರಿಗಳು ಪಡೆದು ಸರಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಸರಕಾರದಿಂದ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.