ಮೈಸೂರು: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸೇವಾ ಮನೋಭಾವ ಮೈಗೂಡಿಸಿ ಕೊಳ್ಳುವ ಮೂಲಕ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಪ ಉಪ ಸಭಾಪತಿ ಮರೀತಿಬ್ಬೇಗೌಡ ಹೇಳಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನ ಎಂಬುದು ಸುವರ್ಣ ಯುಗವಾಗಿದ್ದು, ಈ ಅವಧಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಕೇವಲ ಓದಿಗಷ್ಟೇ ಸೀಮಿತಗೊಂಡರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಓದಿನೊಂದಿಗೆ ಸೇವಾ ಮನೋಭಾವ ನೆಯನ್ನು ರೂಢಿಸಿ ಕೊಂಡು ಸಮಾಜಸೇವೆಗೆ ಮುಂದಾಗಬೇಕಿದ್ದು, ಇದಕ್ಕಾಗಿ ಎನ್‌ಎಸ್‌ಎಸ್ ಉತ್ತಮ ವೇದಿಕೆಯಾಗಿದೆ. ಇದರಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು. ಪಠ್ಯದ ಜತೆಗೆ ವಿದ್ಯಾರ್ಥಿ ಗಳು ತಮಗೆ ಆಸಕ್ತಿ ಇರುವ ಯಾವು ದಾದರೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಶಾಸಕ ವಾಸು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಪ್ರವೃತ್ತಿ ಕ್ಷೀಣಿಸುತ್ತಿದೆ. ಆದರೆ ತಮಗೆ ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು, ಒಂದೊಮ್ಮೆ ಇವರುಗಳನ್ನು ಮರೆತರೆ ಅಂತವರ ಭವಿಷ್ಯ ಉಜ್ವಲವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಂದೆ – ತಾಯಿ, ಗುರು – ಹಿರಿಯರನ್ನು ಗೌರವಿಸುವ ಪ್ರವೃತ್ತಿ ಸದಾ ಕಾಲಕ್ಕೂ ಮೈಗೂಡಿಸಿಕೊಳ್ಳಬೇಕು ಎಂದರು.
ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ದಕ್ಷಿಣ ವಲಯದ ಆರಕ್ಷಕ ಅಧೀಕ್ಷಕಿ ಬಿ.ಟಿ. ಕವಿತಾ, ಕೆಪಿಎಸ್‌ಸಿ ವಿಶ್ರಾಂತ ಸದಸ್ಯ ಎಚ್. ಗೋವಿಂದಯ್ಯ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಲೋಕೇಶ್ ಕುಮಾರ್, ಕಾಲೇಜು ಪ್ರಾಂಶುಪಾಲ ಬಿ.ಟಿ. ವಿಜಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.